Friday, November 21, 2025

ಸತ್ಯ | ನ್ಯಾಯ |ಧರ್ಮ

ಹಾಸನದಲ್ಲಿ ಪ್ಲಾಸ್ಟಿಕ್ ಬಳಕೆ, ಟೇಸ್ಟಿಂಗ್ ಪೌಡರ್ ದುರುಪಯೋಗ – ಅಧಿಕಾರಿಗಳ ದಾಳಿ

ಪಾಲಿಕೆಯ ದಾಳಿಗೆ ಸಿಕ್ಕಿ ಬಿದ್ದ ಬಾರ್-ಹೋಟೆಲ್‌ಗಳಿಗೆ ಕಠಿಣ ಕ್ರಮ, ಎರಡು ಟಿಪ್ಪರ್ ಪ್ಲಾಸ್ಟಿಕ್ ವಶ

ಹಾಸನ : ನಗರದ ಸ್ವಚ್ಛತೆಗೆ ಗಂಭೀರ ಅಡ್ಡಿಯಾಗಿರುವ ಪ್ಲಾಸ್ಟಿಕ್ ಬಳಕೆ ಹಾಗೂ ಆಹಾರದ ಗುಣಮಟ್ಟಕ್ಕೆ ಹಾನಿ ತರುವ ಟೇಸ್ಟಿಂಗ್ ಪೌಡರ್ ಬಳಕೆಯ ವಿರುದ್ಧ ಮಹಾನಗರ ಪಾಲಿಕೆ ಶುಕ್ರವಾರ ನಡೆಸಿದ ದಿಡೀರ್ ದಾಳಿ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿಷೇಧವಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ವಸ್ತುಗಳನ್ನು ಅತಿ ಪ್ರಮಾಣದಲ್ಲಿ ಬಳಸುತ್ತಿರುವ ಬಾರ್ ಅಂಡ್ ರೆಸ್ಟೊರೆಂಟ್‌ಗಳು, ಹೋಟೆಲ್‌ಗಳು, ಕ್ಯಾಂಟೀನ್‌ಗಳು ಮತ್ತು ವೈನ್ಸ್ ಅಂಗಡಿಗಳ ಮೇಲೆ ಈ ಕ್ರಮ ಜರುಗಿತು.ಪ್ರಭಾತದಿಂದಲೇ ಪ್ರಾರಂಭವಾದ ಈ ತಪಾಸಣೆಯಲ್ಲಿ ಪಾಲಿಕೆ ಸಿಬ್ಬಂದಿ ನಗರದೆಲ್ಲೆಡೆ ಹಲವು ವ್ಯಾಪಾರಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಅಚ್ಚರಿಯ ಸಂಗತಿ ಏನೆಂದರೆ! ಎಂಟು ಅಂಗಡಿಗಳಲ್ಲೇ ಎರಡು ಟಿಪ್ಪರ್ ತುಂಬುವಷ್ಟು ಪ್ಲಾಸ್ಟಿಕ್ ಪತ್ತೆಯಾಗಿದ್ದು, ಇದು ನಗರದಲ್ಲಿ ನಿಷೇಧಿತ ವಸ್ತುವಿನ ಬೃಹತ್ ಪ್ರಮಾಣದ ಬಳಕೆಯನ್ನು ಸಾರಿ ಹೇಳುತ್ತಿದ್ದರೂ ಕೆಲವು ಹೋಟೆಲ್ ಮತ್ತು ಬಾರ್‌ಗಳಲ್ಲಿ ಗ್ರಾಹಕರಿಗೆ ನೀಡುವ ನೀರಿಗೂ ಪ್ಲಾಸ್ಟಿಕ್ ಲೋಟ ಬಳಕೆಯಾಗುತ್ತಿರುವುದು ಕಂಡುಬಂದಿದೆ. ಇನ್ನೂ ಕೆಲವು ಕಡೆಗಳಲ್ಲಿ ಆಹಾರದಲ್ಲಿ ರುಚಿ ಹೆಚ್ಚಿಸೋಣ ಎಂಬ ಹೆಸರಿನಲ್ಲಿ ಟೇಸ್ಟಿಂಗ್ ಪೌಡರ್ ಬಳಕೆ ಪತ್ತೆಯಾಗಿದೆ. ಇದು ಮಾನವ ದೇಹದ ಆರೋಗ್ಯಕ್ಕೆ ಹಾನಿಕರ ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಸಂಬಂಧಿತ ಅಂಗಡಿಗಳಿಗೆ ೮,೦೦೦ರವರೆಗೆ ದಂಡ ವಿಧಿಸಿದ್ದು, ಮುಂದಿನ ಸಲ ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದರೆ ಅಂಗಡಿ ಸೀಲ್ ಮಾಡುವವರೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ.

ಪಾಲಿಕೆಯ ಆರೋಗ್ಯ ನಿರೀಕ್ಷಕ ಆದಿಶ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ನಿಷೇಧವಿದ್ದರೂ ನಗರದಲ್ಲಿ ಇನ್ನೂ ಹಲವೆಡೆ ಪ್ಲಾಸ್ಟಿಕ್ ಲೋಟ, ಕವರ್, ಕಪ್ ಮತ್ತು ಇತರ ವಸ್ತುಗಳನ್ನು ಮುಕ್ತವಾಗಿ ಬಳಸಲಾಗುತ್ತಿದೆ. ಇವು ಪರಿಸರಕ್ಕೂ, ನಗರದ ಸ್ವಚ್ಛತೆಗೂ, ಮನುಷ್ಯನ ಆರೋಗ್ಯಕ್ಕೂ ಅಪಾಯ. ನಾವು ಪರಿಶೀಲಿಸಿದ ಕೆಲವು ಅಂಗಡಿಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿತ್ತು. ಪ್ಲಾಸ್ಟಿಕ್ ಬಳಕೆಯನ್ನು ತಕ್ಷಣ ನಿಲ್ಲಿಸಬೇಕು. ಮುಂದಿನ ಸಲ ಇದೇ ತಪ್ಪು ಕಂಡುಬಂದರೆ ಭಾರೀ ದಂಡ ಹಾಗೂ ಅಂಗಡಿ ಸೀಲ್ ಕ್ರಮ ಜರುಗಲಿದೆ ಎಂದಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಚ್ಚಿನ ರೆಸ್ಟೊರೆಂಟ್‌ಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಇದು ಮಕ್ಕಳಿಗೆ, ವೃದ್ಧರಿಗೆ, ರಕ್ತದೊತ್ತಡ, ಅಲರ್ಜಿ ಮೊದಲಾದ ಸಮಸ್ಯೆಗಳಿರುವವರಿಗೆ ಹಾನಿಕರವಾಗಿರುವುದನ್ನು ವೈದ್ಯಕೀಯ ವರದಿಗಳು ಹೇಳುವುದು ಈಗೇನೂ ಹೊಸದಲ್ಲ. ಆದರೂ ಇದರ ನಿಯಂತ್ರಣಕ್ಕೆ ವ್ಯಾಪಾರಸ್ಥರಿಂದ ಸಮರ್ಪಕ ಸ್ಪಂದನೆ ಕಾಣದಿರುವುದು ಪಾಲಿಕೆಗೆ ಕಳವಳ ತಂದಿದೆ. ಪಾಲಿಕೆ ಮುಖ್ಯ ಆರೋಗ್ಯ ನಿರೀಕ್ಷಕರಾದ ಶಶಿರಾಜ ಅರಸ್, ತುಳಸಿ ಪ್ರಸಾದ್, ದೀಪಕ್, ಪ್ರಸಾದ್ ಸೇರಿದಂತೆ ಪಾಲಿಕೆಯ ಅನೇಕ ಸಿಬ್ಬಂದಿಗಳು ಈ ದಾಳಿಯಲ್ಲಿ ಭಾಗವಹಿಸಿದರು.ನಗರದ ಅನೇಕ ಬಡಾವಣೆಗಳಲ್ಲಿ ಈ ಕ್ರಮ ಮುಂದುವರಿಯುವ ಸಾಧ್ಯತೆ ಇದ್ದು, ಇನ್ನೂ ಹಲವು ಅಂಗಡಿಗಳು ಗಮನಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page