Wednesday, November 26, 2025

ಸತ್ಯ | ನ್ಯಾಯ |ಧರ್ಮ

ನಾನು ಎಂ.ಪಿ ಆಗಲು ಡಾ. ಬಿ.ಆರ್. ಅಂಬೇಡ್ಕರ್ ರವರ ಸಂವಿಧಾನವೇ ಕಾರಣ – ಸಂಸದ ಶ್ರೇಯಸ್ ಪಾಟೀಲ್

​ಹಾಸನ: ​ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಇಂದು, ೨೦೨೫ರ ನವೆಂಬರ್ ೨೬, ಬುಧವಾರದಂದು, ಆಯೋಜಿಸಲಾಗಿದ್ದ ೭೬ನೇ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಸನ ಲೋಕಸಭಾ ಸಂಸದರಾದ ಶ್ರೇಯಸ್ ಎಂ. ಪಾಟೀಲ್ ಅವರು ಸಂವಿಧಾನದ ಮಹತ್ವದ ಕುರಿತು ಪ್ರಬಲ ಸಂದೇಶ ನೀಡಿದರು.ಸಂವಿಧಾನವು ಕೇವಲ ಒಂದು ಗ್ರಂಥವಲ್ಲ, ಬದಲಿಗೆ ಭಯಮುಕ್ತ ಬದುಕಿಗೆ ಇರುವ ಏಕೈಕ ಆಧಾರ ಸ್ತಂಭ ಎಂದು ಶ್ರೇಯಸ್ ಪಾಟೀಲ್ ಅವರು ಒತ್ತಿ ಹೇಳಿದರು.

​ಸಂಸದರು ತಮ್ಮ ಭಾಷಣದಲ್ಲಿ, “ಸಾಮಾನ್ಯ ರೈಸ್ ಮಿಲ್ ಹುಡುಗನೊಬ್ಬ ಇಂದು ಲೋಕಸಭೆ ಚುನಾವಣೆಯಲ್ಲಿ ನಿಂತು ಸಂಸದ (MP) ಆಗಲು ಸಾಧ್ಯವಾಗಿದ್ದರೆ, ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಮಾನತೆಯ ಸಂವಿಧಾನವೇ ಕಾರಣ” ಎಂದು ಭಾವಪೂರ್ಣವಾಗಿ ನುಡಿದರು.ಸಂವಿಧಾನ ಪೀಠಿಕೆಯನ್ನು ರಾಷ್ಟ್ರಗೀತೆಯಷ್ಟೇ ಗೌರವದಿಂದ ಕಾಣುವಂತೆ ಕರೆ ನೀಡಿದ ಅವರು, “ಸಂವಿಧಾನ ಪೀಠಿಕೆಯನ್ನು ಕಂಠಪಾಠ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ದೇವರು, ಗುರುಗಳು ಹಾಗೂ ಪೋಷಕರಿಗೆ ನೀಡುವಷ್ಟೇ ಗೌರವವನ್ನು ನಾವು ಸಂವಿಧಾನಕ್ಕೆ ನೀಡಬೇಕು” ಎಂದು ತಿಳಿಸಿದರು.

​ಸಮಾಜವನ್ನು ಕಟ್ಟುವ ಹೊಣೆಗಾರಿಕೆ ಇಂದಿನ ಯುವಜನತೆಯ ಮೇಲಿದ್ದು, ಸಂವಿಧಾನದ ಆಶಯಗಳನ್ನು ಅರಿತುಕೊಳ್ಳಬೇಕು. ” ಊಟ, ತಿಂಡಿ, ನಿದ್ರೆ ಇವಕ್ಕಿಂತ ಮುಖ್ಯವಾಗಿ ಸಂವಿಧಾನದ ಮಹತ್ವವು ಅತಿ ಮುಖ್ಯವಾಗಿದ್ದು, ಸಂವಿಧಾನದ ರಕ್ಷಣೆಯೇ ನಮ್ಮೆಲ್ಲರ ಪ್ರಥಮ ಆದ್ಯತೆಯಾಗಲಿ” ಎಂದು ಸಂಸದ ಶ್ರೇಯಸ್ ಎಂ. ಪಾಟೀಲ್ ಅವರು ಯುವಜನತೆಗೆ ಕರೆ ನೀಡಿದರು.ವೇದಿಕೆಯಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ, ಹೂಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page