Friday, November 28, 2025

ಸತ್ಯ | ನ್ಯಾಯ |ಧರ್ಮ

ಅಮೆರಿಕಾದ ವೈಟ್‌ ಹೌಸ್‌ ಬಳಿ ಅಫ್ಘನ್‌ ಯುವಕನಿಂದ ದಾಳಿ!: ಇದು ಖಂಡಿತ ಭಯೋತ್ಪಾದಕ ದಾಳಿ ಎಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ, ಅಧ್ಯಕ್ಷರ ಅಧಿಕೃತ ನಿವಾಸವಾದ ವೈಟ್‌ಹೌಸ್ ಸಮೀಪದಲ್ಲಿಯೇ ಬಿಗಿಯಾದ ಭದ್ರತೆಯ ನಡುವೆಯೂ ಗುಂಡಿನ ದಾಳಿ ನಡೆದಿದೆ. ಅಮೆರಿಕಾಕ್ಕೆ ವಲಸೆ ಬಂದಿದ್ದ ಅಫ್ಘಾನಿಸ್ತಾನದ ಯುವಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ವೆಸ್ಟ್ ವರ್ಜೀನಿಯಾ ನ್ಯಾಷನಲ್ ಗಾರ್ಡ್ ಯೋಧರಾದ ಸಾರಾ ಬೆಕ್‌ಸ್ಟ್ರಾಮ್ (20) ಮತ್ತು ಆಂಡ್ರೂ ವೂಲ್ಫ್ (24) ಗಂಭೀರವಾಗಿ ಗಾಯಗೊಂಡಿದ್ದಾರೆ. ಯೋಧರೊಬ್ಬರು ನಡೆಸಿದ ಪ್ರತ್ಯುತ್ತರ ದಾಳಿಯಲ್ಲಿ ಸದರಿ ಯುವಕನು ಸಹ ಗಾಯಗೊಂಡಿದ್ದು, ಆತನನ್ನು ಬಂಧಿಸಲಾಗಿದೆ.

ಪ್ರತಿ ವರ್ಷ ಶ್ವೇತಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ ಕೃತಜ್ಞತಾರ್ಪಣ ದಿನದ ಹಿಂದಿನ ದಿನವೇ ಈ ಗುಂಡಿನ ದಾಳಿ ನಡೆದಿರುವುದು ಮತ್ತು ಇಬ್ಬರು ಯೋಧರು ಗಾಯಗೊಂಡಿರುವುದು ತೀವ್ರ ಸಂಚಲನ ಮೂಡಿಸಿದೆ. ಈ ಘಟನೆಯ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಖಂಡಿತ ಭಯೋತ್ಪಾದಕ ದಾಳಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜೋ ಬೈಡನ್ ಆಡಳಿತಾವಧಿಯಲ್ಲಿ ಅಮೆರಿಕಾಕ್ಕೆ ವಲಸೆ ಬಂದಿದ್ದ ಅಫ್ಘಾನ್ ಪ್ರಜೆಗಳ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಫ್ಘಾನ್ ನಾಗರಿಕರ ವಲಸೆ (ಇಮಿಗ್ರೇಷನ್) ಅರ್ಜಿಗಳನ್ನು ತಕ್ಷಣವೇ ರದ್ದುಪಡಿಸುವಂತೆ ಸೂಚಿಸಿದ್ದಾರೆ. “ಇದು ಇಡೀ ಅಮೆರಿಕಾದ ವಿರುದ್ಧ ನಡೆದ ಅಪರಾಧ” ಎಂದು ಟ್ರಂಪ್ ಹೇಳಿದ್ದು, “ತಮ್ಮ ದೇಶವನ್ನು ಪ್ರೀತಿಸದವರು ತಮಗೆ ಎಷ್ಟು ಮಾತ್ರವೂ ಬೇಕಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಶ್ವೇತಭವನದಲ್ಲಿ ನಡೆಯಲಿರುವ ‘ಥ್ಯಾಂಕ್ಸ್ ಗಿವಿಂಗ್ ಡೇ’ ಗಾಗಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿತ್ತು. ಟ್ರಂಪ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಜನರು ಪ್ರತಿಭಟನೆ ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂಬ ಅನುಮಾನದ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಇತರೆ ರಾಜ್ಯಗಳಿಂದ ನ್ಯಾಷನಲ್ ಗಾರ್ಡ್ ಸಿಬ್ಬಂದಿಯನ್ನು ಕರೆಸಲಾಗಿತ್ತು.

ಬುಧವಾರ ಮಧ್ಯಾಹ್ನ ಶ್ವೇತಭವನದ ಸಮೀಪದ ಮೆಟ್ರೋ ನಿಲ್ದಾಣದ ಬಳಿ ಕರ್ತವ್ಯದಲ್ಲಿದ್ದ ವೆಸ್ಟ್ ವರ್ಜೀನಿಯಾ ನ್ಯಾಷನಲ್ ಗಾರ್ಡ್ ಸಿಬ್ಬಂದಿಯ ಮೇಲೆ ಒಬ್ಬ ಯುವಕ ಪಾಯಿಂಟ್ .357 ಸ್ಮಿತ್ ಅಂಡ್ ವೆಸನ್ ರಿವಾಲ್ವರ್ ನಿಂದ ಹಠಾತ್ತಾಗಿ ಗುಂಡು ಹಾರಿಸಿದ್ದಾನೆ. ಒಟ್ಟು ಮೂವರು ಯೋಧರ ಮೇಲೆ ಗುಂಡು ಹಾರಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡರೆ, ಇನ್ನೊಬ್ಬ ಯೋಧನಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.

ಆ ಯೋಧನು ತಕ್ಷಣವೇ ಪ್ರತಿಕ್ರಿಯಿಸಿ, ಅಫ್ಘಾನ್ ಯುವಕನ ಮೇಲೆ ಪ್ರತ್ಯುತ್ತರ ಗುಂಡಿನ ದಾಳಿ ಪ್ರಾರಂಭಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರತ್ಯುತ್ತರ ಗುಂಡಿನ ದಾಳಿಯಲ್ಲಿ ಗಾಯಗೊಂಡ ಅಫ್ಘಾನ್ ಯುವಕನು ಭದ್ರತಾ ಸಿಬ್ಬಂದಿಯ ಕೈಗೆ ಜೀವಂತವಾಗಿ ಸೆರೆ ಸಿಕ್ಕಿದ್ದಾನೆ. ಆತನನ್ನು ರಹಮಾನುಲ್ಲಾ ಲಖನ್ವಾಲಾ (29) ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಸಂಬಂಧಗಳು ಗಟ್ಟಿಯಾಗುತ್ತಿವೆ. ತಾಲಿಬಾನ್ ಆಡಳಿತಗಾರರು ಭಾರತಕ್ಕೆ ಸ್ನೇಹ ಹಸ್ತ ಚಾಚಿ, ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಸರ್ಕಾರ ಮತ್ತು ತಾಲಿಬಾನ್ ಆಡಳಿತಗಾರರ ನಡುವೆ ಸಂಘರ್ಷ ಹೆಚ್ಚಿದ್ದು, ಅಫ್ಘಾನ್-ಪಾಕ್ ಗಡಿಯಲ್ಲಿ ಘರ್ಷಣೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಫ್ಘಾನ್ ಯುವಕನೊಬ್ಬ ಅಮೆರಿಕಾದಲ್ಲಿ ಗುಂಡಿನ ದಾಳಿ ನಡೆಸಿರುವುದು ಮತ್ತು ಅಧ್ಯಕ್ಷ ಟ್ರಂಪ್ ಅಫ್ಘಾನಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ಈ ಘಟನೆಗೂ ತಮ್ಮ ದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಾಲಿಬಾನ್‌ಗಳು ಸ್ಪಷ್ಟಪಡಿಸಿದ್ದು, ತಮ್ಮನ್ನು ಅಪಖ್ಯಾತಿಗೆ ಗುರಿಪಡಿಸಲು ಪಾಕ್ ಸರ್ಕಾರವು ಷಡ್ಯಂತ್ರ ನಡೆಸುತ್ತಿದೆ. ಈ ಘಟನೆಯ ಹಿಂದೆ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡ ಇರಬಹುದು ಎಂದು ತಾಲಿಬಾನ್‌ಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತಮ್ಮ ವೈಯಕ್ತಿಕ ವ್ಯಾಪಾರ ಹಿತಾಸಕ್ತಿಗಳಿಗಾಗಿ ಪಾಕಿಸ್ತಾನದ ಪರ ಒಲವು ತೋರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅವರು ಪ್ರತಿ ವಿಷಯದಲ್ಲೂ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ. ಪಾಕಿಸ್ತಾನದ ಪ್ರತಿಸ್ಪರ್ಧಿ ಅಫ್ಘಾನಿಸ್ತಾನದ ಮೇಲೆ ಟ್ರಂಪ್ ಮತ್ತೆ ದಾಳಿ ನಡೆಸಲು ತಯಾರಿ ನಡೆಸುತ್ತಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಗುಂಡಿನ ದಾಳಿಯನ್ನು ನೆಪವಾಗಿಟ್ಟುಕೊಂಡು ಅಫ್ಘಾನ್ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದರೂ ಆಶ್ಚರ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ರಹಮಾನುಲ್ಲಾ ಲಖನ್ವಾಲಾ ಅಫ್ಘಾನಿಸ್ತಾನದ ಪ್ರಜೆ. ಅಲ್ಲೇ ಹುಟ್ಟಿ ಬೆಳೆದ ಆತ, 2021ರಲ್ಲಿ ಜೋ ಬೈಡನ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ವಿಶೇಷ ಕರುಣಾ ಯೋಜನೆ ಅಡಿಯಲ್ಲಿ ತನ್ನ ಕುಟುಂಬದೊಂದಿಗೆ ಅಮೆರಿಕಾಕ್ಕೆ ಆಗಮಿಸಿದ್ದ. ಆ ಸಮಯದಲ್ಲಿ ಅಮೆರಿಕಾ ಸೇನೆಯು ಅಫ್ಘಾನಿಸ್ತಾನದಿಂದ ಉಪಸಂಹರಿಸಿಕೊಂಡಿತ್ತು.

ತಾಲಿಬಾನ್‌ಗಳಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಸಾವಿರಾರು ಅಫ್ಘಾನ್ ಪ್ರಜೆಗಳು ನಿರಾಶ್ರಿತರ ರೂಪದಲ್ಲಿ ಅಮೆರಿಕಾಕ್ಕೆ ಬಂದಿದ್ದರು. ಜೋ ಬೈಡನ್ ಸರ್ಕಾರ ಅವರನ್ನು ಸ್ವಾಗತಿಸಿತ್ತು. ಅಂದಾಜು 76,000 ಅಫ್ಘಾನ್ ನಾಗರಿಕರು ಅಮೆರಿಕಾಕ್ಕೆ ವಲಸೆ ಬಂದಿದ್ದಾರೆ. ಇವರೆಲ್ಲರೂ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಕೆಲವರು ಅಮೆರಿಕಾ ಸೇನೆಯಲ್ಲಿ ಅನುವಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ರಹಮಾನುಲ್ಲಾ ತನ್ನ ಪತ್ನಿ ಮತ್ತು ಐವರು ಮಕ್ಕಳೊಂದಿಗೆ ವಾಷಿಂಗ್ಟನ್ ರಾಜ್ಯದ ಬೆಲ್ಲಿಂಗ್‌ಹ್ಯಾಮ್ ಎಂಬ ಪ್ರದೇಶದಲ್ಲಿ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ಆತ ರಾಜಧಾನಿಗೆ ಬಂದು ಯೋಧರ ಮೇಲೆ ಏಕೆ ಗುಂಡು ಹಾರಿಸಿದ ಎಂಬುದು ಇನ್ನೂ ನಿಗೂಢವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page