Friday, November 28, 2025

ಸತ್ಯ | ನ್ಯಾಯ |ಧರ್ಮ

ದೆಹಲಿ ವಾಯು ಮಾಲಿನ್ಯ | ನಮ್ಮ ಬಳಿ ಮಂತ್ರದಂಡವಿಲ್ಲ ಎಂದ ‌ ಸುಪ್ರೀಂ ಕೋರ್ಟ್‌

ದೆಹಲಿ: ದೆಹಲಿಯಲ್ಲಿನ ವಾಯು ಮಾಲಿನ್ಯದ ಬಿಕ್ಕಟ್ಟನ್ನು ಪರಿಹರಿಸಲು “ಯಾವುದಾದರೂ ಮಂತ್ರದಂಡವಿದೆಯೇ?” ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ. ಸೂರ್ಯಕಾಂತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯವನ್ನು ಪರಿಹರಿಸುವಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಕೆಲವು ಮಿತಿಗಳಿವೆ ಎಂದು ಅವರು ಹೇಳಿದರು.

ದೆಹಲಿ ವಾಯು ಮಾಲಿನ್ಯದ ಕುರಿತು ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಗುರುವಾರ ಸಿಜೆಐ ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಜಾಯ್ ಮಾಲ್ಯ ಬಾಗ್ಚಿ ಅವರಿದ್ದ ಪೀಠದ ಮುಂದೆ ಅಮಿಕಸ್ ಕ್ಯೂರಿ ಅಪರಾಜಿತಾ ಅವರು ಪ್ರಸ್ತಾಪಿಸಿದರು.

ದೆಹಲಿ ಮತ್ತು ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ವ್ಯಾಪ್ತಿಯಲ್ಲಿ ಮಾಲಿನ್ಯದ ಪರಿಸ್ಥಿತಿ ಆತಂಕಕಾರಿಯಾಗಿದೆ ಮತ್ತು ಇದು ಆರೋಗ್ಯ ತುರ್ತು ಪರಿಸ್ಥಿತಿಯಂತಹ ಸ್ಥಿತಿ ಎಂದು ಅವರು ವರದಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ನ್ಯಾ. ಸೂರ್ಯಕಾಂತ್, “ದೆಹಲಿ-ಎನ್‌ಸಿಆರ್‌ನಲ್ಲಿ ಅಪಾಯಕಾರಿ ಪರಿಸ್ಥಿತಿ ಇದೆ ಎಂದು ನಮಗೂ ತಿಳಿದಿದೆ. ಸಮಸ್ಯೆ ಪರಿಹಾರಕ್ಕೆ ನ್ಯಾಯಾಂಗ ವ್ಯವಸ್ಥೆ ಯಾವುದಾದರೂ ಮಂತ್ರದಂಡ ಪ್ರಯೋಗಿಸುತ್ತದೆ ಎಂದು ಭಾವಿಸಬಾರದು. ಶುದ್ಧ ಗಾಳಿಯನ್ನು ಜನರಿಗೆ ಒದಗಿಸಲು ಯಾವ ಮಾರ್ಗದರ್ಶನಗಳನ್ನು ನೀಡಬಹುದು ಎಂದು ತಿಳಿಸಿರಿ.

ವಾಯು ಮಾಲಿನ್ಯಕ್ಕೆ ಅನೇಕ ಕಾರಣಗಳಿವೆ. ಮಾಲಿನ್ಯ ನಿಯಂತ್ರಣಕ್ಕೆ ಹಿಂದೆ ಹಲವು ಸಮಿತಿಗಳನ್ನು ರಚಿಸಲಾಗಿದೆ. ಆದರೆ, ನಿರ್ಧಾರಗಳು ಕೇವಲ ಕಾಗದಗಳಿಗೆ ಮಾತ್ರ ಸೀಮಿತವಾಗಿವೆ. ಕಠಿಣ ದೈನಂದಿನ ಮೇಲ್ವಿಚಾರಣೆಯಿಂದ ಮಾತ್ರ ಈ ಪರಿಸ್ಥಿತಿ ಸುಧಾರಿಸುತ್ತದೆ,” ಎಂದು ಅಭಿಪ್ರಾಯಪಟ್ಟರು.

ಕ್ರಿಯಾ ಯೋಜನೆಯ ಭಾಗವಾಗಿ ನಿರ್ಬಂಧಗಳನ್ನು ಜಾರಿಗೊಳಿಸುವ ವಾದವನ್ನು ನ್ಯಾಯಾಲಯವು ತಳ್ಳಿಹಾಕಿತು. ಇದಕ್ಕೆ ದೀರ್ಘಕಾಲೀನ ಪರಿಹಾರದ ಅಗತ್ಯವಿದೆ ಎಂದು ಹೇಳಿತು.

“ಸರ್ಕಾರವು ರಚಿಸಿದ ಸಮಿತಿಗಳು ಮಾಡಿದ ಶಿಫಾರಸುಗಳು ಯಾವುವು? ತಕ್ಷಣದ ಪರಿಣಾಮ ಬೀರುವ ಕ್ರಮಗಳು ಯಾವುವು ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಕಡತಗಳಲ್ಲಿ ಉಳಿದಿರುವ ಆದೇಶಗಳು ಪುನರಾವರ್ತನೆಯಾಗದಂತೆ ತಡೆಯಲು ಈ ವಿಷಯವನ್ನು ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ,” ಎಂದು ನ್ಯಾಯಪೀಠ ಹೇಳಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page