Monday, December 1, 2025

ಸತ್ಯ | ನ್ಯಾಯ |ಧರ್ಮ

ಒಕ್ಕಲಿಗರ ಇನ್ನೊಂದು ಮಠ ಕಟ್ಟಿದ್ಯಾರು? ಸ್ವಾಮೀಜಿಗಳು ಬೀದಿಗಿಳಿಯದಿದ್ದರೆ ಗೌಡರು ಸಿಎಂ ಆಗ್ತಿದ್ರಾ? ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಠಾಧೀಶರ ಮಧ್ಯಪ್ರವೇಶದ ವಿಷಯವು ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ಜಿದ್ದಾಜಿದ್ದಿನ ವಾಕ್ಸಮರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಕುರ್ಚಿ ವಿಚಾರದಲ್ಲಿ ತಮ್ಮ ಪರವಾಗಿ ಧ್ವನಿ ಎತ್ತಿದ ಒಕ್ಕಲಿಗ ಸ್ವಾಮೀಜಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕುಮಾರಸ್ವಾಮಿಯವರಿಗೆ, ಡಿ.ಕೆ. ಶಿವಕುಮಾರ್ ಅವರು ಇತಿಹಾಸದ ಪುಟಗಳನ್ನು ನೆನಪಿಸುವ ಮೂಲಕ ತೀಕ್ಷ್ಣ ತಿರುಗೇಟು ನೀಡಿದರು.

ಒಕ್ಕಲಿಗರ ಎರಡನೇ ಮಠ ಹೇಗೆ ಸ್ಥಾಪನೆಯಾಯಿತು? “ಅಂದು ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡದಿದ್ದರೆ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿತ್ತೇ?” ಎಂದು ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿಯವರಿಗೆ ನೇರ ಪ್ರಶ್ನೆ ಹಾಕುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿ, ಕುಮಾರಸ್ವಾಮಿಯವರ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದರು:

“ಪಾಪ, ಕುಮಾರಣ್ಣನಿಗೆ ಇತಿಹಾಸ ಮರೆತುಹೋದಂತಿದೆ. ಒಕ್ಕಲಿಗರ ಎರಡನೇ ಮಠ ಹೇಗೆ ಆಯಿತು? ಅದನ್ನು ಕಟ್ಟಿದವರು ಯಾರು ಎಂಬುದು ಅವರಿಗೆ ಗೊತ್ತಿಲ್ಲವೇ? ಅಂದು ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ಏನಾಗುತ್ತಿತ್ತು? ದೇವೇಗೌಡರ ಪರವಾಗಿ ಅಂದು ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡಿರಲಿಲ್ಲವೇ?” ಎಂದು ಪ್ರಶ್ನಿಸುವ ಮೂಲಕ ಗೌಡರ ಕುಟುಂಬಕ್ಕೆ ಮಠಾಧೀಶರ ಋಣವನ್ನು ನೆನಪಿಸಿದರು.

ಕೇವಲ ದೇವೇಗೌಡರ ವಿಚಾರದಲ್ಲಿ ಮಾತ್ರವಲ್ಲ, ಡಿ.ವಿ. ಸದಾನಂದ ಗೌಡರಿಗೆ ಮುಖ್ಯಮಂತ್ರಿ ಸ್ಥಾನದಿಂದ ತೊಂದರೆಯಾದಾಗಲೂ ಸ್ವಾಮೀಜಿಗಳು ಸುಮ್ಮನೆ ಕೂರಲಿಲ್ಲ. ಸಮುದಾಯದ ನಾಯಕರಿಗೆ ಅನ್ಯಾಯವಾದಾಗ ಅಥವಾ ನಿರ್ಣಾಯಕ ಘಟ್ಟಗಳಲ್ಲಿ ಮಠಾಧೀಶರು ಮಾತನಾಡುವುದು ಸಹಜ. ಇದರಲ್ಲಿ ತಪ್ಪೇನಿದೆ ಎಂದು ಡಿ.ಕೆ.ಶಿ ಸಮರ್ಥಿಸಿಕೊಂಡರು.

“ನಾನು ಸ್ವಾಮೀಜಿಗಳ ಬೆಂಬಲ ಕೇಳಿಲ್ಲ” ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ನಾನೇನು ಸ್ವಾಮೀಜಿಗಳ ಬಳಿ ಹೋಗಿ ಅರ್ಜಿ ಹಾಕಿದ್ದೇನಾ? ನಾನೂ ಕೂಡ ಯಾರ ಬೆಂಬಲವನ್ನೂ ಕೇಳಿಲ್ಲ. ಬಾಳೆಹೊನ್ನೂರು ಶ್ರೀಗಳು, ಶ್ರೀಶೈಲ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ನನ್ನ ಬಗ್ಗೆ ಪ್ರೀತಿ ಅಭಿಮಾನದಿಂದ ಮಾತನಾಡಿದ್ದಾರೆ. ಅವರು ಪ್ರೀತಿಯಿಂದ ಆಶೀರ್ವಾದ ಮಾಡಿದರೆ, ಮಾತನಾಡಿದರೆ ಅದನ್ನು ಬೇಡ ಎನ್ನಲು ಸಾಧ್ಯವೇ ಅಥವಾ ಅದು ತಪ್ಪು ಎಂದು ಹೇಳಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

ಬೇರೆ ಸಂದರ್ಭಗಳಲ್ಲಿ ಸ್ವಾಮೀಜಿಗಳು ಮಾತನಾಡಿದಾಗ ನಾನು ಎಂದು ಕೂಡ ಬೇಸರ ಮಾಡಿಕೊಂಡಿಲ್ಲ. ಈಗ ನನ್ನ ಪರವಾಗಿ ಮಾತನಾಡಿದ ತಕ್ಷಣ ಕುಮಾರಸ್ವಾಮಿಯವರಿಗೆ ಯಾಕೆ ಇಷ್ಟು ಅಸಮಾಧಾನ ಎಂದು ಡಿ.ಕೆ.ಶಿ ಚಾಟಿ ಬೀಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page