Saturday, December 6, 2025

ಸತ್ಯ | ನ್ಯಾಯ |ಧರ್ಮ

ತೆರಿಗೆ ಸಂಗ್ರಹ ಶೇ.100ರಷ್ಟು ಸಾಧಿಸಿ: ವಾಣಿಜ್ಯ ತೆರಿಗೆ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ತೆರಿಗೆ ಸಂಗ್ರಹ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ವಾಣಿಜ್ಯ ತೆರಿಗೆ ಇಲಾಖೆಗೆ 2025-26 ನೇ ಹಣಕಾಸು ಸಾಲಿನಲ್ಲಿ ರೂ. 1,20,000 ಕೋಟಿ ಗುರಿಯನ್ನು ನಿಗದಿಪಡಿಸಲಾಗಿದೆ.

ನವೆಂಬರ್ ಅಂತ್ಯದವರೆಗೆ ನಿಗದಿಪಡಿಸಲಾದ ರೂ. 80 ಸಾವಿರ ಕೋಟಿ ಗುರಿಯಲ್ಲಿ ರೂ. 72,131 ಕೋಟಿ ನಿವ್ವಳ ಸಂಗ್ರಹ ಮಾಡಲಾಗಿದ್ದು, ಶೇ. 90ರಷ್ಟು ಸಾಧನೆ ಮಾಡಿದೆ. ಈ ಸಂಗ್ರಹದಲ್ಲಿ ಜಿಎಸ್‌ಟಿ (GST) ರೂ. 53,522 ಕೋಟಿ, ಕೆಎಸ್‌ಟಿ (KST) ರೂ. 17,595 ಕೋಟಿ ಮತ್ತು ವೃತ್ತಿ ತೆರಿಗೆ ರೂ. 1,014 ಕೋಟಿ ಸೇರಿದೆ.

ಆರಂಭದ ಐದು ತಿಂಗಳಲ್ಲಿ (ಏಪ್ರಿಲ್‌ನಿಂದ ಆಗಸ್ಟ್‌ವರೆಗೆ) ಶೇ. 12ರಷ್ಟು ಬೆಳವಣಿಗೆ ದರ ಸಾಧಿಸಲಾಗಿತ್ತು. ಆದರೆ, ಜಿಎಸ್‌ಟಿ ದರಗಳಲ್ಲಿನ ಬದಲಾವಣೆ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಕಳೆದ ಮೂರು ತಿಂಗಳಲ್ಲಿ ಈ ಬೆಳವಣಿಗೆ ಕೇವಲ ಶೇ. 3ರಷ್ಟು ಮಾತ್ರ ಸಾಧ್ಯವಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ ಅವರು, ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಶೇ. 100ರಷ್ಟು ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ತೆರಿಗೆ ತಪ್ಪಿಸಲು ಯಾವುದೇ ಅವಕಾಶ ಇಲ್ಲದಂತೆ ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸಲು ಹಾಗೂ ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ಬಳಸಿಕೊಂಡು, ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಿ, ಅನಾಲಿಸಿಸ್ ವಿಭಾಗವನ್ನು ಬಲಪಡಿಸಲು ಸೂಚಿಸಲಾಯಿತು. ಇದಲ್ಲದೆ, ಬೋಗಸ್ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪ್ರಕರಣಗಳ ಮೇಲೆ ನಿಗಾ ಇರಿಸಿ ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಆದೇಶ ನೀಡಿದರು.

ನವೆಂಬರ್ ಅಂತ್ಯದವರೆಗೆ ಸುಮಾರು 13 ಸಾವಿರ ತಪಾಸಣೆಗಳನ್ನು ಮಾಡಲಾಗಿದ್ದು, ಈ ತಪಾಸಣೆಯಿಂದ ರೂ. 3,183 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಇನ್ನು, ಅಬಕಾರಿ ತೆರಿಗೆ ಇಲಾಖೆಯು 2025-26 ನೇ ಹಣಕಾಸು ಸಾಲಿನಲ್ಲಿ ನಿಗದಿಪಡಿಸಲಾದ ರೂ. 43,000 ಕೋಟಿ ಗುರಿಯ ಪೈಕಿ ನವೆಂಬರ್‌ ತನಕ ರೂ. 26,215 ಕೋಟಿ ಸಂಗ್ರಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ. 10.46ರಷ್ಟು ಬೆಳವಣಿಗೆ ದರವನ್ನು ಸಾಧಿಸಲಾಗಿದೆ. ನಿಗದಿತ ಗುರಿಯನ್ನು ಸಾಧಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page