Monday, December 8, 2025

ಸತ್ಯ | ನ್ಯಾಯ |ಧರ್ಮ

ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ 550 ಮಂದಿಯ ಬಂಧನ – ಸಚಿವ ಮುನಿಯಪ್ಪ

ಬೆಳಗಾವಿ : ಅನ್ನಭಾಗ್ಯ (Annabhagya) ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ (Sale) ಸಂಬಂಧಿಸಿದಂತೆ ರಾಜ್ಯಾದ್ಯಂತ 570 ಮಂದಿಯನ್ನು ಬಂಧಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ. ಎಚ್. ಮುನಿಯಪ್ಪ (KH Muniyappa) ತಿಳಿಸಿದರು. ಸುವರ್ಣಸೌಧದದ ವಿಧಾನ ಪರಿಷತ್‌ನಲ್ಲಿ ಸದಸ್ಯ ಸಿ. ಟಿ ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಸಚಿವರು ಮಾತನಾಡಿದರು. ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 29603.15 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, 314 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಯಾದಗಿರಿ ಜಿಲ್ಲೆಯಲ್ಲಿ ಆಹಾರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನ್ಯ ಇಲಾಖೆಯ ಅಧಿಕಾರಿಗಳನ್ನು ಇಲಾಖೆ ಕರ್ತ್ಯವ್ಯದಿಂದ ಬಿಡುಗಡೆಗೊಳಿಸಲಾಗಿದೆ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೆ.ಎಫ್.ಸಿ.ಎಸ್.ಸಿ. ಗೋದಾಮು ಅಮಾನತ್ತುಗೊಳಿಸಲಾಗಿರುತ್ತದೆ. ಇನ್ನು ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಸಿಬ್ಬಂದಿಗೆ ಕಾಲ ಕಾಲಕ್ಕೆ ಮೇಲ್ವಿಚಾರಣೆ ಮಾಡುವಂತೆ ನಿರ್ದೇಶನ ನೀಡಿ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಪಡಿತರ ಚೀಟಿದಾರರು ಪಡಿತರ ಅಕ್ಕಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಗಳು ಕಂಡುಬಂದಲ್ಲಿ ಸದರಿ ಪಡಿತರ ಚೀಟಿಗಳನ್ನು ರದ್ದುಪಡಿಸಿ ಅಂತವರ ವಿರುದ್ಧ ನಿಯಾಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ಪರಿಷತ್‌ನಲ್ಲಿ ತಿಳಿಸಿದ ಸಚಿವ ಮುನಿಯಪ್ಪ ಅವರು ನ್ಯಾಯಬೆಲೆ ಅಂಗಡಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ವಿಶೇಷ ಜಾಗೃತಿ ಸಮಿತಿಗಳನ್ನು ರಚಿಸಿ ಪಡಿತರ ವಿತರಣೆಯನ್ನು ಪರಿಶೀಲಿಸಲಾಗುತ್ತಿದೆ ಎಂದರು.ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ‘ಆಹಾರ ಅದಾಲತ್’ಗಳನ್ನು ನಡೆಸುವ ಮೂಲಕ ಪಡಿತರ ವಿತರಣೆಯಲ್ಲಿನ ಲೋಪಗಳನ್ನು ಸರಿಪಡಿಸಲಾಗುತ್ತಿದೆ ಹಾಗೂ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ರಚಿಸಲಾಗಿರುವ ‘ಆಹಾರ ಜಾಗೃತ ದಳ’ವು ನಿರಂತರವಾಗಿ ಅನಿರೀಕ್ಷಿತ ದಾಳಿಗಳನ್ನು ನಡೆಸುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕುತ್ತಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು. 

Related Articles

ಇತ್ತೀಚಿನ ಸುದ್ದಿಗಳು

You cannot copy content of this page