Tuesday, December 16, 2025

ಸತ್ಯ | ನ್ಯಾಯ |ಧರ್ಮ

ಉತ್ತರ ಪ್ರದೇಶದಲ್ಲಿ ದಟ್ಟ ಮಂಜಿನ ಕರಾಳ ನೃತ್ಯ: ಸರಣಿ ರಸ್ತೆ ಅಪಘಾತಗಳಿಗೆ 23 ಬಲಿ

ಲಕ್ನೋ: ಉತ್ತರ ಪ್ರದೇಶದಾದ್ಯಂತ ಆವರಿಸಿರುವ ದಟ್ಟ ಮಂಜಿನಿಂದಾಗಿ ಸಂಭವಿಸಿದ ಸರಣಿ ರಸ್ತೆ ಅಪಘಾತಗಳಲ್ಲಿ ಕನಿಷ್ಠ ಇಪ್ಪತ್ತಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ.

ಮಥುರಾ ಜಿಲ್ಲೆಯ ಬಲದೇವ್ ಪ್ರದೇಶದ ಸಮೀಪ ಮಂಗಳವಾರ ಮುಂಜಾನೆ ದಟ್ಟ ಮಂಜಿನ ನಡುವೆ ಅನೇಕ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಂಜಾನೆ ಸುಮಾರು 3:30 ಕ್ಕೆ ಸಂಭವಿಸಿದ ಈ ಅಪಘಾತದಲ್ಲಿ ಏಳು ಬಸ್‌ಗಳು ಮತ್ತು ಎರಡು ಕಾರುಗಳು ಭಾಗಿಯಾಗಿದ್ದವು. ಡಿಕ್ಕಿಯ ನಂತರ ವಾಹನಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಜನರು ಒಳಗೆ ಸಿಲುಕಿಕೊಂಡರು ಮತ್ತು ಬಸ್‌ಗಳಲ್ಲಿದ್ದ ಕೆಲವು ಪ್ರಯಾಣಿಕರು ಬೆಂಕಿಗೆ ಆಹುತಿಯಾಗಿ ಸಜೀವ ದಹನವಾಗಿದ್ದಾರೆ.

ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಹಲವಾರು ಗಂಟೆಗಳ ಕಾಲ ಶ್ರಮಿಸಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಮಥುರಾ ವಿಭಾಗೀಯ ಕಮಿಷನರ್ ಶೈಲೇಂದ್ರ ಕುಮಾರ್ ಸಿಂಗ್ ಅವರು ಇದುವರೆಗೆ ನಾಲ್ಕು ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ದೃಶ್ಯಗೋಚರತೆ ಬಹುತೇಕ ಶೂನ್ಯವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಥುರಾ ಮತ್ತು ಬಲದೇವ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಗ್ರಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳಲ್ಲಿ ಅನೇಕರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಜಿಲ್ಲಾಡಳಿತವು ಘಟನೆಯ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಇದೇ ದಟ್ಟ ಮಂಜಿನಿಂದಾಗಿ ಉನ್ನಾವೋ ಜಿಲ್ಲೆಯ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯ ಬಂಗಾರಮೌ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ವಾಹನವೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವಿಗೀಡಾಗಿದ್ದಾರೆ.

ಇನ್ನೊಂದೆಡೆ ಸೋಮವಾರ ಮಧ್ಯರಾತ್ರಿ ಸಂತ ಕಬೀರನಗರ ಜಿಲ್ಲೆಯಲ್ಲಿ ಪ್ರಯಾಣಿಕರಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಸೋಮವಾರ ತಡರಾತ್ರಿ ಮೀರತ್ ಜಿಲ್ಲೆಯಲ್ಲಿ ದಟ್ಟ ಮಂಜಿನ ನಡುವೆ ಇಬ್ಬರು ಪೊಲೀಸ್ ಕಾನ್ಸ್ಟೆಬಲ್‌ಗಳು ಪ್ರಯಾಣಿಸುತ್ತಿದ್ದ ವಾಹನವು ಹಿಂದನ್ ನದಿಯ ಸೇತುವೆಯಿಂದ ಕೆಳಕ್ಕೆ ಬಿದ್ದ ಪರಿಣಾಮ ಅವರಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page