Thursday, December 18, 2025

ಸತ್ಯ | ನ್ಯಾಯ |ಧರ್ಮ

ಏನಿದು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ? ಮೋದಿ ಸರ್ಕಾರಕ್ಕೆ ಮುಖಭಂಗವೇಕೆ?

“..ಪ್ರಕರಣದಲ್ಲಿ ಯಾವುದೇ ಅಕ್ರಮ ಹಣ ವರ್ಗಾವಣೆ ನಡೆದಿಲ್ಲವಾದ್ದರಿಂದ ಇ.ಡಿ. ಸಲ್ಲಿಸುವ ಆರೋಪಪಟ್ಟಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಇದು ಕೇಂದ್ರ ಸರ್ಕಾರದ ಸೇಡಿನ ರಾಜಕಾರಣ ಎಂಬುದು ಬಯಲಾಗಿದೆ..” ಮಾಚಯ್ಯ ಹಿಪ್ಪರಗಿಯವರ ಬರಹದಲ್ಲಿ

ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿಯವರನ್ನ ಟಾರ್ಗೆಟ್‌ ಮಾಡಿ ಹೂಡಲಾಗಿರುವ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಚಾರ್ಜ್‌ಶೀಟನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ದೆಹಲಿ ಕೋರ್ಟ್‌ ತಳ್ಳಿಹಾಕಿದೆ. ಇಡೀ ಪ್ರಕರಣದಲ್ಲಿ ಅಕ್ರಮ ಹಣದ ವಹಿವಾಟು ನಡೆದೇ ಇಲ್ಲವಾದ್ದರಿಂದ ಇ.ಡಿ.ಯ ಮಧ್ಯಪ್ರವೇಶ ಒಪ್ಪಲಾಗದು ಅನ್ನೋದು ನ್ಯಾಯಾಲಯದ ಅಭಿಮತ.
ಅಂದರೆ, ಕೇಂದ್ರ ಸರ್ಕಾರ ರಾಜಕೀಯ ದ್ವೇಷದ ಕಾರಣಕ್ಕೆ ಇ.ಡಿ.ಯನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಕೋರ್ಟ್‌ ಪರಿಗಣಿಸಿದೆ ಎಂದಂತಾಯಿತು. ಹಾಗಾಗಿ ಇದು ಕೇಂದ್ರ ಸರ್ಕಾರಕ್ಕಾದ ಮುಖಭಂಗ ಅಂತಲೇ ವ್ಯಾಖ್ಯಾನಿಸಲಾಗುತ್ತಿದೆ.

ನಿಜಕ್ಕೂ ಈ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಏನು? ನೆಹರೂ ಕುಟುಂಬ ಇದರಲ್ಲಿ ಅಕ್ರಮವೆಸಗಿದೆಯೇ? ಕೋಟ್ಯಂತರ ಬೆಲೆಬಾಳುವ ಆಸ್ತಿಗಳನ್ನು ಕೈವಶ ಮಾಡಿಕೊಳ್ಳಲು ಸಂಚು ರೂಪಿಸಲಾಗಿತ್ತೆ? ಈ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ತುಸು ಕೂಲಂಕಷವಾಗಿ ಪ್ರಕರಣವನ್ನು ಅರಿತುಕೊಳ್ಳಬೇಕಾಗುತ್ತೆ.

ನ್ಯಾಷನಲ್‌ ಹೆರಾಲ್ಡ್‌ ಎಂಬುದು ಕಾಂಗ್ರೆಸ್‌ ನೇತೃತ್ವದ ಸ್ವಾತಂತ್ಯ್ರ ಚಳವಳಿಗೆ ಪೂರಕವಾಗಿ 1938ರಲ್ಲಿ ಪಂಡಿತ್‌ ಜವಾಹರಲಾಲ್‌ ನೆಹರೂ ಹುಟ್ಟುಹಾಕಿದ್ದ ಪತ್ರಿಕೆ. ಜನರಲ್ಲಿ ಹೋರಾಟದ ಜಾಗೃತಿ, ದೇಶಪ್ರೇಮ, ವಸಹಾತುಶಾಹಿಗೆ ಪ್ರತಿರೋಧ ರೂಪಿಸುವಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪಾತ್ರ ಅಪಾರವಾದುದು. ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎ.ಜೆ.ಎಲ್) ಎಂಬ ಸಂಸ್ಥೆಯ ಒಡೆತನದಲ್ಲಿ ಇದು ಪ್ರಕಟವಾಗುತ್ತಿತ್ತು. ಖ್ವಾಮಿ ಅವಾಜ್‌ (ಉರ್ದು) ಮತ್ತು ನವಜೀವನ್‌ (ಹಿಂದಿ) ಎಂಬ ಪತ್ರಿಕೆಗಳನ್ನೂ ಈ ಸಂಸ್ಥೆ ಪ್ರಕಟಿಸುತ್ತಿತ್ತು. ನೆಹರೂ, ಜೆ ಬಿ ಕೃಪಲಾನಿ, ರಫಿ ಅಹಮದ್‌ ಕಿದ್ವಾಯ್‌ ಮತ್ತು ಇತರೆ ಕಾಂಗ್ರೆಸ್ ನಾಯಕರು ಈ ಸಂಸ್ಥೆಯ ಸ್ಥಾಪಕರಾಗಿದ್ದರೂ ಇದೊಂದು ಸಾರ್ವಜನಿಕ ಪಾಲುದಾರಿಕೆಯ ಲಾಭದಾಯಕವಲ್ಲದ ಸರ್ಕಾರೇತರ ಸಂಸ್ಥೆ. ಇದು ಕಾಂಗ್ರೆಸ್ ಪಕ್ಷದ ಒಡೆತನಕ್ಕೆ ಸೇರಿದ ಸಂಸ್ಥೆಯಾಗಿರಲಿಲ್ಲ.

ಆರಂಭದಲ್ಲಿ ಅನುಕೂಲವಾಗಿ ನಡೆಯುತ್ತಿದ್ದ ಸಂಸ್ಥೆ, ನಂತರದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾ ಬಂತು. ತನ್ನ ಸಿಬ್ಬಂದಿಗಳಿಗೆ ಸಂಬಳ ನೀಡುವುದೂ ಕಷ್ಟವಾಗತೊಡಗಿತು. ಸ್ವಾತಂತ್ಯ್ರ ಚಳವಳಿ ಹಿನ್ನೆಲೆಯಿರುವ ಮತ್ತು ತನ್ನ ಸೈದ್ದಾಂತಿಕ ಪ್ರತಿಪಾದಕನಂತಿದ್ದ ಪತ್ರಿಕಾ ಸಂಸ್ಥೆಯ ಉಳಿವಿಗಾಗಿ ಕಾಂಗ್ರೆಸ್‌ ಪಕ್ಷ ಸುಮಾರು 90 ಕೋಟಿ ರೂಪಾಯಿಯಷ್ಟು ಸಾಲ ನೀಡಿ, ವೇತನ ಮತ್ತು ಸಾಲಗಳನ್ನು ಬಗೆಹರಿಸಿಕೊಳ್ಳಲು ನೆರವು ನೀಡಿತು. ಅಷ್ಟಾದರೂ ಸಂಸ್ಥೆಯ ಆರ್ಥಿಕ ಮುಗ್ಗಟ್ಟು ಬಗೆಹರಿಯಲಿಲ್ಲ. 2008ರಲ್ಲಿ ಹೆರಾಲ್ಡ್‌ ಪತ್ರಿಕೆ ತನ್ನ ಪ್ರಕಟಣೆ ನಿಲ್ಲಿಸಿತು.

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಮುಂಚೂಣಿಗೆ ಬಂದ ನಂತರ ಐತಿಹಾಸಿಕ ಹಿನ್ನೆಲೆಯ  ಈ ಪತ್ರಿಕಾ ಸಂಸ್ಥೆಯ ಪುನಶ್ಚೇತನಕ್ಕೆ ಆಸಕ್ತಿ ತೋರಿದರು. 2011ರಲ್ಲಿ ಯಂಗ್‌ ಇಂಡಿಯನ್‌ (ವೈ.ಐ) ಪ್ರೈವೇಟ್‌ ಲಿಮಿಟೆಡ್‌ ಎಂಬ ಲಾಭದಾಯಕವಲ್ಲದ (ನಾನ್‌-ಪ್ರಾಫಿಟ್‌) ಹೊಸ ಸಂಸ್ಥೆಯನ್ನು ಹುಟ್ಟುಹಾಕಲಾಯ್ತು. ಈ ಹೊಸ ಸಂಸ್ಥೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ತಲಾ 38% ಪಾಲುದಾರಿಕೆ (ಒಟ್ಟು 76% ಪಾಲು) ಹೊಂದಿದ್ದರೆ, ಮೋತಿಲಾಲ್‌ ವೊಹ್ರಾ, ಆಸ್ಕರ್‍‌ ಫರ್ನಾಂಡೀಸ್, ಸುಮನ್ ದುಬೇ, ಸ್ಯಾಮ್‌ ಪಿತ್ರೋಡಾ ತರಹದ ನಾಯಕರು ಇನ್ನುಳಿದ ಪಾಲುದಾರಿಕೆ ಹೊಂದಿದ್ದರು. ಎ ಜೆ ಎಲ್ ಸಂಸ್ಥೆ ಕಾಂಗ್ರೆಸ್‌ ಪಕ್ಷಕ್ಕೆ ಕೊಡಬೇಕಿದ್ದ 90 ಕೋಟಿ ರೂಪಾಯಿಯ ಸಾಲದ ಒಡೆತನವನ್ನು ಕಾಂಗ್ರೆಸ್ ಪಕ್ಷ ಈ ಯಂಗ್‌ ಇಂಡಿಯನ್‌ ಸಂಸ್ಥೆಗೆ ಕೇವಲ 50 ಲಕ್ಷ ರೂಪಾಯಿಗೆ ಮಾರಾಟ ಮಾಡಿತು. ಸರಳವಾಗಿ ಹೇಳಬೇಕೆಂದರೆ, ನೀವು ಯಾರಿಗಾದರೂ 90,000 ಸಾಲ ಕೊಟ್ಟಿದ್ದೀರಿ ಎಂದುಕೊಳ್ಳಿ. ಬೇರೊಬ್ಬ ವ್ಯಕ್ತಿಯಿಂದ ನೀವು ಕೇವಲ 500 ರೂಪಾಯಿ ಪಡೆದು, ಆ ಸಾಲದ ಸಂಪೂರ್ಣ ಹೊಣೆಯನ್ನು ಆ ಹೊಸ ವ್ಯಕ್ತಿಗೆ ಮಾರಿಕೊಂಡಂತೆ. ಅಂದರೆ ನಿಮಗೆ 500 ರೂಪಾಯಿ ಕೊಟ್ಟ ಆತ 90,000 ರೂಪಾಯಿಯನ್ನು ವಸೂಲಿ ಮಾಡಿಕೊಂಡು ತನ್ನದಾಗಿಸಿಕೊಳ್ಳಬಹುದು. ಇಲ್ಲಿ ಪ್ರಶ್ನೆಗೆ ಈಡಾಗುತ್ತಿರುವುದೇ ಈ ಸಂಗತಿ. ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಖಾಸಗಿ ದೂರಿನೊಂದಿಗೆ ಕೋರ್ಟ್‌ ಮೆಟ್ಟಿಲೇರಿರುವುದು ಕೂಡಾ ಇದೇ ಸಂಗತಿಯನ್ನಿಟ್ಟುಕೊಂಡು. ಯಾಕೆಂದರೆ, ಕಾಂಗ್ರೆಸ್‌ ಪಕ್ಷಕ್ಕೆ ಕೊಡಬೇಕಿದ್ದ ಸಾಲದ ಹೊಣೆಯನ್ನು ಯಂಗ್‌ ಇಂಡಿಯನ್‌ ಸಂಸ್ಥೆ ಖರೀದಿಸಿದ ನಂತರ ತನ್ನ ಸಾಲವನ್ನು ಈಕ್ವಿಟಿ ಶೇರ್‍‌ ಆಗಿ ಎ ಜೆ ಎಲ್ ಸಂಸ್ಥೆ ಪರಿವರ್ತಿಸಿತು. ಹಾಗಾಗಿ ಎ ಜೆ ಎಲ್‌ ಸಂಸ್ಥೆಯ ಶೇರ್‍‌ನ ಬಹುಪಾಲು ಒಡೆತನ ಯಂಗ್‌ ಇಂಡಿಯನ್ ಸಂಸ್ಥೆ ಕೈಗೆ ಬಂದಿತು. ದೆಹಲಿ (ಹೆರಾಲ್ಡ್‌ ಹೌಸ್), ಲಖ್ನೋ, ಮುಂಬೈ, ಪಾಟ್ನಾ, ಭೂಪಾಲ್‌ ಮೊದಲಾದೆಡೆ ಸುಮಾರು ನೂರಾರು ಕೋಟಿ ಮೌಲ್ಯದ ಆಸ್ತಿಗಳನ್ನು ಎ ಜೆ ಎಲ್ ಸಂಸ್ಥೆ ಹೊಂದಿದೆ. ಕಾಂಗ್ರೆಸ್‌ ಪಕ್ಷದ ಸಾಲದ ಹಣ ನೆಪಮಾಡಿಕೊಂಡು ಆ ಆಸ್ತಿಗಳನ್ನು ತಮ್ಮ ಕೈವಶ ಮಾಡಿಕೊಳ್ಳಲು ಸೋನಿಯಾ-ರಾಹುಲ್‌, ತಮ್ಮದೇ ಬಹುಪಾಲು ಶೇರ್‍‌ ಇರುವ ಈ ಯಂಗ್‌ ಇಂಡಿಯನ್‌ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಹಾಗಾಗಿ ಇದು ಆಸ್ತಿ ಅವ್ಯವಹಾರ ಎನ್ನುವುದು ಸುಬ್ರಮಣಿಯನ್ ಸ್ವಾಮಿ ದೂರಿನ ಸಾರಾಂಶ. ತನ್ನ ಸಾಲವನ್ನು ವಸೂಲಿ ಮಾಡಿಕೊಳ್ಳುವ ಸಾಮರ್ಥ್ಯ ಕಾಂಗ್ರೆಸ್‌ ಪಕ್ಷಕ್ಕಿರುವಾಗ ಯಾಕೆ ಯಂಗ್‌ ಇಂಡಿಯನ್ ಎಂಬ ಸಂಸ್ಥೆ ಹುಟ್ಟುಹಾಕಬೇಕಿತ್ತು? ಇದು ಸ್ವಾಮಿಯವರ ಪ್ರಧಾನ ಪ್ರಶ್ನೆ.

ಈ ಪ್ರಶ್ನೆಗೆ ಕಾಂಗ್ರೆಸ್‌ ನಾಯಕರ ವಾದ ಹೀಗಿದೆ. ಸಾಲವನ್ನು ವಸೂಲಿ ಮಾಡಿಕೊಳ್ಳುವುದೇ ಉದ್ದೇಶವಾಗಿದ್ದಿದ್ದರೆ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸುತ್ತಿರುವಂತೆ ಕಾಂಗ್ರೆಸ್ ಪಕ್ಷವೇ ಆ ಕೆಲಸ ಮಾಡಬಹುದಿತ್ತು. ಆದರೆ ಸ್ವಾತಂತ್ಯ್ರ ಹೋರಾಟದ ಹಿನ್ನೆಲೆಯ ಪತ್ರಿಕಾ ಸಂಸ್ಥೆಯನ್ನು ಉಳಿಸಿಕೊಳ್ಳುವುದು ತಮ್ಮ ಇರಾದೆಯಾಗಿತ್ತು. ಸಂಸ್ಥೆಯನ್ನು restructure ಮಾಡಿ ಹೊಸ ಸಾಂಸ್ಥಿಕ ರೂಪ ನೀಡದ ಹೊರತು ಇದು ಸಾಧ್ಯವಿರಲಿಲ್ಲ. 1951ರ ಜನಪ್ರತಿನಿಧಿತ್ವ ಕಾಯ್ದೆಯಡಿ ರಚನೆಯಾದ ಯಾವುದೇ ರಾಜಕೀಯ ಪಕ್ಷಗಳು Income tax act 1961 ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಮಾಧ್ಯಮ ಸಂಸ್ಥೆಗಳ ನೇರ ಒಡೆತನವನ್ನು ಹೊಂದುವಂತಿಲ್ಲ. ಲಾಭದಾಯಕ ವ್ಯಾವಹಾರಿಕ ಉದ್ಯಮದಲ್ಲಿ ಹಣ ಹೂಡುವುದು ನಿಷಿದ್ಧ. ಹಾಗಾಗಿ ಕಾಂಗ್ರೆಸ್‌ ಪಕ್ಷ ನೇರವಾಗಿ ಸಂಸ್ಥೆಯ ಹಕ್ಕುಸ್ವಾಮ್ಯ ಹೊಂದಲು ಸಾಧ್ಯವಿರಲಿಲ್ಲ. ರಾಜಕೀಯ ಪಕ್ಷಗಳಿಗೆ ಹೂಡಿಕೆ ಮಾಡಲು ನಿರ್ಬಂಧವಿದೆಯಾದರೂ ನ್ಯಾಯಬದ್ಧವಾದ, ಲಾಭದಾಯಕವಲ್ಲದ ರಾಜಕೀಯೇತರ ಚಟುವಟಿಕೆಗಳಿಗೆ (ತಮ್ಮ ಸಿದ್ದಾಂತಕ್ಕೆ ಪೂರಕವಾದ ಮಾಧ್ಯಮ ಸಂಸ್ಥೆ, ಸಂಶೋಧನೆ, ಶೈಕ್ಷಣಿಕ ಸಂಸ್ಥೆ, ಚಾರಿಟೆಬಲ್‌ ಟ್ರಸ್ಟ್‌) ವ್ಯಾವಹಾರಿಕವಲ್ಲದ ಸಾಲ ನೀಡಲು ಯಾವುದೇ ಅಭ್ಯಂತರವಿಲ್ಲ. ವ್ಯಾವಹಾರಿಕವಲ್ಲದ ಸಾಲವೆಂದರೆ, ಆ ಸಾಲದಿಂದ ಲಾಭದ ನಿರೀಕ್ಷೆ ಇರಬಾರದು. ಅಂದರೆ ಸಾಲಕ್ಕೆ ಪ್ರತಿಯಾಗಿ ಬಡ್ಡಿ ತೆಗೆದುಕೊಳ್ಳುವುದು, ಪಾಲುದಾರಿಕೆಯ ಈಕ್ವಿಟಿ ಖರೀದಿಸುವುದು ಮಾಡುವಂತಿಲ್ಲ. ಈ ಅವಕಾಶದ ಅನ್ವಯವೇ ಕಾಂಗ್ರೆಸ್‌ ಪಕ್ಷ ಎ.ಜೆ.ಎಲ್‌. ಗೆ ಸಾಲ ನೀಡಿತ್ತು. ಆದರೆ ಸಾಲದ ವಸೂಲಾತಿ ನೆಪದಲ್ಲಿ ಒಡೆತನವನ್ನು ಹೊಂದುವ ಅವಕಾಶ ರಾಜಕೀಯ ಪಕ್ಷಕ್ಕೆ ಇಲ್ಲ.

ಒಂದುವೇಳೆ, ಸಾಲ ವಸೂಲಾತಿಯೇ ಕಾಂಗ್ರೆಸ್‌ ನಾಯಕರ ಇರಾದೆಯಾಗಿದ್ದರೆ ಅವರು ಎ.ಜೆ.ಎಲ್ ಸಂಸ್ಥೆಯ ಆಸ್ತಿಗಳನ್ನು ಮಾರಾಟ ಮಾಡಿಸಿ ವಸೂಲಿ ಮಾಡಿಕೊಳ್ಳಬಹುದಿತ್ತು. ಆದರೆ ಅದನ್ನು ಪುನಶ್ಚೇತನಗೊಳಿಸುವುದು ಅವರ ಉದ್ದೇಶವಾಗಿದ್ದರಿಂದ ಯಂಗ್‌ ಇಂಡಿಯನ್‌ ಎಂಬ ನಾನ್‌-ಪ್ರಾಫಿಟ್‌ ಸಂಸ್ಥೆಯನ್ನು ಹುಟ್ಟುಹಾಕಿ, ಅದಕ್ಕೆ ಸಾಲದ ಒಡೆತನವನ್ನು ವರ್ಗಾವಣೆ ಮಾಡಿ, ಅದರ ಒಡೆತನದ ಮೂಲಕ ಎಜೆಎಲ್‌ ಸಂಸ್ಥೆಗೆ ಹೊಸ ಸಾಂಸ್ಥಿಕ ರೂಪ ನೀಡಲು ಮುಂದಾಗಿದ್ದರು. ಅಲ್ಲದೇ, ಸೋನಿಯಾ ಆಗಲಿ ಅಥವಾ ರಾಹುಲ್ ಗಾಂಧಿಯಾಗಲಿ ಯಂಗ್ ಇಂಡಿಯನ್ ಸಂಸ್ಥೆಯಿಂದ ವೇತನ ಪಡೆದಿಲ್ಲ ಅಥವಾ ಹಣದ ರೂಪದಲ್ಲಾಗಲಿ ಅಥವಾ ಆಸ್ತಿಯ ರೂಪದಲ್ಲಾಗಲಿ ಲಾಭವನ್ನು ತಮ್ಮದಾಗಿಸಿಕೊಂಡಿಲ್ಲ. ಲಾಭದ ಅನುಪಸ್ಥಿತಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಆರೋಪ ಕೇವಲ ಕಲ್ಪಿತವೆಂದು ಪರಿಗಣಿಸಲ್ಪಡುವ ಸಾಧ್ಯತೆಯೆ ಹೆಚ್ಚು. ಕೋರ್ಟ್‌ ಮುಂದೆ ಕಾಂಗ್ರೆಸ್‌ ನಾಯಕರು ಮಂಡಿಸುತ್ತಿರುವ ವಾದ ಇದು. ಕಾನೂನಿನ ಚೌಕಟ್ಟಿನಲ್ಲಿ ಅವರ ವಾದದ ಮಾನ್ಯತೆಯನ್ನು ನಿರ್ಧರಿಸುವ ಅವಕಾಶ ನ್ಯಾಯಾಲಯಕ್ಕಿದೆ. ಕೋರ್ಟು ಇದನ್ನೊಂದು ಕಾರ್ಪೊರೇಟ್‌ ಸಾಲ ವ್ಯವಹಾರಕ್ಕೆ ಸಂಬಂಧಿಸಿದ ಸಿವಿಲ್‌ ವ್ಯಾಜ್ಯವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದೆ.

ಆದರೆ ಯಾವಾಗ ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂತೋ, ಆಗ ಕಾಂಗ್ರೆಸ್‌ ನಾಯಕರ ವಿರುದ್ಧ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಈ ಖಾಸಗಿ ಸಿವಿಲ್‌ ವ್ಯಾಜ್ಯದ ದೂರನ್ನು ಕ್ರಿಮಿನಲ್‌ ಪ್ರಕರಣಕ್ಕೆ ತಿರುಗಿಸಲಾಯ್ತು. ಯಾಕೆಂದರೆ CPC, Contract Act, Company Law, Property law ಪ್ರಕಾರ  ಸಿವಿಲ್‌ ವ್ಯಾಜ್ಯದಲ್ಲಿ ತನಿಖಾ ಸಂಸ್ಥೆಗಳು ಕೋರ್ಟ್‌ನ ನಿರ್ದೇಶನವಿಲ್ಲದೆ ಸ್ವಯಂಪ್ರೇರಿತವಾಗಿ ತನಿಖೆಗಿಳಿಯುವಂತಿಲ್ಲ, ಆಪಾದಿತರನ್ನು ಬಂಧಿಸುವಂತಿಲ್ಲ. ಆದ ನಷ್ಟವನ್ನು ಸರಿಪಡಿಸಿ, ಪರಿಹಾರ ಕೊಡಿಸುವುದು ಸಿವಿಲ್‌ ವ್ಯಾಜ್ಯಗಳ ವ್ಯಾಪ್ತಿಯಾಗಿರುತ್ತೆ. ಹಾಗಾಗಿ ಜೈಲು ಶಿಕ್ಷೆಯ ಪ್ರಮಾಣ ಸಾಧ್ಯತೆಯೂ ವಿರಳ. ಆ ಕಾರಣಕ್ಕೆ ಕಾರ್ಪೊರೇಟ್‌ ಸಿವಿಲ್ ವ್ಯಾಜ್ಯಕ್ಕೆ ಕ್ರೈಮ್‌ ಪ್ರಕರಣದ ರೂಪ ನೀಡಲು ಅಕ್ರಮ ಹಣ ವರ್ಗಾವಣೆಯ Prevention of Money Laundering Act, 2002 (PMLA) ಜೊತೆ ಥಳುಕು ಹಾಕಲಾಯ್ತು. ಇ.ಡಿ. ಮಧ್ಯಪ್ರವೇಶಿಸಿ ತನಿಖೆ ಕೈಗೆತ್ತಿಕೊಂಡಿತು. ರಾಜಕೀಯ ದುರುದ್ದೇಶದಿಂದ ಗಾಂಧಿ ಕುಟುಂಬ ಸದಸ್ಯರು ಮತ್ತು ಸಂಗಡಿಗರು ತಪ್ಪು ಮಾಡಿದ್ದಾರೆ ಎಂದು ಆರೋಪ ಪಟ್ಟಿಯನ್ನೂ ಇಡಿ ಸಲ್ಲಿಸಿತ್ತು.

ಆದರೆ, ಈ ಪ್ರಕರಣದಲ್ಲಿ ಯಾವುದೇ ಅಕ್ರಮ ಹಣ ವರ್ಗಾವಣೆ ನಡೆದಿಲ್ಲವಾದ್ದರಿಂದ ಇ.ಡಿ. ಸಲ್ಲಿಸುವ ಆರೋಪಪಟ್ಟಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಅಧಿಕಾರ ದುರ್ಬಳಕೆಯ ಸೇಡಿನ ರಾಜಕಾರಣ ಬಯಲಾಗಿದೆ. ಭ್ರಷ್ಟಾಚಾರದ ಆರೋಪಗಳಿರುವ ಹಲವಾರು ಬಿಜೆಪಿ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರೀಯ ತನಿಖಾ ಸಂಸ್ಥೆಗಳು ಅರವಿಂದ್ ಕೇಜ್ರಿವಾಲ್, ಹಿಮಂತ್ ಸೊರೇನ್, ಪಿ. ಚಿದಂಬರಂ, ಲಾಲು ಪ್ರಸಾದ್ ಯಾದವ್‌, ಸಿದ್ದರಾಮಯ್ಯ ಮೊದಲಾದ ವಿರೋಧ ಪಕ್ಷಗಳ ನಾಯಕರ ಮೇಲೆ ತನಿಖೆಯ ನೆಪದಲ್ಲಿ ಕಿರುಕುಳ ನೀಡುತ್ತಿರುವುದು ಸೇಡಿನ ರಾಜಕಾರಣಕ್ಕೆ ಸಾಕ್ಷಿ ಎಂಬ ಆರೋಪಗಳು ಗಟ್ಟಿಯಾಗಿ ಕೇಳಿಬರುತ್ತಿರುವ ಸಮಯದಲ್ಲಿ ಕೋರ್ಟ್‌ ನೀಡಿರುವ  ಈ ತೀರ್ಪು ಮೋದಿ ಸರ್ಕಾರಕ್ಕಾದ ದೊಡ್ಡ ಮುಖಭಂಗ ಎಂದು ಹೇಳಬಹುದು.

ಅಂದಹಾಗೆ, ಭಾರೀ ಮೊತ್ತದ ಸಾಲವನ್ನು ಸಣ್ಣಮೊತ್ತಕ್ಕೆ ಮಾರಾಟ ಮಾಡಿದ ಮೂಲ ದೂರಿನ ಸಂಗತಿಯನ್ನು ನ್ಯಾಯಾಲಯ ಈಗಲೂ ಸಿವಿಲ್‌ ವ್ಯಾಜ್ಯದ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುವ ಅವಕಾಶ ಉಳಿಸಿಕೊಂಡಿದೆ. ಕಾಂಗ್ರೆಸ್‌ ನಾಯಕರ ವಾದ ಸಮರ್ಪಕವಾಗಿಲ್ಲ ಎನಿಸಿದರೆ, ವ್ಯವಹಾರವನ್ನು ರದ್ದುಗೊಳಿಸಲೂಬಹುದು ಅಥವಾ ಸರಿ ಎನಿಸಿದರೆ ಪ್ರಕರಣವನ್ನು ಸಂಪೂರ್ಣವಾಗಿ ತಳ್ಳಿಹಾಕಲೂಬಹುದು. ಅದು ನ್ಯಾಯಾಲಯದ ವಿಚಾರಣೆಗೆ ಬಿಟ್ಟ ಸಂಗತಿ. ಆದ್ರೆ ಇದರಲ್ಲಿ ರಾಜಕೀಯ ಸೇಡಿನ ಹಸ್ತಕ್ಷೇಪ ಸಲ್ಲದು ಎಂಬ ಸ್ಪಷ್ಟ ಸಂದೇಶವನ್ನು ನ್ಯಾಯಾಲಯ ರವಾನಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page