Thursday, December 18, 2025

ಸತ್ಯ | ನ್ಯಾಯ |ಧರ್ಮ

ರಾಜ್ಯದಲ್ಲಿ 88 ಜನ ಪೊಲೀಸರು ದೊಡ್ಡ ಕ್ರಿಮಿನಲ್ಸ್​​ಗಳಿದ್ದಾರೆ – DCM ಪರಮೇಶ್ವರ್‌

ಬೆಳಗಾವಿ : ಇತ್ತೀಚೆಗೆ ಎಟಿಎಂ ವಾಹನ ದರೋಡೆಯಲ್ಲಿ ಪೊಲೀಸ್ (Police) ಪಾತ್ರವಿದೆ ಎಂದು ತಿಳಿದು ಇಡೀ ಕರ್ನಾಟಕವೇ ಬೆಚ್ಚಿಬಿದ್ದಿತ್ತು. ಇಂಥಾ ಎಷ್ಟ್ ಕ್ರಿಮಿನಲ್ ಪೊಲೀಸರು ಇದ್ದಾರೋ ಎಂದು ಜನರು ಉದ್ಘಾರ ಎತ್ತಿದ್ರು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಕರ್ನಾಟಕದಲ್ಲಿ ಕಳ್ಳತನ, ಕಳವಿಗೆ ನೆರವು,ಕಳ್ಳರ ಜೊತೆ ಶಾಮೀಲು ಇನ್ನಿತರ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ 88 ಮಂದಿ ಪೊಲೀಸರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಸ್ಪೆoಡ್ ಮಾಡಲಾಗಿದೆ.

88 ಪೊಲೀಸರ ಮೇಲಿನ ಪ್ರಕರಣ ಸಾಬೀತಾದಲ್ಲಿ ಮುಲಾಜಿಲ್ಲದೇ ಸೇವೆಯಿಂದ ವಜಾ ಗೊಳಿಸಲಾಗುವುದು ಎಂದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮೇಲ್ಮನೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲ ದರೋಡೆ, ಅಪಹರಣದಂತಹ ಕೇಸ್​​ಗಳಲ್ಲಿ ಪೊಲೀಸರೇ ಭಾಗಿಯಾಗಿರುವ ಆತಂಕಕಾರಿ ಮಾಹಿತಿ ಬಹಿರಂಗವಾಗಿತ್ತು. ಬೆಂಗಳೂರಲ್ಲಿ ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ ಹಾಡಹಗಲೇ ದರೋಡೆ ಸೇರಿ, ಕೋರಮಂಗಲದ ಕಾಲ್​​ಸೆಂಟರ್​​ನ ಉದ್ಯೋಗಿಗಳ ಕಿಡ್ನ್ಯಾಪ್​​ ಕೇಸ್​​ಗಳಲ್ಲಿಯೂ ಪೊಲೀಸ್​​ ಸಿಬ್ಬಂದಿಯೇ ಆರೋಪಿಗಳಾಗಿದ್ದರು. ಈ ನಡುವೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಬರೋಬ್ಬರಿ 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹೊರಬಂದಿರೋದು ಬೆಚ್ಚಿಬೀಳಿಸಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎ ಶರವಣ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ರಾಜ್ಯದಲ್ಲಿ 1099 ಪೊಲೀಸ್ ಠಾಣೆಗಳು 1.06 ಲಕ್ಷ ಮಂದಿ ಸಿಬ್ಬಂದಿಯಿದ್ದು ಅವರ ಉತ್ತಮ ಕೆಲಸ ಕರ್ತವ್ಯ ದಕ್ಷತೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತ್ಯುತ್ತಮವಾಗಿದೆ. ಜೊತೆ ಜೊತೆಗೆ ಕೆಲವೇ ಕೆಲವು ಪೊಲೀಸರು ಅಪರಾಧ ಕೃತ್ಯಗಳಲ್ಲಿ ತೊಡಗಿ ಇಲಾಖೆಗೆ ಕೆಟ್ಟ ಹೆಸರು ತರುವುದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

3 ವರ್ಷಗಳ ಅವಧಿಯಲ್ಲಿ

ವಿಧಾನ ಪರಿಷತ್​​ನ ಜೆಡಿಎಸ್​​ ಸದಸ್ಯ ಶರವಣ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್​​, ರಾಜ್ಯದಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ಒಟ್ಟು 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಂಕಿ-ಅಂಶ ಸಮೇತ ಮಾಹಿತಿ ನೀಡಿದ್ದಾರೆ.

ಗೃಹಸಚಿವರ ಉತ್ತರದ ಬೆನ್ನಲ್ಲೇ ಈ ಬಗ್ಗೆ ಶರವಣ ಅವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ಪೊಲೀಸರೇ ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ರಕ್ಷಕರೇ ಭಕ್ಷಕರಾಗುತ್ತಿರುವ ಕಾರಣ ಪೊಲೀಸರ ಮೇಲೆ ಜನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಅಪರಾಧ ಪ್ರಕರಣದಲ್ಲಿ ಭಾಗಿಯಾದ ಪೊಲೀಸರನ್ನು ಅಮಾನತು ಮಾಡುವುದಲ್ಲ, ಕೆಲಸದಿಂದಲೇ ವಜಾಗೊಳಿಸಬೇಕು ಎಂದು ಟಿಎ ಶರವಣ ಆಗ್ರಹ ಮಾಡಿದ್ದಾರೆ.

ರಾಜ್ಯದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದನ್ನು ತಡೆಗಟ್ಟಲು ರಾಜ್ಯದ ಎಲ್ಲಾ ಘಟಕದ ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳಿಗೆ ಕರ್ತವ್ಯ ಪಾಲನೆಯ ಕುರಿತು ಸೂಕ್ತ ಸೂಚನೆ ನೀಡಲಾಗಿರುತ್ತದೆ ಎಂದು ಡಾ.ಜಿ ಪರಮೇಶ್ವರ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page