Saturday, December 20, 2025

ಸತ್ಯ | ನ್ಯಾಯ |ಧರ್ಮ

ತಂದೆಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ ಚೈತ್ರಾ ಕುಂದಾಪುರ ವಿರುದ್ಧ ಹಿರಿಯ ನಾಗರಿಕರ ನ್ಯಾಯಾಲಯ ಆದೇಶ

ತಂದೆಗೆ ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆ ನೀಡಬಾರದು ಹಾಗೂ ಅವರು ತಮ್ಮ ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ಇಲ್ಲಿನ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ ಅವರಿಗೆ ಆದೇಶಿಸಿದೆ.

ಮಗಳು ಚೈತ್ರಾ ಕುಂದಾಪುರರಿಂದ ತಮಗೆ ಅನ್ಯಾಯವಾಗುತ್ತಿದೆ. ಸ್ವಂತ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕು ಎಂದು ಕೋರಿ ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯಿದೆ ಅಡಿಯಲ್ಲಿ ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯಕ್‌ ಅವರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಹಾಯಕ ಕಮೀಷನರ್ ರಶ್ಮಿ ಅವರು, ಬಾಡಿಗೆ ಹಣ ಪಾವತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಪ್ರಸ್ತುತ ಆ ಮನೆಯಲ್ಲಿ ಚೈತ್ರಾ ಕುಂದಾಪುರ ವಾಸಿಸುತ್ತಿಲ್ಲ ಎಂಬುದನ್ನೂ ಗಮನಿಸಿದ್ದಾರೆ. ಆದರೂ ಈ ಹಿಂದೆ ತಂದೆ–ಮಗಳ ನಡುವೆ ವಿವಾದಗಳು ನಡೆದಿರುವ ಹಿನ್ನೆಲೆಯಲ್ಲಿ, ಇನ್ನು ಮುಂದೆ ಬಾಲಕೃಷ್ಣ ನಾಯಕ್‌ ಅವರು ತಮ್ಮ ಮನೆಯಲ್ಲಿ ವಾಸಿಸಲು ಯಾವುದೇ ರೀತಿಯ ಅಡ್ಡಿ ಉಂಟುಮಾಡಬಾರದು, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಬಾರದು ಎಂದು ಸ್ಪಷ್ಟ ಆದೇಶ ನೀಡಿದ್ದಾರೆ.

ಅಲ್ಲದೆ, ಹಿರಿಯ ನಾಗರಿಕರಾದ ಬಾಲಕೃಷ್ಣ ನಾಯಕ್‌ ಅವರ ಆಸ್ತಿ ಮತ್ತು ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಈ ಕುರಿತು ಸೂಕ್ತ ಮುಚ್ಚಳಿಕೆ ವಹಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಆದೇಶದ ಅನುಸಾರ ಕ್ರಮ ಕೈಗೊಳ್ಳುವಂತೆ ಕುಂದಾಪುರ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಗಮನಾರ್ಹವಾಗಿ, ಚೈತ್ರಾ ಕುಂದಾಪುರ ಅವರ ತಂದೆಯೇ ಪುತ್ರಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಪತ್ನಿ ಹಾಗೂ ಮಗಳಿಂದ ತಮಗೆ ಕಿರುಕುಳ ಎದುರಾಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ನ್ಯಾಯಕ್ಕಾಗಿ ಅವರು ಹಿರಿಯ ನಾಗರಿಕರ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಹಿಂದೆ ಚೈತ್ರಾ ಕುಂದಾಪುರ ಮತ್ತು ಅವರ ತಂದೆಯ ನಡುವಿನ ಸಂಬಂಧ ತೀವ್ರ ಸಂಘರ್ಷಕ್ಕೆ ತಿರುಗಿತ್ತು. ಚೈತ್ರಾ ಅವರ ಮದುವೆ ಸಂದರ್ಭ ಬಾಲಕೃಷ್ಣ ನಾಯಕ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಆ ಸಮಯದಲ್ಲಿ ಚೈತ್ರಾ ಸಾಮಾಜಿಕ ಜಾಲತಾಣಗಳ ಮೂಲಕ ತಂದೆಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು. ಈ ಎಲ್ಲ ಬೆಳವಣಿಗೆಗಳು ಕುಟುಂಬದೊಳಗಿನ ಬಿರುಕು ಮತ್ತಷ್ಟು ಗಾಢವಾಗಲು ಕಾರಣವಾಗಿದ್ದವು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page