Monday, December 22, 2025

ಸತ್ಯ | ನ್ಯಾಯ |ಧರ್ಮ

ನಾಯಕತ್ವದ ಗೊಂದಲ ಸ್ಥಳೀಯವಾಗಿ ಸೃಷ್ಟಿಯಾಗಿದ್ದು, ಹೈಕಮಾಂಡ್ ಹಸ್ತಕ್ಷೇಪ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಕಲಬುರಗಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ನಾಯಕತ್ವ ಬದಲಾವಣೆಯ ಕಿತ್ತಾಟ ಮತ್ತು ಕುರ್ಚಿ ಕದನಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗರಂ ಆಗಿದ್ದಾರೆ. “ನಾಯಕತ್ವದ ಗೊಂದಲಗಳನ್ನು ಹೈಕಮಾಂಡ್ ಸೃಷ್ಟಿಸಿಲ್ಲ, ಇವೆಲ್ಲ ಸ್ಥಳೀಯವಾಗಿ ಹುಟ್ಟಿಕೊಂಡಿವೆ. ಈ ಸಮಸ್ಯೆಗಳನ್ನು ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು,” ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಖರ್ಗೆ ಅವರ ಪ್ರಮುಖ ಹೇಳಿಕೆಗಳು:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವೆ ಶೀತಲ ಸಮರ ನಡೆಯುತ್ತಿರುವ ಬೆನ್ನಲ್ಲೇ ಖರ್ಗೆ ಅವರು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

“ಎಲ್ಲದಕ್ಕೂ ಹೈಕಮಾಂಡ್‌ನತ್ತ ಬೊಟ್ಟು ಮಾಡುವುದು ಸರಿಯಲ್ಲ. ಪಕ್ಷ ಸಂಘಟನೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವಿದೆ. ಯಾರೂ ಕೂಡ ಪಕ್ಷ ತನ್ನಿಂದಲೇ ಬೆಳೆದಿದೆ ಎಂದು ಹೇಳಿಕೊಳ್ಳಬಾರದು,” ಎಂದು ಅವರು ಪರೋಕ್ಷವಾಗಿ ಉಭಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಹೈಕಮಾಂಡ್ ನಿರ್ಧರಿಸುವವರೆಗೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಮತ್ತು ಯಾವುದೇ ಒಪ್ಪಂದದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸಿಎಂ ಇತ್ತೀಚೆಗೆ ಹೇಳಿದ್ದರು.

ಇತ್ತ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮತ್ತು ನನ್ನ ನಡುವೆ ಒಪ್ಪಂದ ನಡೆದಿದೆ. ಹೈಕಮಾಂಡ್ ಸೂಕ್ತ ಸಮಯದಲ್ಲಿ ನಮ್ಮನ್ನು ದೆಹಲಿಗೆ ಕರೆಯಿಸಿಕೊಳ್ಳಲಿದೆ ಎಂದು ವಿಧಾನಸೌಧದ ಹೊರಗೆ ಹೇಳಿಕೆ ನೀಡಿದ್ದರು.

ಬೆಳಗಾವಿ ಅಧಿವೇಶನದ ಉದ್ದಕ್ಕೂ ಪ್ರತಿಧ್ವನಿಸಿದ ನಾಯಕತ್ವ ಬದಲಾವಣೆಯ ವಿಷಯವು ಹೈಕಮಾಂಡ್ ಗಮನಕ್ಕೂ ಹೋಗಿದೆ. ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ, ಕೇಂದ್ರ ನಾಯಕರು ನಿರ್ಧಾರ ಪ್ರಕಟಿಸುವವರೆಗೆ ಅಧಿಕಾರ ಹಸ್ತಾಂತರದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ಉಭಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.

ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು “ಹೈಕಮಾಂಡ್ ಕೈ ಹಾಕಲ್ಲ” ಎಂದು ಹೇಳುವ ಮೂಲಕ, ರಾಜ್ಯ ನಾಯಕರು ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಮಾತುಕತೆಯ ಮೂಲಕವೇ ಸರಿಪಡಿಸಿಕೊಳ್ಳಬೇಕು ಎಂಬ ಸಂದೇಶ ರವಾನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page