Wednesday, December 24, 2025

ಸತ್ಯ | ನ್ಯಾಯ |ಧರ್ಮ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪ್ರಕಾಶ್ ರಾಜ್ ರಾಯಭಾರಿ

ಜನವರಿ 29ರಿಂದ ಫೆಬ್ರವರಿ 6ರವರೆಗೆ ಉತ್ಸವ – ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಉದ್ಘಾಟನೆ

ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ (Brand Ambassador) ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಚಲನಚಿತ್ರೋತ್ಸವದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಸಿಎಂ, “ಸಮಿತಿ ತೆಗೆದುಕೊಂಡ ನಿರ್ಧಾರದಂತೆ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ. ಈ ಬಾರಿ ಉತ್ಸವವನ್ನು ನಾನು ಸ್ವತಃ ಉದ್ಘಾಟನೆ ಮಾಡುತ್ತೇನೆ” ಎಂದು ಘೋಷಿಸಿದರು.

ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ವಿಧಾನಸೌಧದ ಮುಂಭಾಗದ ಭವ್ಯ ಮೆಟ್ಟಿಲುಗಳ ಮೇಲೆ ಉದ್ಘಾಟನೆಯಾಗಲಿದೆ. ಈ ಬಾರಿ ಮಹಿಳಾ ಸಬಲೀಕರಣವೇ ಚಿತ್ರೋತ್ಸವದ ಮುಖ್ಯ ಥೀಮ್ ಆಗಿರಲಿದೆ. ಥೀಮ್ ಅನ್ನು ಇದೇ ದಿನ ಸಂಜೆ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದರು.

ಉತ್ಸವದಲ್ಲಿ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಒಟ್ಟು 400ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ. ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನಿಪೊಲಿಸ್‌ನ 11 ಸ್ಕ್ರೀನ್‌ಗಳಲ್ಲಿ ಪ್ರಮುಖ ಪ್ರದರ್ಶನಗಳು ನಡೆಯಲಿವೆ. ಜೊತೆಗೆ ಡಾ. ರಾಜ್‌ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲೂ ಚಿತ್ರ ಪ್ರದರ್ಶನ ಇರಲಿದೆ.

ಈ ಬಾರಿ ಆಸ್ಕರ್ ಪ್ರಶಸ್ತಿಗಳಿಗೆ ಶಾರ್ಟ್‌ಲಿಸ್ಟ್ ಆಗಿರುವ ವಿವಿಧ ದೇಶಗಳ ಚಿತ್ರಗಳು ಸಹ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಕಾನ್ಸ್, ಬರ್ಲಿನ್, ವೆನಿಸ್, ಟೊರಂಟೋ, ರೋಟರ್‌ಡ್ಯಾಮ್, ಬುಸಾನ್ ಸೇರಿದಂತೆ ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಹಾಗೂ ಮೆಚ್ಚುಗೆ ಪಡೆದ ಚಲನಚಿತ್ರಗಳು ಒಂದೇ ವೇದಿಕೆಯಲ್ಲಿ ಸಿನಿಮಾ ಪ್ರೇಕ್ಷಕರಿಗೆ ಲಭ್ಯವಾಗಲಿವೆ.

ಇತ್ತೀಚೆಗೆ ಅಗಲಿದ ಧರ್ಮೇಂದ್ರ, ಸರೋಜಾದೇವಿ, ಉಮೇಶ್, ಶಾಜಿ ಎನ್. ಕರುಣ್, ರಘು ಸೇರಿದಂತೆ ಹಲವು ಗಣ್ಯರ ಸ್ಮರಣಾರ್ಥವಾಗಿ ವಿಶೇಷ ಶ್ರದ್ಧಾಂಜಲಿ ಹಾಗೂ ರೆಟ್ರೋಸ್ಪೆಕ್ಟಿವ್ ವಿಭಾಗದಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಪೋಲಿಷ್ ಕಲ್ಚರಲ್ ಸೆಂಟರ್ ಸಹಯೋಗದಲ್ಲಿ ಖ್ಯಾತ ನಿರ್ದೇಶಕ ಅಂದ್ರೆ ವಾಜ್ದಾ ಅವರ ಶತಮಾನೋತ್ಸವದ ಅಂಗವಾಗಿ ವಿಶೇಷ ಪುನರಾವಲೋಕನ ಆಯೋಜಿಸಲಾಗಿದೆ. ಜೊತೆಗೆ ಆಫ್ರಿಕಾ ಸಿನಿಮಾಗಳ ಇತಿಹಾಸ ದಾಖಲಿಸುವ ವಿಶೇಷ ಸರಣಿಯೂ ಪ್ರದರ್ಶನಗೊಳ್ಳಲಿದೆ.

ಏಷಿಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಇದುವರೆಗೆ 110ಕ್ಕೂ ಹೆಚ್ಚು ಚಿತ್ರಗಳು ಸಲ್ಲಿಕೆಯಾಗಿದ್ದು, ಡಿಸೆಂಬರ್ 31, 2025 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಾಗಿದೆ.

ಚಿತ್ರೋತ್ಸವದ ಅಕಾಡೆಮಿಕ್ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗವಹಿಸಲು ಪ್ರಧಾನ ಕೇಂದ್ರದಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗಿದ್ದು, ಕನ್ನಡ ಚಿತ್ರರಂಗದ 91 ವರ್ಷಗಳ ಇತಿಹಾಸವನ್ನು ಪ್ರತಿಬಿಂಬಿಸುವ ಛಾಯಾಚಿತ್ರ ಪ್ರದರ್ಶನವೂ ಏರ್ಪಡಿಸಲಾಗಿದೆ.

2025–26ನೇ ಸಾಲಿನಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರೂ.7 ಕೋಟಿ ಅನುದಾನ ಒದಗಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರಗಳು ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page