Thursday, December 25, 2025

ಸತ್ಯ | ನ್ಯಾಯ |ಧರ್ಮ

ತಮಿಳುನಾಡಿನ ತಿರುಚಿಯಲ್ಲಿ ಬಸ್‌ ಅಪಘಾತ – 9 ಮಂದಿ ಸಾವು

ಚೆನ್ನೈ : ಚಿತ್ರದುರ್ಗದಲ್ಲಿ (Chitradurga) ಸಂಭವಿಸಿದ ಭೀಕರ ಬಸ್‌ (Bus) ದುರಂತ ರಾಜ್ಯದ ಜನತೆಯನ್ನೇ ಬೆಚ್ಚಿ ಬೀಳಿಸಿದೆ. ಇದೇ ಸಂದರ್ಭ ತಮಿಳುನಾಡಿನಲ್ಲೂ (Tamil Nadu) ಭೀಕರ ಬಸ್‌ ಅಪಘಾತ ಸಂಭವಿಸಿ 9 ಜನರ ಸಾವಾಗಿರುವ ಘಟನೆ ನಡೆದಿದೆ.

ತಮಿಳುನಾಡಿನ ತಿರುಚಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ನಿಗಮ (SETC) ಬಸ್ ಬುಧವಾರ ರಾತ್ರಿ ಕಡಲೂರು ಜಿಲ್ಲೆಯ ಎಳುತೂರ್ ಬಳಿ ಭೀಕರ ಅಪಘಾತಕ್ಕೀಡಾಗಿದ್ದು ಕನಿಷ್ಠ9 ಜನರು ಸಾವನ್ನಪ್ಪಿದ್ದಾರೆ. 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಜನದಟ್ಟಣೆಯ ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಹಲವಾರು ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ಪೊಲೀಸರ ಪ್ರಕಾರ, ಎಳುತೂರ್ ಪ್ರದೇಶದ ಮೂಲಕ ಹಾದುಹೋಗುವಾಗ ಬಸ್ಸಿನ ಮುಂಭಾಗದ ಟೈರ್ ಸಿಡಿದಿದ್ದು, ಇದರಿಂದಾಗಿ ಬಸ್‌ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ.

ಟೈರ್‌ ಪಂಚರ್‌ ಆದ ಬಳಿಕ ಬಸ್‌ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಮೊದಲು ಡಿಕ್ಕಿ ಹೊಡೆದಿದೆ. ಬಳಿಕ ತಡೆಗೋಡೆಯನ್ನು ಭೇದಿಸಿ, ಎದುರಿನ ಕ್ಯಾರೇಜ್‌ವೇಗೆ ದಾಟಿದೆ. ಅಲ್ಲಿ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಎರಡು ಕಾರುಗಳಿಗೆ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಭೀಕರವಾಗಿದ್ದು, ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ 7 ಜನ ಸೇರಿ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಕ್ಕೊಳಗಾದ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಮೃತರಲ್ಲಿ ನಾಲ್ವರು ಪುರುಷರು, ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರ ನಾಲ್ವರು ಜನರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಕಾರಿನಲ್ಲಿ ಕರೂರಿನ ಆಭರಣ ಉದ್ಯಮಿ ರಾಜರಥಿನಂ (69), ಅವರ ಪತ್ನಿ ರಾಜೇಶ್ವರಿ (57) ಮತ್ತು ಅವರ ಚಾಲಕ ಜಯಕುಮಾರ್ (45) ಇದ್ದರು, ಅವರೆಲ್ಲರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಎರಡನೇ ಕಾರಿನಲ್ಲಿ ಪುದುಕ್ಕೊಟ್ಟೈ ಜಿಲ್ಲೆಯ ಪಿಳ್ಳೈ ತಣ್ಣೀರ್ ಪಂಢಲ್ ಪ್ರದೇಶದ ನಿವಾಸಿಗಳಾದ ಮುಬಾರಕ್ ಮತ್ತು ತಾಜ್ ಬಿರ್ಕಾ ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page