Friday, December 26, 2025

ಸತ್ಯ | ನ್ಯಾಯ |ಧರ್ಮ

ವಿವಾದದತ್ತ ಅಂಜನಾದ್ರಿ ಬೆಟ್ಟ: ಹನುಮನ ಪೂಜೆಗೆ ಅರ್ಚಕರ ನಡುವೆಯೇ ವಾಗ್ಯುದ್ಧ, ಪ್ರಕರಣ ದಾಖಲು

ಗಂಗಾವತಿ: ದೇಶ-ವಿದೇಶದ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಇದೀಗ ಧಾರ್ಮಿಕ ಶ್ರದ್ಧೆಯ ಬದಲು ವಿವಾದದ ಕೇಂದ್ರಬಿಂದುವಾಗುತ್ತಿದೆ. ಹನುಮ ಹುಟ್ಟಿದ ಸ್ಥಳವೆಂದು ಪ್ರತೀತಿ ಇರುವ ಈ ಕ್ಷೇತ್ರದಲ್ಲಿ ಅರ್ಚಕರ ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದಿದ್ದು, ಎರಡು ದಿನಗಳಲ್ಲಿ ಮೂರು ಪೊಲೀಸ್ ಪ್ರಕರಣಗಳು ದಾಖಲಾಗಿವೆ.

ಅಂಜನಾದ್ರಿಯ ಗರ್ಭಗುಡಿಯಲ್ಲಿಯೇ ನಡೆದ ವಾಗ್ವಾದವು ಹಂತ ಹಂತವಾಗಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದೆ. ಅರ್ಚಕ ಮಹಾಂತ ವಿದ್ಯಾದಾಸ್ ಬಾಬಾ ಹಾಗೂ ಹಂಪಿಯ ಗೋವಿಂದಾನಂದ ಸರಸ್ವತಿ ನಡುವೆ ಪೂಜೆ ಹಾಗೂ ಆಡಳಿತ ಸಂಬಂಧಿತ ವಿಚಾರಕ್ಕೆ ನಾಲ್ಕು ದಿನಗಳ ಹಿಂದೆ ವಿವಾದ ಉಂಟಾಗಿದೆ ಎಂದು ತಿಳಿದುಬಂದಿದೆ. ಮಾತಿನ ಚಕಮಕಿ ಕೀಳುಮಟ್ಟದ ಪದ ಪ್ರಯೋಗಕ್ಕೆ ತಿರುಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಘಟನೆ ನಡೆದ ಬೆನ್ನಲ್ಲೇ ಗೋವಿಂದಾನಂದ ಸರಸ್ವತಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ವಿದ್ಯಾದಾಸ್ ಬಾಬಾ ಸೇರಿದಂತೆ ಹತ್ತು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ವಿದ್ಯಾದಾಸ್ ಬಾಬಾ ಕೂಡ ಆನ್‌ಲೈನ್ ಮೂಲಕ ದೂರು ನೀಡಿರುವುದಾಗಿ ಹೇಳಿಕೊಂಡಿದ್ದರೂ, ಅದು ಅಧಿಕೃತವಾಗಿ ದಾಖಲೆಯಾಗಿಲ್ಲ ಎನ್ನಲಾಗಿದೆ.

ವಿವಾದ ಶಮನಕ್ಕಾಗಿ ಪೊಲೀಸರು ನಡೆಸುತ್ತಿದ್ದ ಪಂಚನಾಮೆ ಸಂದರ್ಭದಲ್ಲೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ವೇಳೆ ವಿದ್ಯಾದಾಸ್ ಬಾಬಾ ಬೆಂಬಲಿಗರು ಗೋವಿಂದಾನಂದ ಸರಸ್ವತಿ ಮೇಲೆ ಹಲ್ಲೆಗೆ ಮುಂದಾಗಿದ್ದು, ಕಬ್ಬಿಣದ ಪೈಪ್‌ನಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಗೋವಿಂದಾನಂದ ಸರಸ್ವತಿ ಮತ್ತೊಂದು ದೂರು ದಾಖಲಿಸಿದ್ದಾರೆ.

ಇನ್ನು ಪಂಚನಾಮೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ದಾಖಲಿಸಿದ್ದು, ಒಟ್ಟು ಎರಡು ದಿನಗಳ ಅವಧಿಯಲ್ಲಿ ಮೂರು ಕೇಸ್ ದಾಖಲಾಗಿವೆ. ಆದರೆ ವಿದ್ಯಾದಾಸ್ ಬಾಬಾ ನೀಡಿದ ದೂರು ಇದುವರೆಗೂ ದಾಖಲಾಗದಿರುವುದು ಪೊಲೀಸ್ ನಡೆ ಬಗ್ಗೆ ಅನುಮಾನ ಹುಟ್ಟಿಸಿದೆ.

ಅಂಜನಾದ್ರಿಯ ಪೂಜಾ ಹಕ್ಕು ಹಾಗೂ ಆಡಳಿತ ವಿಚಾರವಾಗಿ 2018ರಿಂದ ಜಿಲ್ಲಾಡಳಿತ ಮತ್ತು ವಿದ್ಯಾದಾಸ್ ಬಾಬಾ ನಡುವೆ ವ್ಯಾಜ್ಯ ನಡೆಯುತ್ತಿದ್ದು, ಈ ಪ್ರಕರಣ ಧಾರವಾಡ ಹೈಕೋರ್ಟ್‌ನಲ್ಲಿ ಅಂತಿಮ ಹಂತದಲ್ಲಿದೆ. ತೀರ್ಪು ಹೊರಬರುವ ಕೆಲವೇ ದಿನಗಳ ಮುಂಚೆ ಈ ರೀತಿಯ ಘಟನೆಗಳು ನಡೆದಿರುವುದು ‘ಕಾಣದ ಕೈಗಳ ಪಾತ್ರವಿದೆಯೇ?’ ಎಂಬ ಪ್ರಶ್ನೆಗೆ ಕಾರಣವಾಗಿದೆ.

ಇದರ ನಡುವೆ ಗೋವಿಂದಾನಂದ ಸರಸ್ವತಿ ಕಿಷ್ಕಿಂಧಾ ಪ್ರದೇಶದಲ್ಲಿ ಬೃಹತ್ ಆಂಜನೇಯನ ಮೂರ್ತಿ ಸ್ಥಾಪನೆ ಬಗ್ಗೆ ಘೋಷಣೆ ಮಾಡಿಕೊಂಡು ಓಡಾಡಿರುವ ವಿಚಾರವೂ ಚರ್ಚೆಗೆ ಬಂದಿದೆ. ಇಷ್ಟು ದಿನ ಕಾಣಿಸದ ಅವರು ದಿಢೀರ್ ಅಂಜನಾದ್ರಿಯಲ್ಲಿ ಸಕ್ರಿಯರಾಗಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.

ಒಟ್ಟಾರೆ, ತೀರ್ಪಿನ ಹೊಸ್ತಿಲಲ್ಲಿ ಅಂಜನಾದ್ರಿ ಅಶಾಂತಿಗೆ ತಳ್ಳಲ್ಪಟ್ಟಿದ್ದು, ಜಿಲ್ಲಾಡಳಿತ ಇದುವರೆಗೂ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಮೂರು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ ಅರ್ಚಕ ವಿದ್ಯಾದಾಸ್ ಬಾಬಾ ತಾತ್ಕಾಲಿಕವಾಗಿ ಅಂಜನಾದ್ರಿಯನ್ನು ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page