Friday, December 26, 2025

ಸತ್ಯ | ನ್ಯಾಯ |ಧರ್ಮ

ಮತಪಟ್ಟಿ ಅಕ್ರಮ ಆರೋಪ: ಬಾಗಲಕೋಟೆ ಜಿಲ್ಲೆಯಲ್ಲಿ ಅಪ್ರಾಪ್ತರು, ಹೊರಗಿನವರ ಹೆಸರು ಪತ್ತೆ

ಬಿಜೆಪಿ ವಿರುದ್ಧ ಮತಗಳ್ಳತನ ಆರೋಪ ಹೊರಿಸಿ ದೇಶಾದ್ಯಂತ ಕಾಂಗ್ರೆಸ್ ಹೋರಾಟ ನಡೆಸುತ್ತಿರುವ ನಡುವೆ, ರಾಜ್ಯದಲ್ಲೂ ಮತದಾರರ ಪಟ್ಟಿಯ ಅಕ್ರಮ ವಿಚಾರಗಳು ಬೆಳಕಿಗೆ ಬರುತ್ತಿವೆ. ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ತನಿಖೆ ನಡೆಯುತ್ತಿರುವಾಗಲೇ, ಇದೀಗ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಮುರಡಿ ಗ್ರಾಮದಲ್ಲಿಯೂ ಮತಪಟ್ಟಿ ಅಕ್ರಮದ ಗಂಭೀರ ಆರೋಪ ಕೇಳಿಬಂದಿದೆ.

ಮುರಡಿ ಗ್ರಾಮದ ಮತದಾರರ ಪಟ್ಟಿಯಲ್ಲಿ ಅಪ್ರಾಪ್ತರು ಹಾಗೂ ಬೇರೆ ಊರಿನ ನಿವಾಸಿಗಳ ಹೆಸರುಗಳು ಸೇರಿವೆ ಎನ್ನುವುದು ಪರಿಶೀಲನೆಯಿಂದ ಗೊತ್ತಾಗಿದೆ. ಮತಪಟ್ಟಿಯಲ್ಲಿ 18 ವರ್ಷ ತುಂಬದ ಆರು ಅಪ್ರಾಪ್ತರ ಹೆಸರುಗಳು ದಾಖಲಾಗಿರುವುದು ಪತ್ತೆಯಾಗಿದೆ. 15ರಿಂದ 17 ವರ್ಷ ವಯೋಮಾನದ ಶರಣಪ್ಪ ಗೋಣಿ, ಯಲ್ಲಾಲಿಂಗ ಬನ್ನಿ, ಭೀಮಪ್ಪ ಬನ್ನಿ, ಪ್ರದೀಪ ಬನ್ನಿ, ಮಂಜುನಾಥ ಬನ್ನಿ ಹಾಗೂ ಮಹಾಂತೇಶ ಗೋಣಿ ಎಂಬವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಇದಕ್ಕೆ ಜೊತೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಆರು ಮತದಾರರ ಹೆಸರುಗಳೂ ಮುರಡಿ ಗ್ರಾಮದ ಪಟ್ಟಿಯಲ್ಲಿ ಸೇರಿರುವುದು ಅನುಮಾನಕ್ಕೆ ಕಾರಣವಾಗಿದೆ. ಹುಲಿಗೆವ್ವ, ರಂಗಪ್ಪ, ಶಾಂತಪ್ಪ ಶಾಂತಗೇರಿ, ಪಡಿಯಪ್ಪ, ರಂಗಪ್ಪ ಶಾಂತಗೇರಿ ಹಾಗೂ ಶಾಂತವ್ವ ಶಾಂತಗೇರಿ ಎಂಬವರ ಹೆಸರುಗಳು ಎರಡೂ ಕಡೆ ಇರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕುಷ್ಟಗಿಯಲ್ಲಿ ಹೆಸರು ಡಿಲೀಟ್ ಆಗದೆ ಮುರಡಿಯಲ್ಲಿ ಸೇರ್ಪಡೆ ಆಗಿರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ನಕಲಿ ಜನ್ಮ ದಾಖಲಾತಿಗಳನ್ನು ಸೃಷ್ಟಿಸಿ ಕೆಲವರ ಹೆಸರುಗಳನ್ನು ಮತಪಟ್ಟಿಗೆ ಸೇರಿಸಲಾಗಿದೆ ಎಂದು ಹುನಗುಂದ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ಈ ಅಕ್ರಮದಲ್ಲಿ ಮುರಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾವಕ್ಕ ಮಗ ಶಿವಾನಂದ ಬನ್ನಿ ಅವರ ಪಾತ್ರವಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯಲಿರುವ ಹಿನ್ನೆಲೆ ಈ ರೀತಿಯ ಅಕ್ರಮ ನಡೆದಿರಬಹುದು ಎಂಬ ಅನುಮಾನ ಮೂಡಿದೆ.

ಈ ಕುರಿತು ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಇಳಕಲ್ ತಹಶೀಲ್ದಾರ್ ಅವರಿಗೆ ಸ್ಥಳೀಯರು ದೂರು ಸಲ್ಲಿಸಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page