Saturday, December 27, 2025

ಸತ್ಯ | ನ್ಯಾಯ |ಧರ್ಮ

ಬಡತನ, ಪ್ರತಿಭೆ ಮತ್ತು ಏಕಲವ್ಯನ ಹೆಬ್ಬೆರಳು

“..ಬಡವರು ಮಕ್ಕಳು ಬೇಳಿಬೇಕು ಎನ್ನುವ ನಟ ಡಾಲಿ ಧನಂಜಯ್‌ ಮಾತಿನಲ್ಲಿ ಯಾವ ಲೋಪವೂ ಇಲ್ಲ. ಬಡ ಕುಟುಂಬದ ಪ್ರತಿಭೆ ಮತ್ತು ಶ್ರೀಮಂತ ಮನೆತನದ ಪ್ರತಿಭೆಯ ನಡುವೆ ಆಯ್ಕೆ ಪ್ರಶ್ನೆ ಬಂದಾಗ, ಮುಲಾಜಿಲ್ಲದೆ ನಾವು ಬಡವರ ಮಕ್ಕಳನ್ನೆ ಬೆಳೆಸಬೇಕಾಗುತ್ತೆ..” ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ

ಅಷ್ಟೆಲ್ಲ ಅಗಾಧ ಪ್ರತಿಭೆ ಮತ್ತು ಪರಿಶ್ರಮ ಇದ್ದಾಗ್ಯೂ ಏಕಲವ್ಯ ಯಾಕೆ ತನ್ನ ಹೆಬ್ಬೆರಳು ಕಳೆದುಕೊಂಡ? ಈ ಒಂದು ಪ್ರಶ್ನೆಯನ್ನು ರಾಜ್‌ ಬಿ ಶೆಟ್ಟಿ ಕೇಳಿಕೊಂಡಿದ್ದರೆ ಸಾಕಿತ್ತು, ಬಡವರ ಮಕ್ಕಳು ಬೆಳಿಬೇಕು ಎನ್ನುವ ಮಾತಿನ ಉದ್ದೇಶ ಅರ್ಥವಾಗುತ್ತಿತ್ತು. ಇಲ್ಲಿ ಪ್ರಶ್ನೆಯಿರುವುದು ಪ್ರತಿಭೆಯದ್ದಲ್ಲ, ಅವಕಾಶಗಳದ್ದು! ಬಡವರ ಮಕ್ಕಳು ಬೆಳಿಬೇಕು ಎಂಬ ನಟ ಡಾಲಿ ಧನಂಜಯ್‌ ಮಾತಿನಲ್ಲಿ ಧ್ವನಿಸುತ್ತಿರುವುದು ಅವಕಾಶಗಳ ಆದ್ಯತೆಯೇ ಹೊರತು, ಪ್ರತಿಭೆ ಇಲ್ಲದಿದ್ದರೂ ಅವಕಾಶ ನೀಡಬೇಕೆಂಬ ವಕಾಲತ್ತಲ್ಲ.

ಏಕಲವ್ಯ ಮತ್ತು ಅರ್ಜುನ ಇಬ್ಬರೂ ಬಿಲ್ವಿದ್ಯೆಯ ಪ್ರತಿಭಾವಂತರು. ಆದರೆ ಅರ್ಜುನ ಪ್ರಭಾವಿ ಕುಲದವ. ಏಕಲವ್ಯ ಬಡ ಬುಡಕಟ್ಟು ಕುಲದವ. ಬ್ರಾಹ್ಮಣ್ಯದ ದ್ರೋಣರ ಮುಂದೆ ನೀವು ಈ ಇಬ್ಬರ ಪೈಕಿ ಯಾರ ಹಿತ ಕಾಯುವಿರಿ ಎಂಬ ಪ್ರಶ್ನೆ ಬಂದಾಗ, ಅವರು ಏಕಲವ್ಯನ ಪರ ನಿಲ್ಲಬೇಕಿತ್ತು. ಯಾಕೆಂದರೆ ಆತ ಅವಕಾಶದಿಂದ ವಂಚಿತನಾಗುತ್ತಾ ಬಂದ ಹಿನ್ನೆಲೆಯವ. ಬಲಾಢ್ಯ ಅರ್ಜುನನಿಗೆ ಮಣೆ ಹಾಕದಿದ್ದರೆ ಅವನು ಕಳೆದುಕೊಳ್ಳುವಂತದ್ದೇನೂ ಇರುತ್ತಿರಲಿಲ್ಲ. ತಮ್ಮ ರಾಜ ಮನೆತನದ ಪ್ರಭಾವದಿಂದ ಮತ್ತ್ಯಾವುದೋ ಅವಕಾಶಗಳು ಅವನಿಗೆ ಒದಗಿಬರುತ್ತಿದ್ದವು. ಆದರೆ ಏಕಲವ್ಯನಿಗೆ ಸಿಗಲಾರದೆಹೋದ ಒಂದೇಒಂದು ಅವಕಾಶ ಅವನ ಇಡೀ ಬದುಕನ್ನೇ ಚಿತ್ರಕಥೆಯಿಂದ ಕಿತ್ತುಬಿಸಾಡಿತು. ಈ ಹಂತದಲ್ಲಿ ಒಂದುವೇಳೆ, ಅರ್ಜುನನಿಗಿಂತ ಏಕಲವ್ಯ ಪ್ರತಿಭೆಯಲ್ಲಿ ತುಸು ಕಡಿಮೆ ಎನಿಸಿದರೂ, ವ್ಯಕ್ತಿತ್ವದಲ್ಲಿ ತುಸು ಪೆಡುಸೆನಿಸಿದ್ದರೂ ಆಚಾರ್ಯರು ಏಕಲವ್ಯನ ಪಕ್ಷಪಾತಿಯಾಗಬೇಕಿತ್ತು. ಅದನ್ನೇ ಬಾಬಾ ಸಾಹೇಬರು ಸಾಮಾಜಿಕ ನ್ಯಾಯ ಎಂದರು. ವಂಚಿತ ಸಮುದಾಯಗಳಿಗೆ ಅವಕಾಶಗಳ ಆದ್ಯತೆಯ ಹಂಚಿಕೆಯು ಅವರಿಗೆ ನಾವು ನೀಡುವ ಭಿಕ್ಷೆಯಲ್ಲ; ಅವರಿಗೆ ನಮ್ಮಿಂದಾದ ವಂಚನೆಗೆ ಪ್ರತಿಯಾಗಿ ಸಂದಾಯವಾಗುವ ಪ್ರಾಯಶ್ಚಿತ್ತದ ತಪ್ಪುಕಾಣಿಕೆ.

ಅಂತಹ ಅವಕಾಶವನ್ನು ಬ್ರಾಹ್ಮಣ್ಯದ ದ್ರೋಣರು ಕೈಚೆಲ್ಲಿದರು. ಏಕಲವ್ಯನ ಪ್ರತಿಭೆಯ ಹೆಬ್ಬೆರಳನ್ನೇ ಬಲಿಪಡೆದರು. ಬಡವರ ಮಕ್ಕಳ ಪರವಾಗಿ ನಿಲ್ಲಿ, ಎನ್ನುವುದು ಇಂತಹ ವಂಚನೆಯನ್ನು ತಪ್ಪಿಸಲಿಕ್ಕಾಗಿ. ಇದು ಯಾವುದೋ ಪುರಾಣದಲ್ಲಿ ಆಗಿಹೋದ ಘಟನೆ ಎಂದು ತಳ್ಳಿಹಾಕಲಾಗದು. ಇವತ್ತಿಗೂ ನಡೆಯುತ್ತಿರುವ ಬೌದ್ಧಿಕ ದಬ್ಬಾಳಿಕೆ; ಅವಕಾಶಗಳ ವಂಚನೆ!

ಅಂದಹಾಗೆ, ಬಡತನ ಅನ್ನೋದನ್ನು ನಾವು ಕೇವಲ Economical ಆಯಾಮದಿಂದ ಮಾತ್ರ ಪರಿಗಣಿಸಿದರೆ ಸಮಸ್ಯೆಯ ವಿಸ್ತಾರ ಸಂಪೂರ್ಣವಾಗದು. ಭಾರತದ ಮಟ್ಟಿಗೆ ಬಡತನ ಎಂಬುದು ಜಾತಿವ್ಯವಸ್ಥೆಯ ಬೈಪ್ರಾಡಕ್ಟ್‌! ಶಿಕ್ಷಣ, ಅಧಿಕಾರ ಮತ್ತು ಆಸ್ತಿಯ ಹಂಚಿಕೆಯನ್ನು ಬಹುಜನರಿಂದ ವಂಚಿಸುತ್ತಾ ಬಂದ ಕೆಲ ಸಮುದಾಯಗಳ ಚಾರಿತ್ರಿಕ ದ್ರೋಹದಿಂದ ಉಂಟಾದ ಸಾಮಾಜಿಕ ಕ್ಷೋಭೆ. ಆರ್ಥಿಕತೆಯ ಕೊರತೆಯಲ್ಲದೆ ಆತ್ಮವಿಶ್ವಾಸದ ಕೊರತೆ, ಅವಕಾಶಗಳ ಕೊರತೆ, ವರ್ತನೆಗಳ ಕೊರತೆಗಳು, ಆಯಸ್ಸು-ಆರೋಗ್ಯದ ಕೊರತೆಗಳೂ ಈ ಬಡತನದ ಪರಿಧಿಯೊಳಗೆ ಬರುತ್ತವೆ. ಏಕಲವ್ಯನನ್ನು ಬಡ ಬುಡಕಟ್ಟು ಸಮುದಾಯದವ ಎಂದಾಗ ಈ ಎಲ್ಲಾ ಆಯಾಮಗಳಿಂದ ದ್ರೋಹಕ್ಕೆ ತುತ್ತಾದ ಕುಲದವನು ಎಂದು ಪರಿಗಣಿಸಬೇಕಾಗುತ್ತದೆ. ಆ ದ್ರೋಹ ಇವತ್ತಿಗೂ ಮುಂದುವರೆದಿದೆ. ಹಾಗಾಗಿ ಬಡವರ ಮಕ್ಕಳು ಎಂದರೆ, ಅವಕಾಶವಂಚಿತ ಸಮುದಾಯಗಳ ಪ್ರತಿಭಾವಂತರು ಎಂಬ ವಿಶಾಲ ಅರ್ಥದಲ್ಲಿ ಪರಿಗಣಿಸಬೇಕು. ಅಂತವರಲ್ಲಿ ಒಂದೆರಡು ದೋಷಗಳಿವೆ ಅಂತ ನಮಗೆ ಅನ್ನಿಸಿದರೂ ನಾವು ಅವರ ಪರ ಪಕ್ಷಪಾತಿಗಳಾಗಬೇಕಾಗುತ್ತೆ. ಯಾಕೆಂದರೆ privileged ಸಮುದಾಯಗಳಿಗೆ ಸುಲಭವಾಗಿ ಸಿಗಬಹುದಾದ ಗಾಡ್‌ಫಾದರ್‍‌ಗಳು, ಪುನರಾವರ್ತಿತ ಅವಕಾಶಗಳು ಇವರಿಗೆ ಸಿಗಲಾರವು. ಜಾತಿವ್ಯವಸ್ಥೆಯ ಸಾಮಾಜಿಕ ಪರಿಸರ ಅವರನ್ನು ಹಿಂದಕ್ಕೆ ತಳ್ಳುವುದಕ್ಕೇ ಕಾಯುತ್ತಿರುತ್ತದೆ. ಅಂತದ್ದರಲ್ಲಿ  ಸಿಕ್ಕ ಅವಕಾಶವನ್ನೂ ನಾವು ಪ್ರತಿಭೆಯ ಹೆಸರಲ್ಲಿ ವಂಚಿಸಿದರೆ, ದೋಷಗಳ ಪಟ್ಟಿಯಲ್ಲಿ ಮುಳುಗಿಸಿದರೆ ಅದು ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕಿತ್ತುಕೊಂಡ ದ್ರೋಹಕ್ಕಿಂತ ಕಡಿಮೆಯದ್ದೇನಲ್ಲ.

ಇನ್ನು ‘ಪ್ರತಿಭೆ’ ಎನ್ನುವ ಬಹುದೊಡ್ಡ ವಂಚಕ ರಾಜಕಾರಣದ ಬಗ್ಗೆ ವಿವರಿಸಿದರೆ ಒಂದು ಪಿ ಎಚ್ ಡಿ ಪ್ರಬಂಧಕ್ಕಾಗುವಷ್ಟು ಸುದೀರ್ಘ ಬರಹವಾಗುತ್ತೆ. ಪ್ರತಿಭೆಯನ್ನು ಕೆಲವು sophisticated ಕ್ಷೇತ್ರ/ಕಲೆಗಳಿಗಷ್ಟೇ ಸೀಮಿತಗೊಳಿಸಿದ; ಪ್ರತಿಭೆಯ ಜೊತೆಗೆ ವಿನಯ ಅಥವಾ ವಿಧೇಯತೆಯನ್ನು ತಳುಕು ಹಾಕಿದ; ಆಳುವ ವರ್ಗಗಳಿಗೆ ಕಾಲಕಾಲಕ್ಕೆ ನಯನಾಜೂಕಾಗಿ ನಡೆದುಕೊಳ್ಳುತ್ತಾ ಆಸ್ಥಾನ-ಅಧಿಕಾರ ಅನುಭವಿಸಿದ ಚರಿತ್ರೆಯಿಲ್ಲದ ಶೂದ್ರ ಪ್ರತಿಭೆಗಳಲ್ಲಿನ ವರ್ತನೆ ದೋಷಗಳನ್ನು ಹುಡುಕುವ ನಮ್ಮ ಸಿಕ್ಕುಗಳನ್ನು ಬಿಡಿಸುತ್ತಾ ಹೋದರೆ, ಪ್ರತಿಭೆ ಎನ್ನುವುದೇ ಒಂದು ಚಕ್ರವ್ಯೂಹವಾಗಿ ಭಾಸವಾಗುತ್ತದೆ. ಇನ್ನೊಮ್ಮೆ ಸುದೀರ್ಘವಾಗಿ ಇದನ್ನು ಚರ್ಚಿಸೋಣ.

ಬಡವರು ಮಕ್ಕಳು ಬೇಳಿಬೇಕು ಎನ್ನುವ ನಟ ಡಾಲಿ ಧನಂಜಯ್‌ ಮಾತಿನಲ್ಲಿ ಯಾವ ಲೋಪವೂ ಇಲ್ಲ. ಬಡ ಕುಟುಂಬದ ಪ್ರತಿಭೆ ಮತ್ತು ಶ್ರೀಮಂತ ಮನೆತನದ ಪ್ರತಿಭೆಯ ನಡುವೆ ಆಯ್ಕೆ ಪ್ರಶ್ನೆ ಬಂದಾಗ, ಮುಲಾಜಿಲ್ಲದೆ ನಾವು ಬಡವರ ಮಕ್ಕಳನ್ನೆ ಬೆಳೆಸಬೇಕಾಗುತ್ತೆ. ಯಾಕೆಂದರೆ ಶ್ರೀಮಂತ ಪ್ರತಿಭೆಗೆ ಒಂದು ಅವಕಾಶ ಕೈತಪ್ಪಿದರೂ ಆತ ಮತ್ತೊಂದು ಅವಕಾಶಕ್ಕೆ ಪ್ರಯತ್ನಿಸಬಹುದಾದ buffering ಇರುತ್ತೆ, ಸಾಮಾಜಿಕ ಮನ್ನಣೆ ಇರುತ್ತೆ. ಆದರೆ ಬಡವರ ಮಕ್ಕಳಿಗೆ ಒಂದು ಅವಕಾಶವೆಂದರೆ, ಒಂದೇ ಅವಕಾಶ. ಅದು ಕೈತಪ್ಪಿದರೆ, ಅವರ ಕನಸುಗಳೇ ನಾಶ. ಸಾಮಾಜಿಕ ಒತ್ತಡಗಳು, ಬದುಕಿನ ಹೊಣೆಗಳು ಅವರ ಬೆನ್ನೇರಿ ಕಾಯುತ್ತಿರುತ್ತವೆ. ಮತ್ತೆಮತ್ತೆ ಪ್ರಯತ್ನಿಸುವ ಮಾತೇ ಇಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page