Monday, December 29, 2025

ಸತ್ಯ | ನ್ಯಾಯ |ಧರ್ಮ

ಕರ್ನಾಟಕದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕನ್ನಡ ಚಳುವಳಿಗಾರರ ಸಮಿತಿ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ಜನರಾಜ್ಯೋತ್ಸವ -2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಾವ ಭಾಷೆ ಕಲಿತರೂ ಕನ್ನಡಿಗರಾಗಿಯೇ ಉಳಿಯಬೇಕು
ರಾಜ್ಯದಲ್ಲಿ ಕನ್ನಡ ಕಲಿಯದೆಯೇ ಬದುಕಬಹುದಾದ ವಾತಾವರಣವಿದೆ. ಕನ್ನಡ ಕಲಿಯಲೇಬೇಕಾದ ಅನಿವಾರ್ಯತೆ ಇಲ್ಲ. ಬೇರೆ ಭಾಷೆಯಲ್ಲಿ ಮಾತನಾಡುವವರೊಂದಿಗೆ ನಾವು ಕನ್ನಡದಲ್ಲಿಯೇ ಮಾತನಾಡಬೇಕು. ತಮಿಳುನಾಡು ತೆಲಂಗಾಣ, ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿ ಅವರವರ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಕನ್ನಡಿಗರು ಏಕೆ ಕನ್ನಡದಲ್ಲಿ ಮಾತನಾಡಬಾರದು? ಕನ್ನಡದಲ್ಲಿಯೇ ಮಾತನಾಡಬೇಕು. ಅನಿವಾರ್ಯವಾದರೆ ಬೇರೆ ಭಾಷೆ ಬಳಸಿ. ಯಾವ ಭಾಷೆ ಕಲಿತರೂ ಕನ್ನಡಿಗರಾಗಿಯೇ ಉಳಿಯಬೇಕು ಎಂದರು.

ಕನ್ನಡ ಭಾಷೆ, ನೆಲ, ಜಲ, ಗಡಿ ಇವುಗಳ ಬಗ್ಗೆ ಹೋರಾಟ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. “ಎಲ್ಲಾದರೂ ಇರು, ಎಂತಾದರೂ ಇರು, ಕನ್ನಡವಾಗಿರು” ಎಂದು ಕುವೆಂಪು ಹೇಳಿದ್ದಾರೆ. 1983 ರಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ನೇಮಕಗೊಂಡು ಒಂದೂವರೆ ವರ್ಷ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಕನ್ನಡ ಬೆರಳಚ್ಚು ಯಂತ್ರಗಳನ್ನು ಎಲ್ಲೆಡೆ ಕಳುಹಿಸಿದ್ದು ಅವರು ಮಾಡಿದ ಮೊದಲ ಕೆಲಸವಾಗಿತ್ತು ಎಂದು ನೆನಪಿಸಿಕೊಂಡರು. ಕನ್ನಡ ಆಡಳಿತ ಭಾಷೆಯಾಗಿದ್ದು, ಕನ್ನಡ ಬಳಕೆಅನಿವಾರ್ಯವಾಗಬೇಕೆಂದು ತೀರ್ಮಾನಿಸಿ ಈ ಕೆಲಸ ಮಾಡಿದೆ ಎಂದರು. ಯಾರೇ ಆಂಗ್ಲ ಭಾಷೆಯಲ್ಲಿ ಮಾತನಾಡಿದರೂ ಕನ್ನಡದಲ್ಲಿಯೇ ಮಾತನಾಡಿಸುವುದು ಹಾಗೂ ಕನ್ನಡದಲ್ಲಿಯೇ ಸಹಿ ಮಾಡುವುದು ಮತ್ತು ಟಿಪ್ಪಣಿ ಬರೆಯುವುದು ಎಂದರು. ಹೊರರಾಜ್ಯಗಳಿಗೆ ಬರೆಯುವಾಗ ಮಾತ್ರ ಆಂಗ್ಲ ಭಾಷೆ ಬಳಸಿದರೂ ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದರು.

ಪೋಷಕರ ಸಹಾಯವಿಲ್ಲದೆ ಹೋದರೆ ಕನ್ನಡ ಶಾಲೆಗಳು ಉಳಿದು, ಬೆಳೆಯುವುದು ಕಷ್ಟ
ಪ್ರತಿ ಹಳ್ಳಿಯಲ್ಲಿಯೂ ಕನ್ನಡ ಶಾಲೆ ಇರಬೇಕು ಎಂದು ಬರಗೂರು ರಾಮಚಂದ್ರಪ್ಪ ಅವರು ಸಲಹೆ ನೀಡಿದ್ದು, ಗ್ರಾಮಗಳಲ್ಲಿ ಕನ್ನಡ ಶಾಲೆ ಇರಲೇಬೇಕು. ನಾನೂ ಕೂಡ ಕನ್ನಡ ಶಾಲೆ, ಕನ್ನಡ ಮಾಧ್ಯಮದ ಪರವಾಗಿ ಇರುವವನು ಎಂದರು. ಇತ್ತೀಚೆಗೆ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ. ಇದಕ್ಕೆ ಪೋಷಕರ ಸಹಾಯವೂ ಅಗತ್ಯ. ಪೋಷಕರ ಸಹಾಯವಿಲ್ಲದೆ ಹೋದರೆ ಕನ್ನಡ ಶಾಲೆಗಳು ಉಳಿದು, ಬೆಳೆಯುವುದು ಕಷ್ಟ ಎಂದರು.

ಕನ್ನಡ ಶಾಲೆಗಳ ಬಗ್ಗೆ ಸಭೆ

ಬರಗೂರು ರಾಮಚಂದ್ರಪ್ಪ ಅವರು ಹೇಳಿದಂತೆ ಈ ಕನ್ನಡ ಶಾಲೆಗಳ ಬಗ್ಗೆ ಕೂಡಲೇ ಒಂದು ಸಭೆ ಕರೆದು , ಅಲ್ಲಿನ ತೀರ್ಮಾನವನ್ನು ಜಾರಿಗೊಳಿಸಲಾಗುವುದು ಎಂದರು.ವೈಯಕ್ತಿಕವಾಗಿ ನಾನು ದ್ವಿಭಾಷಾ ನೀತಿಯ ಪರವಾಗಿದ್ದು , ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ತೀರ್ಮಾನ ಕೈಗೊಳ್ಳುವುದು ಎಂದರು.

ಕನ್ನಡ ಚಳವಳಿಗಾರರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಚರ್ಚಿಸಿ ತೀರ್ಮಾನ
ಕನ್ನಡ ಚಳವಳಿಗಾರರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಉಪಸಮಿತಿಯನ್ನು ರಚಿಸಲಾಗಿದ್ದು, ಗೃಹ ಸಚಿವರು ಅಧ್ಯಕ್ಷರಾಗಿದ್ದಾರೆ. ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ಹಿಂದಿ ಭಾಷೆಯನ್ನು ವಿರೋಧಿಸುವುದಿಲ್ಲ. ಆದರೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ
ಕನ್ನಡಿಗರು ಒಂದು ವರ್ಷಕ್ಕೆ ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಒಂದು ರೂಪಾಯಿ ಕೊಟ್ಟರೆ ಕೇಂದ್ರದಿಂದ ನಮಗೆ ಬರುವುದು 14 ಪೈಸೆ ಮಾತ್ರ. ದೇಶದಲ್ಲಿಯೇ ಕರ್ನಾಟಕ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ನಮ್ಮ ಸರ್ಕಾರದ ಅನೇಕ ಕಾರ್ಯಕ್ರಮಗಳ ಮೂಲಕ ಈ ಸ್ಥಾನಕ್ಕೆ ಬಂದಿದ್ದೇವೆ. ರಾಜ್ಯ ಸರ್ಕಾರ ಹಿಂದಿಯನ್ನು ವಿರೋಧಿಸುವುದಿಲ್ಲ. ಆದರೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಎಂದರು. ಕನ್ನಡವೇ ಸಾರ್ವಭೌವ ಭಾಷೆ. 1956 ನಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆ ಆಗಿದೆ. 1973 ರಲ್ಲಿ ದೇವರಾಜ ಅರಸು ಅವರ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಎಂದು ನಾಮಕರಣವಾಯಿತು ಎಂದರು. ಇದಾಗಿ 50 ವರ್ಷಗಳಾದರೂ ಬಿಜೆಪಿ ಸರ್ಕಾರ ಇದರ ಆಚರಣೆ ಮಾಡಲಿಲ್ಲ. ನಮ್ಮ ಸರ್ಕಾರ ಇದನ್ನು ಇಡೀ ರಾಜ್ಯದಲ್ಲಿ ಆಚರಣೆ ಮಾಡಿತು ಎಂದರು. ಇದರ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆ ಸ್ಥಾಪನೆ ಮಾಡಲಾಗಿದೆ ಎಂದರು.

ಹತ್ತಾರು ವರ್ಷಗಳಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಣೆಯಾಗಲಿದೆ

ಕಲ್ಯಾಣ ಕರ್ನಾಟಕ ಎಂದು ನಾಮಕರಣವಾಗಿದ್ದು, 371ಜೆ ಕಾಯ್ದೆಯಾಗಿದ್ದು ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ. ಕಲ್ಯಾಣ ಕರ್ನಾಟಕ ದಲ್ಲಿ 70%ಮೀಸಲಾತಿ ಹಾಗೂ ರಾಜ್ಯದಲ್ಲಿ 8% ಮೀಸಲಾತಿ ನೀಡುವ ಶಿಫಾರಸ್ಸನ್ನು ಯಥಾವತ್ತು ಜಾರಿ ಮಾಡಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ 3000 ಕೋಟಿ ಹಾಗೂ ಈಗ 5000 ಕೋಟಿ ಅನುದಾನವನ್ನು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನೀಡಲಾಗಿದೆ. ಆರೋಗ್ಯ ಮತ್ತು ಶಿಕ್ಷಣದಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದಲ್ಲಿ ಈ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹತ್ತಾರು ವರ್ಷಗಳಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಣೆಯಾಗಲಿದೆ ಎಂಬ ನಂಬಿಕೆ ನಮಗಿದೆ. ಅನುದಾನ ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕು ಎಂದರು.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಕನ್ನಡಿಗರು ಖಂಡಿಸಬೇಕು
ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ನಮ್ಮ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು. ಕನ್ನಡದ ವಿಷಯದಲ್ಲಿ ನಾವು ಸದಾ ಮುಂಚೂಣಿಯಲ್ಲಿರುತ್ತೇವೆ ಎಂದರು. ಕನ್ನಡದ ಪರಧ್ವನಿ ಎತ್ತುವ ಕೆಲಸವನ್ನು ಮಾಡುತ್ತೇನೆ ಎಂದ ಮುಖ್ಯಮಂತ್ರಿಗಳು ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಪರಿಸರ ತೀರುವಳಿ ಸಿಕ್ಕಿದ ಕೂಡಲೇ ಜಾರಿ ಮಾಡಲಾಗುವುದು ಎಂದರು. ಕೇಂದ್ರ ಸರ್ಕಾರ ಕೃಷ್ಣಾ ಮೂರನೇ ಹಂತ ಯೋಜನೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ . ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಕನ್ನಡಿಗರು ಖಂಡಿಸಬೇಕು ಎಂದರು.

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ: ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಕನ್ನಡಪರವಾದ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು. ಕರ್ನಾಟಕಕ್ಕೆ ಅನ್ಯಾಯವಾದಾಗ ಒಗ್ಗಟ್ಟಿನಿಂದ ಹೊರಡಬೇಕು. ಕನ್ನಡಿಗರು ಯಾವುದಕ್ಕೂ ಕಡಿಮೆಯಿಲ್ಲ. ಕನ್ನಡ ಭಾಷೆ, ನೆಲ, ಜಲ, ಗಡಿಗಳ ರಕ್ಷಣೆಗೆ ಪಣ ತೊಡೋಣ ಎಂದರು.

ಮರ್ಯಾದೆ ಹತ್ಯೆ ತಡೆಯಲು ಕಾಯ್ದೆ: ಸಿಎಂ ಭರವಸೆ
ಮರ್ಯಾದೆ ಹತ್ಯೆ ತಡೆಯಲು ಕಾಯ್ದೆಯನ್ನು ರೂಪಿಸಿ ಜಾರಿ ಮಾಡಬೇಕೆಂಬ ಮನವಿಯನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಾಡೋಜ ಡಾ: ಬರಗೂರು ರಾಮಚಂದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಜನರಾಜ್ಯೋತ್ಸವ ಪುರಸ್ಕೃತರು ಹಾಗೂ ಡಾ:ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಅರವಿಂದಕುಮಾರ್ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಮೊದಲಾದವರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page