Monday, December 29, 2025

ಸತ್ಯ | ನ್ಯಾಯ |ಧರ್ಮ

ಉಕ್ರೇನ್ ಯುದ್ಧ ಅಂತ್ಯಕ್ಕೆ ಟ್ರಂಪ್–ಝೆಲೆನ್ಸ್ಕಿ ಚರ್ಚೆ; ಗಡುವಿಲ್ಲ ಎಂದ ಅಮೆರಿಕ ಅಧ್ಯಕ್ಷ

ಉಕ್ರೇನ್–ರಷ್ಯಾ ಯುದ್ಧವನ್ನು ಕೊನೆಗೊಳಿಸುವ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಮಹತ್ವದ ಮಾತುಕತೆ ನಡೆಸಿದರು. ಈ ಮಾತುಕತೆ ಬಳಿಕ ಮಾತನಾಡಿದ ಟ್ರಂಪ್, ಯುದ್ಧ ನಿಲ್ಲಿಸುವುದಕ್ಕೆ ಯಾವುದೇ ನಿರ್ದಿಷ್ಟ ಗಡುವು ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿ, ಉಕ್ರೇನ್ ಯುದ್ಧ ಅಂತ್ಯಗೊಳಿಸುವತ್ತ ಗಮನ ಹರಿಸಲಾಗಿದೆ ಎಂದರು.

ರಷ್ಯಾದೊಂದಿಗಿನ ಯುದ್ಧವನ್ನು ಅಂತ್ಯಗೊಳಿಸುವ ನಿರ್ಣಾಯಕ ರಾಜತಾಂತ್ರಿಕ ಚರ್ಚೆಗಳ ಭಾಗವಾಗಿ ಟ್ರಂಪ್ ತಮ್ಮ ಫ್ಲೋರಿಡಾ ಎಸ್ಟೇಟ್‌ಗೆ ಝೆಲೆನ್ಸ್ಕಿಯನ್ನು ಆಹ್ವಾನಿಸಿದ್ದರು. ಉಕ್ರೇನ್ ಯುದ್ಧಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಅಂತಿಮ ಹಂತದಲ್ಲಿವೆ. ಇಲ್ಲದಿದ್ದರೆ, ಸಂಘರ್ಷ ದೀರ್ಘಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು.

ಝೆಲೆನ್ಸ್ಕಿಯೊಂದಿಗೆ ಭೇಟಿ ನಡೆಸುವ ಕೆಲವೇ ಗಂಟೆಗಳ ಮೊದಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸಿರುವುದಾಗಿ ಟ್ರಂಪ್ ತಿಳಿಸಿದರು. ಉಕ್ರೇನ್‌ನಲ್ಲಿನ ಸಂಘರ್ಷ ಕೊನೆಗೊಳಿಸುವ ಸಲುವಾಗಿ ಪೂರ್ವ ಡಾನ್‌ಬಾಸ್ ಪ್ರದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ರಷ್ಯಾ ಕೀವ್ ಮೇಲೆ ಒತ್ತಡ ಹೇರುತ್ತಿರುವುದಾಗಿ ತಿಳಿದುಬಂದಿದೆ.

ಉಕ್ರೇನ್ ಭದ್ರತೆಯನ್ನು ಖಾತರಿಪಡಿಸುವ ಬಲಿಷ್ಠ ಒಪ್ಪಂದ ರೂಪುಗೊಳ್ಳಲಿದ್ದು, ಅದರಲ್ಲಿ ಯುರೋಪಿಯನ್ ರಾಷ್ಟ್ರಗಳೂ ಭಾಗಿಯಾಗಲಿವೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು. 20 ಅಂಶಗಳ ಶಾಂತಿ ಯೋಜನೆಯ ಕುರಿತು ಶೇ. 90ರಷ್ಟು ಒಮ್ಮತ ಸಾಧಿಸಲಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಝೆಲೆನ್ಸ್ಕಿ ಮಾತನಾಡಿ, ಅಮೆರಿಕ–ಉಕ್ರೇನ್ ಭದ್ರತಾ ಖಾತರಿಗಳ ಕುರಿತು ಶೇ. 100ರಷ್ಟು ಒಪ್ಪಂದವಾಗಿದೆ. ಅಮೆರಿಕ–ಯುರೋಪ್–ಉಕ್ರೇನ್ ಭದ್ರತಾ ವ್ಯವಸ್ಥೆಗಳ ಕುರಿತೂ ಬಹುತೇಕ ಪೂರ್ಣ ಒಮ್ಮತ ನಿರ್ಮಾಣವಾಗಿದೆ ಎಂದರು. ಸಮೃದ್ಧಿ ಯೋಜನೆಯನ್ನು ಅಂತಿಮಗೊಳಿಸಲಾಗುತ್ತಿದ್ದು, ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಶಾಶ್ವತ ಶಾಂತಿ ಸಾಧಿಸಲು ಭದ್ರತಾ ಖಾತರಿಗಳೇ ಪ್ರಮುಖ ಅಂಶವಾಗಲಿವೆ ಎಂದು ಝೆಲೆನ್ಸ್ಕಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page