Monday, December 29, 2025

ಸತ್ಯ | ನ್ಯಾಯ |ಧರ್ಮ

ಕುಲ್ದೀಪ್ ಸಿಂಗ್ ಸೆನಗರ್ ಜಾಮೀನು ವಿರೋಧಿಸಿ ಜಂತರ್ ಮಂತರ್‌ ಬಳಿ ಪ್ರತಿಭಟನೆ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಮಾಜಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್‌ಗೆ ಮಂಜೂರಾಗಿರುವ ಜಾಮೀನನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಹೈಕೋರ್ಟ್ ಸೆಂಗಾರ್‌ನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿರುವುದನ್ನು ವಿರೋಧಿಸಿ ಆಯೋಜಿಸಲಾಗಿದ್ದ ಈ ಆಂದೋಲನಕ್ಕೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿಗಳು ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ಸೂಚಿಸಿವೆ.

ಪ್ರತಿಭಟನೆಯ ವೇಳೆ ಸಂತ್ರಸ್ತೆ ತನ್ನ ಅಳಲು ತೋಡಿಕೊಂಡಿದ್ದು, “ನನ್ನ ತಂದೆ ಮತ್ತು ಕುಟುಂಬದವರನ್ನು ಕೊಲ್ಲಲಾಗಿದೆ, ಸಾಕ್ಷಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಮತ್ತು ತನ್ನ ಪತಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ” ಎಂದು ನೋವು ಹಂಚಿಕೊಂಡಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಈ ಪ್ರತಿಭಟನೆಯ ನಡುವೆ ಸೆಂಗಾರ್ ಬೆಂಬಲಿಗರು ಹಠಾತ್ ಆಗಿ ನುಗ್ಗಿ ಘೋಷಣೆ ಕೂಗಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು, ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅದಿತಿ ಅವರು ಮಾತನಾಡಿ, ಹಾಥ್ರಸ್‌ನಿಂದ ಉನ್ನಾವೊವರೆಗೆ ಅತ್ಯಾಚಾರ ಆರೋಪಿಗಳನ್ನು ರಕ್ಷಿಸುವ ಮತ್ತು ಸಂತ್ರಸ್ತೆಯರನ್ನು ಬೆದರಿಸುವ ಪ್ರವೃತ್ತಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಮತ್ತು ವಕೀಲರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಇಂದು (ಸೋಮವಾರ) ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ನಡೆಯುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page