Monday, December 29, 2025

ಸತ್ಯ | ನ್ಯಾಯ |ಧರ್ಮ

ಹಾಸನದಲ್ಲಿ ಜೆಡಿಎಸ್ 2 ಲಕ್ಷ ಜನರ ಶಕ್ತಿ ಪ್ರದರ್ಶನ – ಎಚ್.ಡಿ. ದೇವೇಗೌಡ

ಹಾಸನ: ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಪೂರ್ವಭಾವಿ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪಕ್ಷದ ಸ್ಥಿತಿ, ತಮ್ಮ ರಾಜಕೀಯ ಜೀವನ ಹಾಗೂ ಮುಂದಿನ ಹೋರಾಟದ ಕುರಿತು ಭಾವನಾತ್ಮಕ ಹಾಗೂ ತೀವ್ರ ಭಾಷಣ ಮಾಡಿದರು.

ಜೆಡಿಎಸ್ ರಾಷ್ಟ್ರಮಟ್ಟದಲ್ಲಿ ಇಲ್ಲವೆಂದು ಹೇಳುವವರ ವಿರುದ್ಧ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಇಂದು ಕೂಡ ಸದೃಢವಾಗಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಗುರುತಿಸುವಂತೆ ಉಳಿಸಿ ಬೆಳೆಸಿರುವುದಕ್ಕೆ ಕಾರ್ಯಕರ್ತರೇ ಕಾರಣ ಎಂದು ಸ್ಪಷ್ಟಪಡಿಸಿದರು. ನಾವು ಮೋದಿಯವರ ಜೊತೆ ಗುರುತಿಸಿಕೊಂಡಾಗ ಕೇರಳದ ನಮ್ಮ ಸಚಿವರು ಹಾಗೂ ನಾಯಕರು ನಮ್ಮ ಬಳಿ ಬಂದು ನಾವು ಎಡಪಂಥೀಯ ಪಕ್ಷದ ಜೊತೆ ಗುರುತಿಸಿಕೊಳ್ಳಬೇಕು, ಅನುಮತಿ ನೀಡಿ ಎಂದು ಕೇಳಿದರು. ಅವರ ಶ್ರೇಯೋಭಿವೃದ್ಧಿಗಾಗಿ ನಾನು ಅನುಮತಿ ನೀಡಿದೆ. ಸ್ಥಳೀಯ ಸಂಸ್ಥೆಗಳಲ್ಲೂ ಸಹಕಾರ ನೀಡಿದ್ದೇವೆ. ಮಹಾರಾಷ್ಟ್ರದಲ್ಲಿ ಯಾವುದೇ ಹಣದ ಸಹಕಾರವಿಲ್ಲದೇ ಐವರು ಜಿ.ಪಂ. ಗೆದ್ದಿದ್ದಾರೆ ಎಂದು ಹೇಳಿದರು. ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾದರೂ, ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ನನಗೆ ರಾಷ್ಟ್ರಮಟ್ಟದ ಹೊಣೆಗಾರಿಕೆ ನೀಡಲಾಗಿತ್ತು ಎಂದು ನೆನಪಿಸಿದರು.

ಹಾಸನ ಜಿಲ್ಲೆ ದೇವೇಗೌಡರು ಹುಟ್ಟಿದ ಹಾಗೂ ಅವರನ್ನು ಬೆಳೆಸಿದ ಜಿಲ್ಲೆ. 1962ರಿಂದ 2025ರವರೆಗೆ ಈ ಜಿಲ್ಲೆ ನನಗೆ ಶಕ್ತಿ ನೀಡಿದೆ. ಕಾಂಗ್ರೆಸ್ ಕಳೆದ ಎರಡುವರೆ ವರ್ಷಗಳಲ್ಲಿ ಎರಡು ಬಾರಿ ಹಾಸನದಲ್ಲೇ ಬೃಹತ್ ಸಮಾವೇಶ ನಡೆಸಿದೆ. ಬೇರೆ ಜಿಲ್ಲೆಗಳಿರಲಿಲ್ಲವೇ? ಇದು ಹಾಸನ ಜೆಡಿಎಸ್ ಭದ್ರಕೋಟೆ ಎಂಬುದನ್ನು ಮುರಿಯಲು ಅವರ ಪ್ರಯತ್ನ ಎಂದು ಕಿಡಿಕಾರಿದರು. ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ಅವರು, ನನಗೆ ಕಾಲಲ್ಲಿ ಶಕ್ತಿ ಇಲ್ಲ ಆದರೆ ತಲೆಯಲ್ಲಿ ಇದೆ. ಇಬ್ಬರು ಎತ್ತಿಕೊಂಡು ಬಂದರೂ ಹೋರಾಟ ಮಾಡುವ ಸಾಮರ್ಥ್ಯ ನನಗಿದೆ ಎಂದು ಹೇಳಿದರು.

ತಮ್ಮ ಜೀವನದ ವೈಯಕ್ತಿಕ ಘಟನೆಗಳನ್ನು ಹಂಚಿಕೊಂಡ ದೇವೇಗೌಡರು, ನಾನು ಎಂದೂ ಪ್ರಧಾನಿಯಾಗುತ್ತೇನೆ ಎಂದು ಕನಸು ಕಂಡವನು ಅಲ್ಲ. ಅದು ಆಕಸ್ಮಿಕ, ನಮ್ಮ ಪಕ್ಷದಿಂದ 16 ಲೋಕಸಭಾ ಸದಸ್ಯರು ಗೆದ್ದಿದ್ದರಿಂದ, ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದರಿಂದ, 13 ಪಕ್ಷಗಳ ನಾಯಕರು ನನ್ನನ್ನು ಪ್ರಧಾನಿಯಾಗಲು ಒಪ್ಪಿಸಿದರು. ಇದಕ್ಕೆ ಕಾರಣ ನಾನಲ್ಲ, ನೀವು ಕಾರ್ಯಕರ್ತರು ಎಂದು ಹೇಳಿದರು. ಜ್ಯೋತಿ ಬಸು ಪ್ರಧಾನಿಯಾಗಬೇಕು ಎಂದು ನಾವು ಹೇಳಿದ್ದೆವು, ಅವರು ನಿರಾಕರಿಸಿದ ನಂತರ ನನ್ನ ಹೆಸರು ಘೋಷಿಸಲಾಯಿತು ಎಂದು ವಿವರಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page