Tuesday, December 30, 2025

ಸತ್ಯ | ನ್ಯಾಯ |ಧರ್ಮ

ಪುಟಿನ್ ನಿವಾಸದ ಮೇಲೆ ಡ್ರೋನ್ ದಾಳಿ ಆರೋಪ: ಉಕ್ರೇನ್ ತಿರಸ್ಕಾರ

ಮಾಸ್ಕೋ–ಸೇಂಟ್ ಪೀಟರ್ಸ್‌ಬರ್ಗ್ ನಡುವಿನ ನೊವ್ಗೊರೊಡ್ ಪ್ರದೇಶದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ಸೋಮವಾರ ಗಂಭೀರ ಆರೋಪ ಮಾಡಿದೆ. ಈ ಘಟನೆಯನ್ನು “ಭಯೋತ್ಪಾದಕ ದಾಳಿ” ಎಂದು ಕರೆದಿರುವ ಮಸ್ಕೋ, ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಕುರಿತು ತನ್ನ ಮಾತುಕತೆ ನಿಲುವನ್ನು ಮರುಪರಿಶೀಲಿಸುವುದಾಗಿ ಘೋಷಿಸಿದೆ.

ರಷ್ಯಾದ ವಿದೇಶಾಂಗ ಸಚಿವ ಸೆರ್ಗೇ ಲಾವ್ರೊವ್ ಹೇಳಿಕೆ ನೀಡಿದ್ದು, ಭಾನುವಾರ ರಾತ್ರಿ ರಿಂದ ಸೋಮವಾರ ಬೆಳಗ್ಗಿನವರೆಗೆ ಪುಟಿನ್ ನಿವಾಸದತ್ತ ಉಕ್ರೇನ್ 91 ಡ್ರೋನ್‌ಗಳನ್ನು ಹಾರಿಸಿದೆ ಎಂದು ಆರೋಪಿಸಿದ್ದಾರೆ. ದಾಳಿ ನೊವ್ಗೊರೊಡ್ ಪ್ರದೇಶದಲ್ಲಿ ನಡೆದಿದ್ದು, ರಷ್ಯಾದ ಭದ್ರತಾ ಪಡೆಗಳು ಡ್ರೋನ್‌ಗಳನ್ನು ತಡೆದಿವೆ ಎಂದು ಅವರು ತಿಳಿಸಿದ್ದಾರೆ.

ಆದರೆ ಈ ಆರೋಪಗಳನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ಪುಟಿನ್ ನಿವಾಸದ ಮೇಲೆ ಉಕ್ರೇನ್ ದಾಳಿ ನಡೆಸಿದೆ ಎಂಬುದು ಸಂಪೂರ್ಣ ಕಟ್ಟುಕಥೆ. ಕೀವ್ ಸೇರಿದಂತೆ ಉಕ್ರೇನ್ ನಗರಗಳ ಮೇಲೆ ಹೆಚ್ಚುವರಿ ದಾಳಿಗಳನ್ನು ನಡೆಸಲು ನೆಪ ಸೃಷ್ಟಿಸುವುದೇ ರಷ್ಯಾದ ಉದ್ದೇಶ” ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ. ಯುದ್ಧವನ್ನು ಕೊನೆಗೊಳಿಸಲು ಅಗತ್ಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲು ರಷ್ಯಾ ನಿರಾಕರಿಸುತ್ತಿರುವುದನ್ನು ಈ ಹೇಳಿಕೆಗಳು ತೋರಿಸುತ್ತವೆ ಎಂದೂ ಅವರು ಹೇಳಿದರು.

ಇದೀಗ ದಾಳಿ ನಡೆದ ವೇಳೆ ಅಧ್ಯಕ್ಷ ಪುಟಿನ್ ತಮ್ಮ ನಿವಾಸದಲ್ಲಿದ್ದರೋ ಇಲ್ಲವೋ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಘಟನೆಯ ಬಗ್ಗೆ ರಷ್ಯಾ–ಉಕ್ರೇನ್ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಯುದ್ಧ ಪರಿಸ್ಥಿತಿ ಮತ್ತಷ್ಟು ಗಂಭೀರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page