Friday, January 2, 2026

ಸತ್ಯ | ನ್ಯಾಯ |ಧರ್ಮ

ಸ್ವಿಟ್ಜರ್ಲೆಂಡ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಭೀಕರ ಸ್ಫೋಟ: 40 ಮಂದಿ ಸಾವು ಮತ್ತು ನೂರಕ್ಕೂ ಹೆಚ್ಚು ಜನರಿಗೆ ಗಾಯ

ಹೊಸ ವರ್ಷದ ಸಂಭ್ರಮದಲ್ಲಿದ್ದ ಸ್ವಿಟ್ಜರ್ಲೆಂಡ್‌ನ ಕ್ರಾನ್ಸ್ ಮೊಂಟಾನಾ ಪಟ್ಟಣದ ಐಷಾರಾಮಿ ಬಾರ್ ಒಂದರಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸುಮಾರು 40 ಮಂದಿ ಸಾವಿಗೀಡಾಗಿದ್ದು ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇಟಲಿ ವಿದೇಶಾಂಗ ಸಚಿವಾಲಯವು ಸ್ವಿಿಸ್ ಪೊಲೀಸರನ್ನು ಉಲ್ಲೇಖಿಸಿ ಮಾಹಿತಿ ನೀಡಿದೆ.

ಈ ಘಟನೆಯು ಲೆ ಕಾನ್ಟ್ಸೆಲೇಷನ್ ಎಂಬ ಹೆಸರಿನ ಬಾರ್‌ನ ಬೇಸ್‌ಮೆಂಟ್ ಮತ್ತು ಲಾಂಜ್‌ನಲ್ಲಿ ಸಂಭವಿಸಿದ್ದು ಸ್ಫೋಟದ ತೀವ್ರತೆಗೆ ಇಡೀ ಪ್ರದೇಶ ನಲುಗಿಹೋಗಿದೆ. ಘಟನೆಯ ಸಮಯದಲ್ಲಿ ಬಾರ್‌ನಲ್ಲಿ 150ಕ್ಕೂ ಹೆಚ್ಚು ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದ್ದು ಗಾಯಾಳುಗಳಿಂದ ಸ್ಥಳೀಯ ಆಸ್ಪತ್ರೆಗಳು ಭರ್ತಿಯಾಗಿವೆ.

ಇದು ಭಯೋತ್ಪಾದನಾ ದಾಳಿಯಲ್ಲ ಎಂದು ಸ್ವಿಿಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದು ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ಅಂದಾಜಿಸಿದ್ದಾರೆ. ದೇಶದಲ್ಲಿ ಸದ್ಯ ಬರಗಾಲದ ಪರಿಸ್ಥಿತಿಯಿದ್ದು ಕಾಡ್ಗಿಚ್ಚಿನ ಅಪಾಯ ಹೆಚ್ಚಿರುವ ನಡುವೆಯೇ ಈ ದುರಂತ ಸಂಭವಿಸಿದೆ.

ಹೊಸ ವರ್ಷದ ಪ್ರಯುಕ್ತ ಸಿಡಿಸಲಾದ ಬಾಣಬಿರುಸುಗಳು ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯ ಮಾಧ್ಯಮಗಳು ಸಂಶಯ ವ್ಯಕ್ತಪಡಿಸಿವೆಯಾದರೂ ಪೊಲೀಸರು ತನಿಖೆಯ ನಂತರವೇ ನಿಖರ ಕಾರಣ ತಿಳಿಸುವುದಾಗಿ ಹೇಳಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಕ್ರಾನ್ಸ್ ಮೊಂಟಾನಾ ಮೇಲೆ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದ್ದು ಸ್ವಿಟ್ಜರ್ಲೆಂಡ್‌ನ ಪ್ರಾಸಿಕ್ಯೂಟರ್ ಜನರಲ್ ಅವರು ಈ ಗಂಭೀರ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page