Friday, January 2, 2026

ಸತ್ಯ | ನ್ಯಾಯ |ಧರ್ಮ

ಗಿಗ್ ಕಾರ್ಮಿಕರಿಗಾಗಿ ಹೊಸ ಕರಡು ನಿಯಮ ಜಾರಿ; ವಿಶೇಷ ಸೌಲಭ್ಯಗಳ ಪ್ರಕಟಿಸಿದ ಸರ್ಕಾರ

ನವದೆಹಲಿ: ಭಾರತದಲ್ಲಿ ವೇಗವಾಗಿ ವಿಸ್ತಾರಗೊಳ್ಳುತ್ತಿರುವ ಗಿಗ್ ಆರ್ಥಿಕತೆಯನ್ನು ಕಾನೂನುಬದ್ಧ ಸಾಮಾಜಿಕ ಭದ್ರತಾ ಚೌಕಟ್ಟಿನೊಳಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಜೊಮಾಟೊ, ಸ್ವಿಗ್ಗಿ, ಬ್ಲಿಂಕಿಟ್ ಸೇರಿದಂತೆ ಡೆಲಿವರಿ ವೇದಿಕೆಗಳು ಹಾಗೂ ಕ್ಯಾಬ್ ಸೇವೆಗಳೊಂದಿಗೆ ಕೆಲಸ ಮಾಡುವ ಗಿಗ್ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ ಸರ್ಕಾರ ಹೊಸ ಸಾಮಾಜಿಕ ಭದ್ರತಾ ಸಂಹಿತೆಯ ಕರಡು ನಿಯಮಗಳನ್ನು ಪ್ರಕಟಿಸಿದೆ.

ಕರಡು ನಿಯಮಗಳ ಪ್ರಕಾರ, ಒಂದೇ ಅಗ್ರಿಗೇಟರ್‌ ಕಂಪನಿಗೆ ಸಂಬಂಧಿಸಿದ ಗಿಗ್ ಕಾರ್ಮಿಕರು ವರ್ಷದಲ್ಲಿ ಕನಿಷ್ಠ 90 ದಿನಗಳು ಕೆಲಸ ಮಾಡಿರಬೇಕು. ಹಲವು ವೇದಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಮಿತಿಯನ್ನು 120 ದಿನಗಳಾಗಿ ನಿಗದಿಪಡಿಸಲಾಗಿದೆ. ಒಂದೇ ದಿನದಲ್ಲಿ ಮೂರು ವಿಭಿನ್ನ ಕಂಪನಿಗಳಿಗೆ ಕೆಲಸ ಮಾಡಿದರೆ, ಅದನ್ನು ಮೂರು ಕೆಲಸದ ದಿನಗಳಾಗಿ ಪರಿಗಣಿಸಲಾಗುತ್ತದೆ. ಇದರಿಂದ ಬಹು ವೇದಿಕೆಗಳಲ್ಲಿ ಕೆಲಸ ಮಾಡುವವರಿಗೆ ಅರ್ಹತೆ ಪಡೆಯುವುದು ಸುಲಭವಾಗಲಿದೆ.

ನೋಂದಣಿ ಕಡ್ಡಾಯ
ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಸಲುವಾಗಿ ಗಿಗ್ ಕಾರ್ಮಿಕರಿಗೆ ನೋಂದಣಿ ಕಡ್ಡಾಯಗೊಳಿಸಲಾಗಿದೆ. 16 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಗಿಗ್ ಕೆಲಸಗಾರನು ಆಧಾರ್ ಕಾರ್ಡ್‌ಗೆ ಲಿಂಕ್ ಆಗುವಂತೆ ನೋಂದಾಯಿಸಿಕೊಳ್ಳಬೇಕು. ಕಾರ್ಮಿಕರ ವಿವರಗಳನ್ನು ಇ-ಶ್ರಮ್ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಪಿಎಫ್ ಹೊಂದಿರುವ ಉದ್ಯೋಗಿಗಳಿಗೆ ಶಾಶ್ವತ ಖಾತೆ ಸಂಖ್ಯೆ ಇರುವಂತೆ, ಗಿಗ್ ಕಾರ್ಮಿಕರಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತದೆ. ನೋಂದಾಯಿತ ಪ್ರತಿಯೊಬ್ಬ ಕಾರ್ಮಿಕನಿಗೆ ಡಿಜಿಟಲ್ ಗುರುತಿನ ಚೀಟಿ ಒದಗಿಸಲಾಗುತ್ತದೆ.

ಅಗ್ರಿಗೇಟರ್‌ಗಳಿಗೆ ಜವಾಬ್ದಾರಿ
ತಮ್ಮ ವೇದಿಕೆಗಳ ಮೂಲಕ ಕೆಲಸ ಮಾಡುವ ಎಲ್ಲ ಗಿಗ್ ಕಾರ್ಮಿಕರ ವಿವರಗಳನ್ನು ಸರ್ಕಾರಿ ಪೋರ್ಟಲ್‌ನಲ್ಲಿ ನವೀಕರಿಸುವ ಜವಾಬ್ದಾರಿ ಅಗ್ರಿಗೇಟರ್‌ ಕಂಪನಿಗಳ ಮೇಲಿದೆ. ಮೂರನೇ ವ್ಯಕ್ತಿ ಅಥವಾ ಪಾಲುದಾರ ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುವ ಕಾರ್ಮಿಕರೂ ಈ ವ್ಯಾಪ್ತಿಗೆ ಒಳಪಡುವರು.

ಲಭ್ಯವಿರುವ ಪ್ರಯೋಜನಗಳು
ಹೊಸ ನಿಯಮಗಳು ಗಿಗ್ ಕಾರ್ಮಿಕರಿಗೆ ಈವರೆಗೆ ಶಾಶ್ವತ ಉದ್ಯೋಗಿಗಳಿಗೆ ಮಾತ್ರ ಲಭ್ಯವಿದ್ದ ಹಲವು ರಕ್ಷಣೆಯನ್ನು ಒದಗಿಸುವ ಗುರಿ ಹೊಂದಿವೆ.
* ಆರೋಗ್ಯ ಮತ್ತು ಜೀವ ವಿಮೆ: ಉಚಿತ ಅಥವಾ ಸಬ್ಸಿಡಿ ದರದ ಆರೋಗ್ಯ ವಿಮೆ
* ಅಪಘಾತ ವಿಮೆ: ಕೆಲಸದ ವೇಳೆ ಸಂಭವಿಸುವ ಅಪಘಾತಗಳಿಗೆ ವೈಯಕ್ತಿಕ ರಕ್ಷಣೆ
* ಆಯುಷ್ಮಾನ್ ಭಾರತ್: ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ
* ಪಿಂಚಣಿ ಯೋಜನೆ: ಭವಿಷ್ಯದಲ್ಲಿ ಕಾರ್ಮಿಕರು ಮತ್ತು ಕಂಪನಿಗಳ ಸಂಯುಕ್ತ ಕೊಡುಗೆ ಆಧಾರಿತ ಪಿಂಚಣಿ ವ್ಯವಸ್ಥೆ

ಅರ್ಹತೆ ಮತ್ತು ಮಿತಿಗಳು
ಕರಡು ನಿಯಮಗಳಂತೆ, 60 ವರ್ಷ ದಾಟಿದ ಗಿಗ್ ಕಾರ್ಮಿಕರು ಈ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅನರ್ಹರಾಗುತ್ತಾರೆ. ಜೊತೆಗೆ, ಪ್ರಯೋಜನಗಳನ್ನು ಮುಂದುವರಿಸಿಕೊಳ್ಳಲು ಪ್ರತಿವರ್ಷ ಕನಿಷ್ಠ 90 ಅಥವಾ 120 ಕೆಲಸದ ದಿನಗಳನ್ನು ಪೂರೈಸಬೇಕು. ಅಗತ್ಯ ದಿನಗಳನ್ನು ಪೂರೈಸದಿದ್ದರೆ ಮುಂದಿನ ವರ್ಷ ಸೌಲಭ್ಯ ನಿರಾಕರಿಸುವ ಸಾಧ್ಯತೆ ಇದೆ.

ರಾಷ್ಟ್ರೀಯ ಸಾಮಾಜಿಕ ಭದ್ರತಾ ಮಂಡಳಿ
ನಿಯಮಗಳ ಜಾರಿಗೆ ಮೇಲ್ವಿಚಾರಣೆ ವಹಿಸಲು ರಾಷ್ಟ್ರೀಯ ಸಾಮಾಜಿಕ ಭದ್ರತಾ ಮಂಡಳಿಯನ್ನು ಸ್ಥಾಪಿಸುವ ಪ್ರಸ್ತಾಪವೂ ಇದೆ. ಈ ಮಂಡಳಿಯಲ್ಲಿ ಸರ್ಕಾರ, ಕಾರ್ಮಿಕ ಸಂಘಟನೆಗಳು ಮತ್ತು ಕಂಪನಿಗಳ ತಲಾ ಐದು ಪ್ರತಿನಿಧಿಗಳು ಇರಲಿದ್ದು, ಗಿಗ್ ಕಾರ್ಮಿಕರ ನಿಖರ ಸಂಖ್ಯೆಯನ್ನು ಗುರುತಿಸುವುದು ಹಾಗೂ ಹೊಸ ಕಲ್ಯಾಣ ನೀತಿಗಳನ್ನು ರೂಪಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page