Friday, January 2, 2026

ಸತ್ಯ | ನ್ಯಾಯ |ಧರ್ಮ

ಶಾಸಕ ಸುರೇಶ್ ಕುಮಾರ್ 702 ಕಿ.ಮೀ. ಸೈಕಲ್ ಯಾತ್ರೆ: ನಯಾಪೈಸೆಯ ಜನೋಪಯೋಗಿ ಉದ್ದೇಶವೇನು?

ರಾಜಾಜಿನಗರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಕನ್ಯಾಕುಮಾರಿವರೆಗೆ 702 ಕಿಲೋಮೀಟರ್ ಸೈಕಲ್ ಯಾತ್ರೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆಗೂ ಪಾತ್ರವಾಗಿದೆ. ಆದರೆ ಈ ಸಾಹಸದ ಹಿಂದೆ ಇರುವ ಜನೋಪಯೋಗಿ ಉದ್ದೇಶವೇನು ಎಂಬ ಪ್ರಶ್ನೆ ಎದುರಾಗಿದೆ.

70 ವರ್ಷದ ಶಾಸಕನೊಬ್ಬ ಇಷ್ಟು ದೂರ ಸೈಕಲ್ ತುಳಿದಿರುವುದು ವೈಯಕ್ತಿಕ ಶಿಸ್ತು ಮತ್ತು ದೈಹಿಕ ಸಾಮರ್ಥ್ಯದ ಉದಾಹರಣೆಯಾಗಿ ಕಾಣಬಹುದು. ಆದರೆ ಈ ಪ್ರಯಾಣದ ಮೂಲಕ ಸಮಾಜಕ್ಕೆ ಯಾವ ರೀತಿಯ ಸ್ಪಷ್ಟ ಸಂದೇಶ ಅಥವಾ ಜಾಗೃತಿ ಮೂಡಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಶಾಸಕರು ಪ್ರಯಾಣದುದ್ದಕ್ಕೂ ತಮ್ಮ ವೈಯಕ್ತಿಕ ಫಿಟ್ನೆಸ್ ಸಾಬೀತುಪಡಿಸಿದರೇ ಹೊರತು ಬೇರೇನಿದೆ ಎಂಬ ಪ್ರಶ್ನೆ ಎದುರಾಗಿದೆ.

ರಾಜಕೀಯ ನಾಯಕರು ನಡೆಸುವ ಇಂತಹ ಯಾತ್ರೆಗಳು ಸಾಮಾನ್ಯವಾಗಿ ನಿರ್ದಿಷ್ಟ ಸಾಮಾಜಿಕ ಸಮಸ್ಯೆ, ಸರ್ಕಾರಗಳ ನೀತಿ ವೈಫಲ್ಯ, ಜನಸಾಮಾನ್ಯರ ಬೇಡಿಕೆಗಳು ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಮುನ್ನೆಲೆಗೆ ತರುವ ಉದ್ದೇಶ ಹೊಂದಿರುತ್ತವೆ. ಆದರೆ ಈ ಸೈಕಲ್ ಯಾತ್ರೆಯಲ್ಲಿ ಅಂತಹ ಯಾವುದೇ ಘೋಷಿತ ಗುರಿ, ಸಾಮಾಜಿಕ ಅಭಿಯಾನ ಅಥವಾ ಸಾರ್ವಜನಿಕ ಬೇಡಿಕೆಗಳ ಪ್ರಸ್ತಾಪ ಕಂಡುಬರುವುದಿಲ್ಲ.

ಫಿಟ್ನೆಸ್ ಮತ್ತು ಆರೋಗ್ಯದ ಕುರಿತು ಸಂದೇಶ ನೀಡಲಾಗಿದೆ ಎನ್ನಲಾಗಿದ್ದರೂ, ರಾಜ್ಯದಲ್ಲಿ ಆರೋಗ್ಯ, ಮೂಲಸೌಕರ್ಯ, ಸರ್ಕಾರಿ ಆಸ್ಪತ್ರೆಗಳ ಸ್ಥಿತಿ, ಗ್ರಾಮೀಣ ಪ್ರದೇಶದ ವೈದ್ಯಕೀಯ ಸೌಲಭ್ಯಗಳ ಕೊರತೆ ಜೊತೆಗೆ ಜನಾಂಗೀಯ ಸಂಘರ್ಷಗಳ ಗಂಭೀರ ವಿಚಾರ, ಮರ್ಯಾದಾ ಹತ್ಯೆಗಳು, ತಳ ವರ್ಗಗಳ ಮೇಲಾಗುತ್ತಿರುವ ನಿರಂತರ ದೌರ್ಜನ್ಯ ಮೊದಲಾದ ಗಂಭೀರ ಸಮಸ್ಯೆಗಳ ಕುರಿತು ಯಾವುದೇ ಸ್ಪಷ್ಟ ಧ್ವನಿ ಎತ್ತಲಾಗಿಲ್ಲ. ಹೀಗಾಗಿ ಇದು ಸಾರ್ವಜನಿಕ ಆರೋಗ್ಯ ಚಳವಳಿಯೇ, ಅಥವಾ ಕೇವಲ ವೈಯಕ್ತಿಕ ಫಿಟ್ನೆಸ್ ಪ್ರದರ್ಶನವೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.

ಇನ್ನೂ, ಪ್ರಧಾನಿ ಮೋದಿ ಅವರ ದೂರವಾಣಿ ಕರೆ ಮತ್ತು ಸಾಮಾಜಿಕ ಜಾಲತಾಣದ ಮೆಚ್ಚುಗೆ ಈ ಯಾತ್ರೆಗೆ ಹೆಚ್ಚಿನ ಪ್ರಚಾರ ತಂದುಕೊಟ್ಟಿದ್ದರೂ, ಅದರ ಹಿಂದೆ ಇರುವ ಸಾರ್ವಜನಿಕ ಹಿತಾಸಕ್ತಿಯ ಅಂಶಗಳು ಮಂಕಾಗಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಜನಪ್ರತಿನಿಧಿಯೊಬ್ಬರ ಕಾರ್ಯಚಟುವಟಿಕೆಗಳು ಜನಜೀವನಕ್ಕೆ ನೇರವಾಗಿ ಏನು ಲಾಭ ನೀಡುತ್ತವೆ ಎಂಬುದನ್ನು ಜನರು ನಿರೀಕ್ಷಿಸುವುದು ಸಹಜ.

ರಾಜಕೀಯ ವಿಶ್ಲೇಷಕರ ಪ್ರಕಾರ, ಈ ರೀತಿಯ ಸಾಹಸಗಳು ವೈಯಕ್ತಿಕ ಪ್ರೇರಣೆಗೆ ಕಾರಣವಾಗಬಹುದು. ಆದರೆ ಜನಪ್ರತಿನಿಧಿಗಳಿಂದ ನಿರೀಕ್ಷಿಸಲಾಗುವುದು ನೀತಿ ಮಟ್ಟದ ಹಸ್ತಕ್ಷೇಪ, ಆಡಳಿತಾತ್ಮಕ ಒತ್ತಡ ಹಾಗೂ ಸಮಾಜದ ಸಮಸ್ಯೆಗಳ ಕುರಿತು ಸ್ಪಷ್ಟ ನಿಲುವು. ಆ ಅರ್ಥದಲ್ಲಿ, ಈ ಸೈಕಲ್ ಯಾತ್ರೆ ಜನೋಪಯೋಗಿ ಚಳವಳಿಗಿಂತ ವ್ಯಕ್ತಿಗತ ಸಾಧನೆಯಾಗಿ ಉಳಿದಿದೆ.

ಒಟ್ಟಿನಲ್ಲಿ, ಸುರೇಶ್ ಕುಮಾರ್ ಅವರ 702 ಕಿಲೋಮೀಟರ್ ಸೈಕಲ್ ಪ್ರಯಾಣ ಶಾರೀರಿಕ ಸಾಮರ್ಥ್ಯದ ದೃಷ್ಟಿಯಿಂದ ಶ್ಲಾಘನೀಯವಾಗಬಹುದು. ಆದರೆ ಸಾರ್ವಜನಿಕ ಪ್ರತಿನಿಧಿಯ ದೃಷ್ಟಿಯಿಂದ ನೋಡಿದರೆ, ಇದರಿಂದ ಸಮಾಜಕ್ಕೆ ಸಿಕ್ಕ ಸ್ಪಷ್ಟ ಫಲವೇನು ಎಂಬ ಪ್ರಶ್ನೆಗೆ ಇನ್ನೂ ಸಮಾಧಾನಕರ ಉತ್ತರ ದೊರೆತಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page