Monday, January 5, 2026

ಸತ್ಯ | ನ್ಯಾಯ |ಧರ್ಮ

ವೆನೆಜುವೆಲಾದಲ್ಲಿ ಮತ್ತೆ ಸೇನಾ ದಾಳಿ ಸಾಧ್ಯತೆ: ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್ / ಕ್ಯಾರಕಾಸ್ : ವೆನೆಜುವೆಲಾದಲ್ಲಿ ಮತ್ತೊಮ್ಮೆ ಸೇನಾ ಹಸ್ತಕ್ಷೇಪ ನಡೆಸುವ ಸಾಧ್ಯತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಎಚ್ಚರಿಸಿದ್ದಾರೆ. ದೇಶದ ಮಧ್ಯಂತರ ನಾಯಕತ್ವ ಅಮೆರಿಕದ ಬೇಡಿಕೆಗಳನ್ನು ಪಾಲಿಸಲು ವಿಫಲವಾದರೆ, ವಾಷಿಂಗ್ಟನ್ “ಎರಡನೇ ಅಲೆಯ” ಸೇನಾ ದಾಳಿ ನಡೆಸಲು ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.

ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ಬಳಿಕ, ವೆನೆಜುವೆಲಾದ ಪರಿಸ್ಥಿತಿಯ ಮೇಲೆ ಅಮೆರಿಕ ಪ್ರಭಾವ ಬೀರುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. “ವೆನೆಜುವೆಲಾವನ್ನು ಸರಿಪಡಿಸುವ ಕೆಲಸದತ್ತ ನಾವು ಗಮನ ಹರಿಸಿದ್ದೇವೆ. ಅವರು ನಮ್ಮ ಮಾತು ಕೇಳದಿದ್ದರೆ, ಮತ್ತೊಂದು ದಾಳಿ ನಡೆಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

“ಈಗ ಯಾರು ಉಸ್ತುವಾರಿ ವಹಿಸಿದ್ದಾರೆ ಎಂದು ಕೇಳಬೇಡಿ. ಅದಕ್ಕೆ ಉತ್ತರ ಕೊಟ್ಟರೆ ಅದು ವಿವಾದವಾಗುತ್ತದೆ” ಎಂದು ಟ್ರಂಪ್ ಹೇಳಿದ್ದು, ನೆಲಮಟ್ಟದ ಪರಿಸ್ಥಿತಿಯನ್ನು ಅಮೆರಿಕ ನಿಯಂತ್ರಿಸುತ್ತಿದೆ ಎಂಬ ಸೂಚನೆ ನೀಡಿದ್ದಾರೆ. ಪ್ರಸ್ತುತ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಆದರೆ ಅಗತ್ಯವಿದ್ದರೆ ಮತ್ತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೇನಾ ಕಾರ್ಯಾಚರಣೆಯ ವೇಳೆ ಅಮೆರಿಕದ ಒಂದು ಹೆಲಿಕಾಪ್ಟರ್ ಗಂಭೀರವಾಗಿ ಹಾನಿಗೊಳಗಾಗಿದ್ದು, ಅದರಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ, ಗಾಯಗೊಂಡವರೂ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ವೆನೆಜುವೆಲಾವನ್ನು “ಈಗ ಸತ್ತ ದೇಶ” ಎಂದು ಟ್ರಂಪ್ ವರ್ಣಿಸಿದ್ದು, ವರ್ಷಗಳ ದುಶಾಸನ ಮತ್ತು ಅಸಮರ್ಪಕ ಆಡಳಿತವೇ ದೇಶದ ಕುಸಿತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ವೆನೆಜುವೆಲಾದ ತೈಲ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳಿಗೆ ಅಮೆರಿಕಕ್ಕೆ ಸಂಪೂರ್ಣ ಪ್ರವೇಶ ಬೇಕೆಂಬ ಬೇಡಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ. “ತೈಲ ಉತ್ಪಾದನೆ ತುಂಬಾ ಕಡಿಮೆಯಾಗಿದೆ. ಮೂಲಸೌಕರ್ಯ ಪುನರ್‌ನಿರ್ಮಾಣಕ್ಕೆ ದೊಡ್ಡ ಹೂಡಿಕೆಗಳು ಅಗತ್ಯ” ಎಂದು ಹೇಳಿದರು.

ಗಾರ್ಡಿಯನ್ ವರದಿ ಪ್ರಕಾರ, ಕೆರಿಬಿಯನ್ ಪ್ರದೇಶದಲ್ಲಿ ಅಮೆರಿಕವು ಸುಮಾರು 15,000 ಸೈನಿಕರನ್ನು ನಿಯೋಜಿಸಿದೆ. ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅಮೆರಿಕದ ಬೇಡಿಕೆಗಳನ್ನು ಪೂರೈಸದಿದ್ದರೆ ಮತ್ತೆ ಮಧ್ಯಪ್ರವೇಶ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಚುನಾವಣೆಗಳ ಕುರಿತು ಮಾತನಾಡಿದ ಟ್ರಂಪ್, “ಸರಿಯಾದ ಸಮಯದಲ್ಲಿ ಚುನಾವಣೆ ನಡೆಯಲಿದೆ” ಎಂದಿದ್ದಾರೆ.

ಮಡುರೊ ಬಂಧನವನ್ನು ರೊಡ್ರಿಗಸ್ ಸಾರ್ವಜನಿಕವಾಗಿ ಖಂಡಿಸಿದ್ದರೂ, ಅಮೆರಿಕದೊಂದಿಗೆ ಖಾಸಗಿ ಮಾತುಕತೆಗಳು ನಡೆಯುತ್ತಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ರೊಡ್ರಿಗಸ್ ಅವರೊಂದಿಗೆ ಮಾತುಕತೆ ನಡೆಸಿದ್ದು, “ನಿಮಗೆ ಬೇಕಾದುದನ್ನು ನಾವು ಮಾಡುತ್ತೇವೆ” ಎಂಬ ಸಂದೇಶ ಬಂದಿದೆ ಎಂದು ಟ್ರಂಪ್ ಹೇಳಿದ್ದಾರೆ.

ಕ್ಯಾರಕಾಸ್‌ನಲ್ಲಿ ಹಿರಿಯ ಸರ್ಕಾರಿ ಮತ್ತು ಸೇನಾ ನಾಯಕರು ಮಡುರೊ ಅವರ ವಾಪಸಿಗೆ ಒತ್ತಾಯಿಸಿದ್ದರೂ, ತಾತ್ಕಾಲಿಕವಾಗಿ ರೊಡ್ರಿಗಸ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ಅಮೆರಿಕದ ಕ್ರಮವನ್ನು “ಸಾಮ್ರಾಜ್ಯಶಾಹಿ ಆಕ್ರಮಣ” ಎಂದು ಟೀಕಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸೈನಿಕರು ಹಾಗೂ ನಾಗರಿಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದರೂ, ಸಾರ್ವಜನಿಕರು ಸಾಮಾನ್ಯ ಜೀವನ ಮುಂದುವರಿಸಬೇಕು ಎಂದು ಕರೆ ನೀಡಿದ್ದಾರೆ.

ಮಡುರೊ ಅವರ ಪುತ್ರ ನಿಕೋಲಸ್ ಮಡುರೊ ಗುಯೆರಾ, ಬೆಂಬಲಿಗರು ಪ್ರತಿರೋಧಕ್ಕೆ ಸಜ್ಜಾಗುತ್ತಾರೆ ಎಂದು ಹೇಳಿದ್ದಾರೆ. ಇತ್ತ ಸ್ಪೇನ್‌ನಲ್ಲಿ ವಾಸವಿರುವ ವಿರೋಧ ಪಕ್ಷದ ನಾಯಕ ಎಡ್ಮುಂಡೊ ಗೊನ್ಸಾಲೆಜ್ ಉರ್ರುಟಿಯಾ, ಮಡುರೊ ಪದಚ್ಯುತಿಯನ್ನು “ಮುಖ್ಯ ಹೆಜ್ಜೆ, ಆದರೆ ಸಾಕಾಗುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಅಮೆರಿಕದ ಕ್ರಮದ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ. ಸ್ಪೇನ್, ಬ್ರೆಜಿಲ್, ಚಿಲಿ, ಕೊಲಂಬಿಯಾ, ಮೆಕ್ಸಿಕೊ ಮತ್ತು ಉರುಗ್ವೆ ಸೇರಿದಂತೆ ಹಲವು ದೇಶಗಳು, ಈ ಹಸ್ತಕ್ಷೇಪ ಪ್ರಾದೇಶಿಕ ಭದ್ರತೆಗೆ ಅಪಾಯಕಾರಿ ಪೂರ್ವನಿದರ್ಶನವಾಗಬಹುದು ಎಂದು ಎಚ್ಚರಿಸಿವೆ. ಯುರೋಪಿಯನ್ ಒಕ್ಕೂಟದ ಹಲವು ರಾಷ್ಟ್ರಗಳು ಸಂಯಮ ಪಾಲಿಸುವಂತೆ ಕರೆ ನೀಡಿವೆ.

ಕ್ಯಾರಕಾಸ್‌ನಲ್ಲಿ ಮತ್ತೆ ದಾಳಿ ನಡೆಯಬಹುದೆಂಬ ಭೀತಿಯಿಂದ ಜನರು ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಸೂಪರ್‌ಮಾರ್ಕೆಟ್ ಮತ್ತು ಔಷಧಾಲಯಗಳ ಮುಂದೆ ದೀರ್ಘ ಸಾಲುಗಳು ಕಂಡುಬಂದಿವೆ. ನೆರೆಯ ಕೊಲಂಬಿಯಾದಲ್ಲಿ ಅಧ್ಯಕ್ಷ ಗುಸ್ಟಾವೊ ಪೆಟ್ರೊ ಗಡಿ ಪ್ರದೇಶಕ್ಕೆ 30,000 ಸೈನಿಕರನ್ನು ನಿಯೋಜಿಸುವಂತೆ ಆದೇಶ ನೀಡಿದ್ದಾರೆ. ಇದರಿಂದ ಲ್ಯಾಟಿನ್ ಅಮೆರಿಕ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page