Monday, January 5, 2026

ಸತ್ಯ | ನ್ಯಾಯ |ಧರ್ಮ

ವಿವಾದಿತ ಕಾರ್ಕಳ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನ: ತಾಮ್ರದ ಶೀಟ್‌ಗಳನ್ನು ಹೊತ್ತೊಯ್ದ ಕಳ್ಳರು

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳು ಕಟ್ಟಡದ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ಬೆಲೆಬಾಳುವ ತಾಮ್ರದ ಶೀಟ್‌ಗಳನ್ನು ಕಳವು ಮಾಡಿದ್ದಾರೆ.

ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರು ನೀಡಿದ ದೂರಿನ ಪ್ರಕಾರ, ಜನವರಿ 3ರಂದು ಸಂಜೆ ಈ ಘಟನೆ ಬೆಳಕಿಗೆ ಬಂದಿದೆ. ಥೀಮ್ ಪಾರ್ಕ್‌ನ ಮಾಜಿ ಭದ್ರತಾ ಸಿಬ್ಬಂದಿ ಸಂತೋಷ್ ಅವರು ಫೋನ್ ಮೂಲಕ ಅರುಣ್ ಕುಮಾರ್ ಅವರಿಗೆ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದರು.

ಅಪರಿಚಿತ ದುಷ್ಕರ್ಮಿಗಳು ಯಾವುದೋ ಆಯುಧವನ್ನು ಬಳಸಿ ಪಾರ್ಕ್‌ನ ಮುಖ್ಯ ಗೇಟನ್ನು ಜಖಂಗೊಳಿಸಿ ಒಳನುಗ್ಗಿದ್ದಾರೆ. ನಂತರ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ತಾಮ್ರದ ರೂಫಿಂಗ್ ಶೀಟ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ಹಾಗೂ ಕ್ರೈಮ್ ಸೀನ್ ಆಫೀಸರ್ (SOCO) ತಂಡಗಳು ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿವೆ.

ಈ ಕುರಿತು ಕಾರ್ಕಳ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಉಡುಪಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮತ್ತು ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page