Saturday, January 10, 2026

ಸತ್ಯ | ನ್ಯಾಯ |ಧರ್ಮ

ಎತ್ತಿನಹೊಳೆ ಯೋಜನೆಗೆ ಕರೆಂಟ್ ಕಟ್, ಕತ್ತಲಲ್ಲಿ ಮುಳುಗಿದ ಆಡಳಿತ ಕಚೇರಿ, ಕೋಟ್ಯಂತರ ರೂ. ವಿದ್ಯುತ್ ಬಿಲ್ ಬಾಕಿ

ಸಕಲೇಶಪುರ: ರಾಜ್ಯದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ನಿರ್ವಹಿಸುತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಕಚೇರಿ, ಕೋಟ್ಯಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಪರಿಣಾಮ ಕೆಪಿಟಿಸಿಎಲ್ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದೆ. ಇದರಿಂದಾಗಿ ಕಚೇರಿಯೇ ಕತ್ತಲಲ್ಲಿ ಮುಳುಗಿದೆ.ಎತ್ತಿನಹೊಳೆ ಯೋಜನೆ ಕರ್ನಾಟಕದ ಪ್ರಮುಖ ಹಾಗೂ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾಗಿದ್ದು, ಪಶ್ಚಿಮ ಘಟ್ಟದಲ್ಲಿ ಹರಿಯುವ ಎತ್ತಿನಹೊಳೆ ಹಾಗೂ ಇತರ ತೊರೆಗಳಿಂದ 24.01 ಟಿಎಂಸಿ ನೀರನ್ನು ಬರಪೀಡಿತ ಬಯಲುಸೀಮೆಯ ಜಿಲ್ಲೆಗಳಿಗೆ ಹರಿಸುವ ಉದ್ದೇಶ ಹೊಂದಿದೆ.

ಮಲೆನಾಡಿನಲ್ಲಿ ಹುಟ್ಟುವ ಅನೇಕ ಸಣ್ಣಹೊಳೆಗಳ ನೀರು ಎತ್ತಿನಹೊಳೆಯಾಗಿ ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳ ಮೂಲಕ ಪಶ್ಚಿಮಾಭಿಮುಖವಾಗಿ ಅರಬ್ಬೀ ಸಮುದ್ರ ಸೇರುತ್ತಿದ್ದ ನೀರನ್ನು ಇದೀಗ ಪೂರ್ವಾಭಿಮುಖವಾಗಿ ಬಂಗಾಳ ಕೊಲ್ಲಿಯತ್ತ ಹರಿಸಿರುವುದು ಐತಿಹಾಸಿಕ ಸಾಹಸ.ಈ ಯೋಜನೆಯ ಮೂಲಕ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಸೇರಿದಂತೆ ಒಟ್ಟು 29 ತಾಲೂಕುಗಳ 6,657 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವುದು ಹಾಗೂ ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿದೆ.ಆದರೆ ಎತ್ತಿನಹೊಳೆ ಯೋಜನೆಯ ಎರಡನೇ ಹಂತದ ಕಾಮಗಾರಿ ಅರಸಿಕೇರೆ ಸಮೀಪ ಅರಣ್ಯ ಇಲಾಖೆಯಿಂದ ಅನುಮತಿ ವಿಳಂಬವಾಗಿರುವುದು ಸೇರಿದಂತೆ ಹಲವು ಕಾರಣಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಬಾರಿ ಎತ್ತಿನಹೊಳೆಯಿಂದ ಮೇಲೆತ್ತಿದ ನೀರನ್ನು ಹೇಮಾವತಿ ನದಿಗೆ ಹರಿಸಲಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ಜಲಾಶಯಗಳು ತುಂಬಿರುವುದರಿಂದ ಎತ್ತಿನಹೊಳೆ ನೀರು ಹೇಮಾವತಿ ಮುಖಾಂತರ ಗೊರೂರಿಗೆ ಸಾಗಿ, ಅಲ್ಲಿಂದ ಕೆ.ಆರ್.ನಗರ ಸಮೀಪ ಕೆ.ಆರ್.ಎಸ್ ಕಣಿವೆಯಲ್ಲಿ ಕಾವೇರಿ ನದಿಯೊಂದಿಗೆ ವಿಲೀನಗೊಂಡು, ನಂತರ ಕೆ.ಆರ್.ಎಸ್ ಹಾಗೂ ಕಬಿನಿ ಮೂಲಕ ತಮಿಳುನಾಡಿನ ಮೆಟ್ಟೂರು ಜಲಾಶಯ ತಲುಪಿ ಹೆಚ್ಚುವರಿ ನೀರು ಬಂಗಾಳ ಕೊಲ್ಲಿಗೆ ಹರಿದಿದೆ.

ಎತ್ತಿನಹೊಳೆ ಯೋಜನೆಯ ಎರಡನೇ ಹಂತ ಪೂರ್ಣಗೊಳ್ಳದ ಕಾರಣ ಈ ಬಾರಿ ನೀರನ್ನು ಹೇಮಾವತಿಗೆ ಹರಿಸಲಾಗಿದ್ದು, ಇದಕ್ಕಾಗಿ ಅಪಾರ ಪ್ರಮಾಣದ ವಿದ್ಯುತ್ ವ್ಯಯ ಮಾಡಲಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಹಾಸನ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ದ್ವಾರ ಸಮುದ್ರ, ವೇದ ಕಣಿವೆ, ವಾಣಿವಿಲಾಸ ಕೆರೆಗಳಿಗೆ ತಾಲೂಕಿನ ಹೆಬ್ಬನಹಳ್ಳಿಯಿಂದ ನೀರನ್ನು ಪಂಪ್ ಮಾಡಿ ಹರಿಸಲಾಗಿತ್ತು. 2024ರಲ್ಲಿ ಸುಮಾರು 1.5 ಟಿಎಂಸಿ ನೀರು ಹರಿಸಲಾಗಿದ್ದು, ಇದಕ್ಕಾಗಿ 14 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದ್ದು, ಸುಮಾರು 52 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಬೇಕಾಗಿತ್ತು.

2025ರಲ್ಲಿ ಉತ್ತಮ ಮಳೆಯ ಹಿನ್ನೆಲೆಯಲ್ಲಿ ಜಲಾಶಯಗಳು ತುಂಬಿದ್ದರೂ, ಎತ್ತಿನಹೊಳೆಯಿಂದ ಹೇಮಾವತಿಗೆ ಸುಮಾರು 2 ಟಿಎಂಸಿ ಹಾಗೂ ಇತರ ಕೆರೆಗಳಿಗೆ 0.3 ಟಿಎಂಸಿ ನೀರನ್ನು ಹರಿಸಲಾಗಿದೆ. ಇದಕ್ಕೆ ಒಟ್ಟು 18.25 ಮೆಗಾವ್ಯಾಟ್ ವಿದ್ಯುತ್ ವ್ಯಯವಾಗಿದೆ.ಒಟ್ಟಾರೆ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸಿದ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವು ಕೆಪಿಟಿಸಿಎಲ್‌ಗೆ ಸುಮಾರು 223 ಕೋಟಿ ರೂ. ಪಾವತಿಸಬೇಕಿದೆ. ಪ್ರತಿಮಾಸ ಕನಿಷ್ಠ 9ರಿಂದ 10 ಕೋಟಿ ರೂ. ಮೊತ್ತವನ್ನು ಪಾವತಿಸಬೇಕಾದರೂ, ದೀರ್ಘಕಾಲದಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಗಂಭೀರವಾಗಿದೆ.

ಈ ಕುರಿತು ವಿದ್ಯುತ್ ಇಲಾಖೆ ಹಲವು ಬಾರಿ ನೋಟಿಸ್ ನೀಡಿದ್ದರೂ ಬಿಲ್ ಪಾವತಿಯಾಗದೆ ಉಳಿದ ಹಿನ್ನೆಲೆಯಲ್ಲಿ ಕೊನೆಗೆ ಯೋಜನಾ ಕಚೇರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಪರಿಣಾಮ ಕಚೇರಿಯ ದೈನಂದಿನ ಕಾರ್ಯಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಕಂಪ್ಯೂಟರ್‌ಗಳು, ದಾಖಲೆ ಸಂರಕ್ಷಣೆ, ಆನ್‌ಲೈನ್ ವರದಿ ಸಲ್ಲಿಕೆ, ಸಭೆಗಳು ಸೇರಿದಂತೆ ಆಡಳಿತಾತ್ಮಕ ಕಾರ್ಯಗಳನ್ನು ಜನರೇಟರ್ ಮೂಲಕವೇ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಎತ್ತಿನಹೊಳೆ ಯೋಜನೆಯ ಕಚೇರಿಯೇ ಈ ರೀತಿಯ ದುಸ್ಥಿತಿಗೆ ತಲುಪಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಕೋಟ್ಯಂತರ ರೂ. ವೆಚ್ಚದಲ್ಲಿ ನಡೆಯುತ್ತಿರುವ ಯೋಜನೆಯಲ್ಲಿ ವಿದ್ಯುತ್ ಬಿಲ್ ಪಾವತಿಸುವ ಮಟ್ಟದ ಹಣಕಾಸು ಶಿಸ್ತು ಇಲ್ಲದಿರುವುದು ಯೋಜನೆಯ ನಿರ್ವಹಣೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಬಾಕಿ ಹಣವನ್ನು ತಕ್ಷಣ ಪಾವತಿಸಿ ವಿದ್ಯುತ್ ಸಂಪರ್ಕ ಪುನಃ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page