Monday, January 12, 2026

ಸತ್ಯ | ನ್ಯಾಯ |ಧರ್ಮ

ಇತಿಹಾಸ ಕಲಿಸಲು ಕಾಲೇಜುಗಳಿವೆ, ನೀವು ಸಿರಯಾಗಿ ಸರ್ಕಾರ ನಡೆಸುವುದರತ್ತ ಗಮನ ಕೊಡಿ: ಮೋದಿ ವಿರುದ್ಧ ಪ್ರಿಯಾಂಕ್‌ ಖರ್ಗೆ ಕಿಡಿ

ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಾಚೀನ ಇತಿಹಾಸದ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಅಭಿವೃದ್ಧಿ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿ ಯತ್ನಿಸುತ್ತಿದ್ದಾರೆ ಎಂದು ಶನಿವಾರ ಟೀಕಿಸಿದ್ದಾರೆ. ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣದ ಇತಿಹಾಸದ ಕುರಿತು ಪ್ರಧಾನಿ ನೀಡಿದ ಭಾಷಣವು ಅವರ ಸರ್ಕಾರದ 11 ವರ್ಷಗಳ ವೈಫಲ್ಯಗಳನ್ನು ಮುಚ್ಚಿಹಾಕುವ ತಂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೇಶದ ಜನರಿಗೆ ಪ್ರಧಾನಿಯಿಂದ ಬೇಕಿರುವುದು ಇತಿಹಾಸದ ಪಾಠಗಳಲ್ಲ, ಬದಲಿಗೆ ಭವಿಷ್ಯದ ಅಭಿವೃದ್ಧಿಯ ಯೋಜನೆಗಳು ಎಂದು ಖರ್ಗೆ ಹೇಳಿದ್ದಾರೆ. ಕಳೆದ 11 ವರ್ಷಗಳಲ್ಲಿ ಘೋಷಣೆಯಾದ ‘ಮೇಕ್ ಇನ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’ ಮತ್ತು ‘ಡಿಜಿಟಲ್ ಇಂಡಿಯಾ’ದಂತಹ ಯೋಜನೆಗಳು ಯಾವುದೇ ಗಮನಾರ್ಹ ಫಲಿತಾಂಶ ನೀಡದೆ ವಿಫಲವಾಗಿವೆ ಎಂದು ಅವರು ಕಿಡಿಕಾರಿದ್ದಾರೆ. ಇತಿಹಾಸ ಕಲಿಯಲು ಕಾಲೇಜುಗಳಿವೆ, ಸರ್ಕಾರಕ್ಕೆ ಜನರ ಬದುಕು ಮುಖ್ಯವಾಗಬೇಕು ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ನೀತಿಗಳನ್ನು ಟೀಕಿಸುವವರನ್ನು ‘ರಾಷ್ಟ್ರ ವಿರೋಧಿ’ ಎಂದು ಕರೆಯುವ ಪ್ರವೃತ್ತಿಯನ್ನು ಸಚಿವರು ಖಂಡಿಸಿದ್ದಾರೆ. ಇದೇ ವೇಳೆ ತೆರಿಗೆ ಹಂಚಿಕೆ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, ಜಿಎಸ್‌ಟಿ ಮತ್ತು ಆದಾಯ ತೆರಿಗೆಯಲ್ಲಿ ದೇಶಕ್ಕೆ ದೊಡ್ಡ ಕೊಡುಗೆ ನೀಡುತ್ತಿರುವ ಕರ್ನಾಟಕಕ್ಕೆ ಅರ್ಹವಾದ ಪಾಲನ್ನು ಕೇಂದ್ರ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಕೇಂದ್ರದಿಂದ ಸರಿಯಾದ ಆರ್ಥಿಕ ನೆರವು ಸಿಗದಿದ್ದರೂ ಕರ್ನಾಟಕ ಸರ್ಕಾರವೇ ರಾಜ್ಯದ ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಯ ಜವಾಬ್ದಾರಿಯನ್ನು ಹೊರುತ್ತಿದೆ ಎಂದು ಅವರು ಹೇಳಿದರು. ಆಡಳಿತದ ಬಗ್ಗೆ ಕರ್ನಾಟಕಕ್ಕೆ ಉಪದೇಶ ನೀಡುವ ಮೊದಲು ಕೇಂದ್ರ ಸರ್ಕಾರವು ರಾಜ್ಯದ ಹಕ್ಕುಗಳನ್ನು ಗೌರವಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.


Related Articles

ಇತ್ತೀಚಿನ ಸುದ್ದಿಗಳು

You cannot copy content of this page