Monday, January 12, 2026

ಸತ್ಯ | ನ್ಯಾಯ |ಧರ್ಮ

ಲಾಲ್‌ಬಾಗ್ 219 ನೇ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜು : ಈ ಬಾರಿ ಕಣ್ಮನ ಸೆಳೆಯಲಿರುವ ‘ತೇಜಸ್ವಿ ವಿಸ್ಮಯ’

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಜನವರಿ 15ರಿಂದ 26ರವರೆಗೆ ನಡೆಯಲಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ತೋಟಗಾರಿಕೆ ಇಲಾಖೆ ಆಯೋಜಿಸುತ್ತಿರುವ ಇದು 219ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು–ಬರಹವನ್ನು ಆಧರಿಸಿದ ‘ತೇಜಸ್ವಿ ವಿಸ್ಮಯ’ ವಿಷಯವಸ್ತುವನ್ನು ಹೊಂದಿದೆ. ಗಾಜಿನ ಮನೆಯಲ್ಲಿ ತೇಜಸ್ವಿಯವರ ನೆಚ್ಚಿನ ಕಾಡಿನ ಪುಷ್ಪಮಾದರಿಯನ್ನು ನಿರ್ಮಿಸಲಾಗುತ್ತಿದ್ದು, ಒಟ್ಟಾರೆ 3 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡಲಾಗುತ್ತಿದೆ.

ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 14ರಂದು ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಆರ್. ಗಿರೀಶ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ. ಎಂ. ಜಗದೀಶ್ ಮಾತನಾಡಿ, 45×45 ಅಡಿ ವಿಸ್ತೀರ್ಣದ, 25 ಅಡಿ ಎತ್ತರದ ಕಾಡಿನಿಂದ ಆವೃತವಾದ ಬೃಹತ್ ಬೆಟ್ಟ, ಜಲಪಾತದ ಮಾದರಿ ಜಧಿತೆ ಹಾಗೂ ಅದರ ತಪ್ಪಲಿನಲ್ಲಿ ತೇಜಸ್ವಿಯವರ ‘ನಿರುತ್ತರ’ ಮನೆಯ ಪುಷ್ಪಮಾದರಿಯನ್ನು ನಿರ್ಮಿಸಲಾಗುತ್ತಿದೆ ಎಂದರು. ಮುಂದೆ 4 ಅಡಿ ಎತ್ತರದ ತೇಜಸ್ವಿ–ರಾಜೇಶ್ವರಿ ಪ್ರತಿಮೆಗಳು, ತೇಜಸ್ವಿಯವರ ಸ್ಕೂಟರ್, ‘ಕರ್ವಾಲೊ’ ಕಾದಂಬರಿಯ ಪಾತ್ರಗಳಾದ ಕಿವಿ ನಾಯಿ, ಕರಿಯಪ್ಪ, ಮಂದಣ್ಣ, ಏರೋಪ್ಲೇನ್ ಚಿಟ್ಟೆ ಸೇರಿದಂತೆ ಪ್ರಾಣಿ–ಪಕ್ಷಿ–ಕೀಟಗಳ ಪುಷ್ಪಾಕೃತಿಗಳು ಇರಲಿವೆ. ಬೆಟ್ಟದ ಬಲಭಾಗದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಟ್ಟಡದ ಪುಷ್ಪಮಾದರಿಯೂ ಕಾಣಿಸಲಿದೆ.

ಒಂದು ಬಾರಿಗೆ 4.5 ಲಕ್ಷದಂತೆ ಎರಡು ಬಾರಿಗೆ ಒಟ್ಟು 9 ಲಕ್ಷ ಹೂಗಳನ್ನು ಬಳಸಿ ವಿವಿಧ ಪುಷ್ಪಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಪರಿಸರ ಮತ್ತು ಕಾಡುಪ್ರಾಣಿಗಳ ಕುರಿತು ಎರಡು ಬೃಹತ್ ಸ್ತಬ್ಧ ಚಿತ್ರಗಳನ್ನೂ ಸೃಜಿಸಲಾಗುತ್ತಿದೆ. ಕಾಡುಪ್ರಾಣಿಗಳ ಪ್ರತಿಕೃತಿಗಳು ಲಾಲ್‌ಬಾಗ್‌ನಾದ್ಯಂತ ಸಂಚರಿಸಿ ವೀಕ್ಷಕರನ್ನು ಆಕರ್ಷಿಸಲಿವೆ.

ಜನವರಿ 15ರಿಂದ 26ರವರೆಗೆ ಪ್ರತಿದಿನ ಸಂಜೆ 5ರಿಂದ 7ರವರೆಗೆ ತೇಜಸ್ವಿಯವರ ‘ನನ್ನ ತೇಜಸ್ವಿ’, ‘ಕರ್ವಾಲೊ’, ‘ಜುಗಾರಿ ಕ್ರಾಸ್’ ಸೇರಿದಂತೆ ಪ್ರಸಿದ್ಧ ನಾಟಕಗಳು, ಸಿನಿಮಾ–ಸಾಹಿತ್ಯ ಕುರಿತ ಸಂವಾದಗಳು ನಡೆಯಲಿವೆ. ಜತೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯೂ ಇರಲಿದೆ.

ಪ್ರವೇಶ ಶುಲ್ಕ:
ವಾರದ ದಿನಗಳಲ್ಲಿ ವಯಸ್ಕರಿಗೆ 80 ರೂ., ರಜಾ ದಿನಗಳಲ್ಲಿ 100 ರೂ.; 12 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲೂ 30 ರೂ. ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಅವಕಾಶವಿದೆ. ಶಾಲಾ ಸಮವಸ್ತ್ರ ಧರಿಸಿ ಬರುವ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆ.

ಎಲ್‌ಇಡಿ ಪ್ರದರ್ಶನ:
ಲಾಲ್‌ಬಾಗ್‌ನ ಆಯ್ದ ಆರು ಸ್ಥಳಗಳಲ್ಲಿ ಎಲ್‌ಇಡಿ ಸ್ಕ್ರೀನ್‌ಗಳ ಮೂಲಕ ತೇಜಸ್ವಿಯವರ ಬದುಕು–ಬರಹ, ಸಾಧನೆಗಳನ್ನು ಬಿಂಬಿಸುವ ಫೋಟೋಗಳು, ವಿಡಿಯೊಗಳು ಹಾಗೂ ಎಐ ವಿಡಿಯೊ ತುಣುಕುಗಳನ್ನು ಪ್ರದರ್ಶನದ ಅವಧಿಯುದ್ದಕ್ಕೂ ಪ್ರದರ್ಶಿಸಲಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page