Tuesday, January 13, 2026

ಸತ್ಯ | ನ್ಯಾಯ |ಧರ್ಮ

ಅಂಬೇಡ್ಕರ್ ಸಹಾಯಹಸ್ತ ಸಾಮಾಜಿಕ ಭದ್ರತಾ ಮಂಡಳಿ ರಚಿಸಿ – ಮಹೇಶ್ ಪೇಟಕರ್ ಆಗ್ರಹ 

ಹಾಸನ : ರಾಜ್ಯದಲ್ಲಿ ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ ಬರುವ ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ‘ಅಂಬೇಡ್ಕರ್ ಸಹಾಯಹಸ್ತ ಸಾಮಾಜಿಕ ಭದ್ರತಾ ಮಂಡಳಿಯನ್ನು ರಚಿಸಬೇಕು ಹಾಗೂ ಸಂಪನ್ಮೂಲಯ ಕ್ರೋಡೀಕರಣಕ್ಕಾಗಿ ಆಸ್ತಿ ತೆರಿಗೆ ಮೇಲೆ ಅಸಂಘಟಿತ ಕಾರ್ಮಿಕರ ಸೆಸ್ ವಿಧಿಸಬೇಕು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘವು ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೇ  ವೇಳೆ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಪೇಟಕರ್ ಮಾತನಾಡಿ, ರಾಜ್ಯದಲ್ಲಿ ಕಮ್ಮಾರರು, ಚಮ್ಮಾರರು, ಕುಂಬಾರರು, ಮಡಿವಾಳರು, ಭಟ್ಟಿ ಕಾರ್ಮಿಕರು, ಚಿಂದಿ ಆಯುವವರು, ಮನೆ ಕೆಲಸಗಾರರು, ಕ್ಷೌರಿಕರು, ಟೈಲರ್‌ಗಳು, ಅಡಿಗೆ ಹಾಗೂ ಹೋಟೆಲ್ ಕಾರ್ಮಿಕರು, ಬ್ಯೂಟಿ ಪಾರ್ಲರ್ ಸಿಬ್ಬಂದಿ, ಸಿನಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಫೋಟೋಗ್ರಾಫರ್‌ಗಳು, ಬೀಡಿ ಕಾರ್ಮಿಕರು, ಕಲ್ಯಾಣ ಮಂಟಪ ಹಾಗೂ ಪೆಂಡಾಲ್ ಕಾರ್ಮಿಕರು, ಕೇಬಲ್ ಕಾರ್ಮಿಕರು, ಹಾಸಿಗೆ–ದಿಂಬು ತಯಾರಿಕಾ (ಪಿಂಜಾರ) ಕಾರ್ಮಿಕರು, ನೇಕಾರರು, ಅಗರಬತ್ತಿ ಹಾಗೂ ಅಡಿಕೆ ಹಾಳೆ ತಟ್ಟೆ ತಯಾರಿಕಾ ಕಾರ್ಮಿಕರು ಸೇರಿದಂತೆ ಅನೇಕ ವಲಯಗಳ ಅಸಂಘಟಿತ ಕಾರ್ಮಿಕರು ದಿನನಿತ್ಯ ಸಮಾಜಕ್ಕೆ ಅವಿಭಾಜ್ಯ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಕಾರ್ಮಿಕ ಸಮೂಹಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಇನ್ನೂ ದೊರಕದೆ ಮರೀಚಿಕೆಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮಾದರಿಯಲ್ಲಿ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಮಂಡಳಿ ಅಗತ್ಯವಿದೆ. ಅಸಂಘಟಿತ ಕಾರ್ಮಿಕರಿಲ್ಲದೆ ಯಾವುದೇ ಕೆಲಸ ಕಾರ್ಯಗಳು ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಆಸ್ತಿ ತೆರಿಗೆ ಮೇಲೆ ಅಸಂಘಟಿತ ಕಾರ್ಮಿಕರ ಸೆಸ್ ವಿಧಿಸಿ, ಅದರ ಮೂಲಕ ಸಂಗ್ರಹವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಅಂಬೇಡ್ಕರ್ ಸಹಾಯಹಸ್ತ ಸಾಮಾಜಿಕ ಭದ್ರತಾ ಮಂಡಳಿಯನ್ನು ಸ್ಥಾಪಿಸಿ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ, ನಿವೃತ್ತಿ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ, ಮೋಟಾರು ಸಾರಿಗೆಗೆ ಸಂಬಂಧಿಸಿದ ಹಮಾಲಿ ಕಾರ್ಮಿಕರನ್ನು ಅಂಬೇಡ್ಕರ್ ಸಹಾಯಹಸ್ತ ಯೋಜನೆಯ ವ್ಯಾಪ್ತಿಯಿಂದ ಕೈಬಿಟ್ಟು, ಮೋಟಾರು ಸಾರಿಗೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಸೇರಿಸಬೇಕು ಎಂದು ಸಂಘವು ಒತ್ತಾಯಿಸಿತು. ಅಲ್ಲದೆ, ಇತ್ತೀಚೆಗೆ ಕೆಲವು ಸರ್ಕಾರಿ ಯೋಜನೆಗಳ ಮಾಹಿತಿಪಟ್ಟಿಯಲ್ಲಿ ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಸೇರಬೇಕಾದ ವೆಲ್ಡರ್ ಹಾಗೂ ಬಡಗಿ (ಕಾರ್ಪೆಂಟರ್) ಕಾರ್ಮಿಕರನ್ನು ಅಂಬೇಡ್ಕರ್ ಸಹಾಯಹಸ್ತ ಯೋಜನೆಯ ಪಟ್ಟಿಗೆ ಸೇರಿಸಿರುವುದು ತಪ್ಪು ಕ್ರಮವಾಗಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರವು ಅಸಂಘಟಿತ ಕಾರ್ಮಿಕರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಸಾಣೇನಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಸಗೀರ್ ಅಹಮದ್, ಜ್ಞಾನೇಶ್, ನಾಗ ಲಕ್ಷ್ಮೀ, ಅಮೃತ ಕುಮಾರ್, ಪ್ರಥೀಮಾ, ರೂಪ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page