Wednesday, January 14, 2026

ಸತ್ಯ | ನ್ಯಾಯ |ಧರ್ಮ

ಇರಾನ್‌ | ಭೀಕರ ರಕ್ತಪಾತ; ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 2,000ಕ್ಕೂ ಹೆಚ್ಚು ಜನರ ಸಾವು: ವರದಿ

ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೂ 2,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಮಂಗಳವಾರ ವರದಿ ಮಾಡಿದೆ. ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಇರಾನ್ ಆಡಳಿತ ಮಂಡಳಿಯ ಸದಸ್ಯರೊಬ್ಬರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, “ಸಂಘರ್ಷಗಳಲ್ಲಿ ಮೃತಪಟ್ಟವರ ಸಂಖ್ಯೆ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ. ಅಧಿಕೃತ ದಾಖಲೆಗಳ ಪ್ರಕಾರವೇ ಸುಮಾರು 2,000 ಮಂದಿ ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ,” ಎಂದು ಹೇಳಿದ್ದಾರೆ.

ಈ ರಕ್ತಪಾತವನ್ನು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಮಾರಕ ಆಯುಧಗಳನ್ನು ಬಳಸುವುದು ಮಾನವ ಹಕ್ಕುಗಳ ಘೋರ ಉಲ್ಲಂಘನೆ ಎಂದು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ದೇಶಗಳು ಕಿಡಿಕಾರಿವೆ. ಅಲ್ಲದೆ, ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರುವ ಎಚ್ಚರಿಕೆಯನ್ನೂ ನೀಡಿವೆ.

ಆರ್ಥಿಕ ಕುಸಿತ, ಕಠಿಣ ಸಾಮಾಜಿಕ ನಿಯಮಗಳು ಮತ್ತು ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆರಂಭದಲ್ಲಿ ಸಣ್ಣದಾಗಿ ಶುರುವಾದ ಈ ಚಳುವಳಿ, ಈಗ ದೇಶದ ಪ್ರಮುಖ ನಗರಗಳಿಗೆ ವ್ಯಾಪಿಸಿದ್ದು, ದಶಕದ ದೊಡ್ಡ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆ ಹತ್ತಿಕ್ಕಲು ಸರ್ಕಾರವು ಮಿಲಿಟರಿ ಪಡೆಗಳನ್ನು ಬಳಸುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ.

ಸದ್ಯ ಇರಾನ್‌ನ ಹಲವು ನಗರಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಮಾಹಿತಿ ವಿನಿಮಯಕ್ಕೆ ತಡೆಯೊಡ್ಡಲಾಗಿದೆ. ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿಹೋಗಿದ್ದು, ಔಷಧಿಗಳ ಕೊರತೆ ಎದುರಾಗಿದೆ. ಸರ್ಕಾರವು ಕರ್ಫ್ಯೂ ಜಾರಿಗೊಳಿಸಿದ್ದರೂ, ಜನರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ ಎಂದು ವರದಿಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page