Thursday, January 15, 2026

ಸತ್ಯ | ನ್ಯಾಯ |ಧರ್ಮ

ದೇಶದ ರಫ್ತು ವಹಿವಾಟು ಕೆಲವೇ ರಾಜ್ಯಗಳಿಗೆ ಸೀಮಿತ; ಹೆಚ್ಚಾಗುತ್ತಿದೆ ಪ್ರಾದೇಶಿಕ ಅಸಮಾನತೆ

ದೇಶದಲ್ಲಿ ರಫ್ತು ವಹಿವಾಟು ಕೆಲವೇ ರಾಜ್ಯಗಳಲ್ಲಿ ಕೇಂದ್ರೀಕೃತವಾಗುತ್ತಿದ್ದು, ಪ್ರಾದೇಶಿಕ ಅಸಮಾನತೆ ಹೆಚ್ಚಾಗುತ್ತಿದೆ. ಕೇವಲ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶದಂತಹ ನಾಲ್ಕೈದು ರಾಜ್ಯಗಳಿಂದಲೇ ಶೇ. 70ರಷ್ಟು ರಫ್ತು ನಡೆಯುತ್ತಿದ್ದರೆ, ಹಿಂದುಳಿದ ರಾಜ್ಯಗಳು ಮತ್ತಷ್ಟು ಹಿಂದಕ್ಕೆ ಹೋಗುತ್ತಿವೆ.

ದೇಶದ 20ಕ್ಕೂ ಹೆಚ್ಚು ರಾಜ್ಯಗಳು ರಫ್ತಿನಲ್ಲಿ ಕನಿಷ್ಠ ‘ಸಿಂಗಲ್ ಡಿಜಿಟ್’ (ಏಕ ಅಂಕಿಯ) ಪಾಲು ಪಡೆಯಲು ಪರದಾಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಜಾರ್ಖಂಡ್, ಬಿಹಾರ, ರಾಜಸ್ಥಾನ ಹಾಗೂ ಈಶಾನ್ಯ ರಾಜ್ಯಗಳು ರಫ್ತಿನಲ್ಲಿ ತೀರಾ ಹಿಂದುಳಿದಿದ್ದು, ಇವುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗದ ಬಳಿ ಸರಿಯಾದ ಯೋಜನೆಯಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.

ಅಂಕಿಅಂಶಗಳನ್ನು ಗಮನಿಸಿದರೆ, 2017-18 ರಿಂದ 2025ರ ಅವಧಿಯಲ್ಲಿ ಅಗ್ರ 10 ರಾಜ್ಯಗಳ ರಫ್ತು ಪಾಲು ಶೇ. 84 ರಿಂದ ಶೇ. 91ಕ್ಕೆ ಏರಿಕೆಯಾಗಿದೆ. ಇದರಲ್ಲಿ ಗುಜರಾತ್‌ನಿಂದ ಪೆಟ್ರೋಲಿಯಂ ಮತ್ತು ರಾಸಾಯನಿಕ ಉತ್ಪನ್ನಗಳು, ಮಹಾರಾಷ್ಟ್ರದಿಂದ ರತ್ನ ಮತ್ತು ಆಭರಣಗಳು, ತಮಿಳುನಾಡಿನಿಂದ ಆಟೋಮೊಬೈಲ್, ಕರ್ನಾಟಕದಿಂದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಉತ್ಪನ್ನಗಳು ಹಾಗೂ ಉತ್ತರ ಪ್ರದೇಶದಿಂದ ಮೊಬೈಲ್ ಫೋನ್‌ಗಳು ಹೆಚ್ಚಾಗಿ ರಫ್ತಾಗುತ್ತಿವೆ.

ಉತ್ತಮ ಪೂರೈಕೆ ವ್ಯವಸ್ಥೆ, ಕೈಗಾರಿಕಾ ಕಾರಿಡಾರ್‌ಗಳು ಮತ್ತು ಸರ್ಕಾರದ ಪ್ರೋತ್ಸಾಹ ಈ ರಾಜ್ಯಗಳಿಗೆ ವರದಾನವಾಗಿವೆ. ಆದರೆ, ಬಿಹಾರ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಕೇವಲ ಕೃಷಿ ಉತ್ಪನ್ನಗಳ ರಫ್ತಿಗೆ ಸೀಮಿತವಾಗಿದ್ದು, ಆಧುನಿಕ ವಾಣಿಜ್ಯ ವ್ಯವಸ್ಥೆಯಿಂದ ದೂರ ಉಳಿದಿವೆ.

ಈ ಅಸಮಾನತೆಗೆ ವಿದೇಶಿ ನೇರ ಬಂಡವಾಳ (FDI) ಹೂಡಿಕೆಯ ಹಂಚಿಕೆಯೂ ಪ್ರಮುಖ ಕಾರಣವಾಗಿದೆ. 2019 ರಿಂದ 2025ರ ನಡುವೆ ದೇಶಕ್ಕೆ ಬಂದ ಶೇ. 91ರಷ್ಟು ವಿದೇಶಿ ಬಂಡವಾಳವು ರಫ್ತಿನಲ್ಲಿ ಮುಂದಿರುವ ಮೊದಲ 6 ರಾಜ್ಯಗಳ ಪಾಲಾಗಿದೆ.

ಇದರಲ್ಲಿ ಮಹಾರಾಷ್ಟ್ರ ಶೇ. 31, ಕರ್ನಾಟಕ ಶೇ. 20 ಮತ್ತು ಗುಜರಾತ್ ಶೇ. 16ರಷ್ಟು ಪಾಲು ಪಡೆದಿವೆ. ಕೇವಲ ನಾಲ್ಕೈದು ರಾಜ್ಯಗಳಿಂದಲೇ ಹೆಚ್ಚಿನ ರಫ್ತು ನಡೆಯುತ್ತಿರುವಾಗ, ದೇಶದ ಒಟ್ಟಾರೆ ಆರ್ಥಿಕ ವೃದ್ಧಿ ದರವನ್ನು ಶೇ. 8-10ರಷ್ಟು ಸಾಧಿಸುವುದು ಅಸಾಧ್ಯದ ಮಾತು ಎಂದು ವರದಿ ವಿಶ್ಲೇಷಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page