Saturday, January 17, 2026

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ತುಮಕೂರು,ಜನವರಿ 16: ತುಮಕೂರು ಜಿಲ್ಲೆಯ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿ, ತುಮಕೂರಿನಿಂದ ವಿಶ್ವಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಪಟುಗಳಿಗೆ ಶುಭಕೋರಿದರು..

ಅವರು ಇಂದು ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಕ್ರೀಡಾಕೂಟ -2025 -2026 ಕ್ರೀಡಾಕೂಟ ವನ್ನು ಉದ್ಘಾಟಿಸಿ ಮಾತನಾಡಿದರು.


ವಿದ್ಯಾರ್ಥಿದೆಸೆಯಲ್ಲಿ ಕ್ರೀಡಾಪಟುವಾಗಿದ್ದೆ

ಕ್ರೀಡೆಯಿಂದ ಶಿಸ್ತು, ಸಂಯಮ, ಸಮಯಪ್ರಜ್ಞೆ ಪಾಲನೆಗೆ ಸಹಕಾರಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಇದರ ರೂವಾರಿಯಾಗಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಅಭಿನಂದಿಸಿದರು. ತಾನು ವಿದ್ಯಾರ್ಥಿದೆಸೆಯಲ್ಲಿ ಕಬ್ಬಡ್ಡಿ ಪಟುವಾಗಿದ್ದರು ಎಂಬುದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಅದರೊಂದಿಗೆ ಫುಟ್ ಬಾಲ್, ಕ್ರಿಕೆಟ್ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದು, ಏಕದಿನ ಕ್ರಿಕೆಟ್,ಟಿ.-20 ಕ್ರಿಕೆಟ್ ವೀಕ್ಷಿಸುವ ಹವ್ಯಾಸವಿರುವ ಬಗ್ಗೆ ತಿಳಿಸಿದರು. ತನ್ನ ಕೆಲಸದೊತ್ತಡದ ನಡುವೆಯೂ ಅಂತರರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವುದನ್ನು ತಪ್ಪಿಸುವುದಿಲ್ಲವೆಂದು ತಿಳಿಸಿದರು.

ಸೋಲು ಗೆಲುವುಗಿಂತ ಕ್ರೀಡಾಸ್ಪೂರ್ತಿ ಮುಖ್ಯ

ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡಾಸ್ಪೂರ್ತಿ ಮುಖ್ಯ.ಪ್ರತಿ ಕ್ರೀಡಾಪಟುವು ಇದನ್ನು ಪಾಲಿಸಬೇಕು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು, ಕಠಿಣ ಶ್ರಮ ಅತ್ಯಗತ್ಯ. ಪರಿಶ್ರಮದಿಂದ ಗುರಿ ಸಾಧಿಸಲು ಉತ್ತಮ ತರಬೇತಿ ಅಗತ್ಯ.

ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಸರ್ಕಾರ ಬದ್ಧ

ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯ ನಿಯಮವನ್ನು ಜಾರಿಗೊಳಿಸಿದೆ. ಪೊಲೀಸ್ ಇಲಾಖೆಯಲ್ಲಿ ಪೇದೆ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರ ಹುದ್ದೆಯ ವರೆಗೆ ಶೇ.3 ರಷ್ಟು ಮೀಸಲಾತಿಯನ್ನು ಸರ್ಕಾರ ನೀಡುತ್ತಿದೆ. ಒಲಂಪಿಕ್ಸ್ , ಪಾರಾ ಒಲಂಪಿಕ್ಸ್ , ಏಷಿಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್, ರಾಷ್ಟ್ರೀಯ,ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾದ/ಭಾಗವಹಿಸುವ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ವಿವಿಧ ಇಲಾಖೆಗಳಲ್ಲಿ ಶೇ.2 ರ ಮೀಸಲಾತಿಯನ್ನು ನೀಡಲಾಗುತ್ತಿದೆ. ಒಲಂಪಿಕ್ಸ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ತುಮಕೂರು ಜಿಲ್ಲೆಯ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಅನುದಾನ-ಸಿಎಂ ಭರವಸೆ , ತುಮಕೂರಿನಿಂದ ವಿಶ್ವಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಲಿ
ತುಮಕೂರು ಜಿಲ್ಲೆಗೆ ಹಾಕಿ ಕ್ರೀಡಾಂಗಣ, ವಿಶ್ವದರ್ಜೆಯ ಈಜುಕೊಳದ ಬೇಡಿಕೆಯಿದ್ದು, ಕ್ರೀಡೆಗಾಗಿ ಹೆಚ್ಚಿನ ಅನುದಾನ ನೀಡುವ ಭರವಸೆಯನ್ನು ನೀಡಿದರು. ತುಮಕೂರುಜಿಲ್ಲೆಯಿಂದ ಉತ್ತಮ ಕ್ರೀಡಾಪಟುಗಳು ಹೊರಬಂದು, ವಿಶ್ವಮಟ್ಟದಲ್ಲಿ ನಾಡಿನ ಕೀರ್ತಿಯನ್ನು ಹೆಚ್ಚಿಸಲೆಂದ ಕ್ರೀಡಾಪುಟಗಳಿಗೆ ಮುಖ್ಯಮಂತ್ರಿಗಳು ಶುಭ ಕೋರಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page