Saturday, January 17, 2026

ಸತ್ಯ | ನ್ಯಾಯ |ಧರ್ಮ

ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯಕ್ಕೆ ಚಾಲನೆ: ಪುರಾತನ ವಸ್ತು ಪತ್ತೆ, ನಿಷೇಧಿತ ವಲಯ ಘೋಷಣೆ

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿಗಳು ಹಾಗೂ ಪುರಾತನ ವಸ್ತುಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಉತ್ಖನನ ಕಾರ್ಯ ಆರಂಭಿಸಿದೆ. ಜನವರಿ 16ರಿಂದ ಆರಂಭವಾದ ಈ ಉತ್ಖನನ ಕಾರ್ಯ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ಉತ್ಖನನ ಕಾರ್ಯ ನಡೆಯುತ್ತಿದ್ದು, ಎರಡನೇ ದಿನದ ಕಾರ್ಯಾಚರಣೆಯ ವೇಳೆ ಮಣ್ಣಿನೊಳಗಿಂದ ಪುರಾತನ ವಸ್ತುವೊಂದು ಪತ್ತೆಯಾಗಿದೆ. ಈ ಸಂಬಂಧ ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲನೆ ನಡೆಸಿದ್ದಾರೆ. ನಿನ್ನೆಯಿಂದ ಈವರೆಗೆ ವೀರಭದ್ರೇಶ್ವರ ದೇವಸ್ಥಾನದ ಸಮೀಪ ಸುಮಾರು 10 ಮೀಟರ್ ಉದ್ದ ಹಾಗೂ 10 ಮೀಟರ್ ಅಗಲದಲ್ಲಿ ಉತ್ಖನನ ನಡೆಸಲಾಗಿದೆ.

ಇನ್ನು ಉತ್ಖನನ ನಡೆಯುತ್ತಿರುವ ಪ್ರದೇಶವನ್ನು ನಿಷೇಧಿತ ವಲಯವೆಂದು ಘೋಷಿಸಲಾಗಿದೆ. ಐತಿಹಾಸಿಕ ನಿಧಿ ಹಾಗೂ ಪುರಾತನ ವಸ್ತುಗಳ ಸಂರಕ್ಷಣೆಯ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶ, ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.

ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರಿನ ಈ ಪ್ರದೇಶವನ್ನು ಅತಿ ಸೂಕ್ಷ್ಮ ವಲಯವಾಗಿ ಗುರುತಿಸಲಾಗಿದ್ದು, ಉತ್ಖನನ ಕಾರ್ಯ ಪೂರ್ಣಗೊಳ್ಳುವವರೆಗೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಅಧಿಕೃತವಾಗಿ ನೇಮಕಗೊಂಡವರನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕರು, ಪ್ರವಾಸಿಗರು ಅಥವಾ ಇತರ ವ್ಯಕ್ತಿಗಳಿಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಅಲ್ಲದೆ, ಫೋಟೋ ಮತ್ತು ವಿಡಿಯೋ ಚಿತ್ರೀಕರಣಕ್ಕೂ ನಿರ್ಬಂಧ ವಿಧಿಸಲಾಗಿದೆ.

ಪಾರಂಪರಿಕ ಪ್ರದೇಶದ ಸಂರಕ್ಷಣೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page