Wednesday, January 21, 2026

ಸತ್ಯ | ನ್ಯಾಯ |ಧರ್ಮ

ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ನನ್ನ ಹೆಸರೇ ಆಸರೆ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕೆ

“ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆ ಎನ್ನುವಂತೆ, ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ನನ್ನ ಹೆಸರೇ ಆಸರೆಯಾಗಿದೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಸುಧೀರ್ಘ ಪೋಸ್ಟ್ ಮಾಡಿರುವ ಅವರು, ಬಿಜೆಪಿಯ ಮಾಜಿ ಶಾಸಕರೊಬ್ಬರು ತಮ್ಮ ರಾಜಕೀಯ ಪ್ರಾಸಂಗಿಕತೆ ಕುಸಿಯುತ್ತಿದೆ ಎಂಬ ಆತಂಕದಿಂದ ತಮ್ಮ ಹೆಸರನ್ನು ಬಳಸಿ ಮತ್ತೆ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಪ್ರಜ್ಞೆ ಇಲ್ಲದವರ ತರ್ಕವಿಲ್ಲದ ಮಾತುಗಳಿಗೆ ಉತ್ತರಿಸುವುದು ಸಮಯ ವ್ಯರ್ಥವೇ ಸರಿ. ಆದರೂ ಸಚಿವನಾಗಿ ಕುತರ್ಕಗಳಿಗೂ ಉತ್ತರಿಸುವುದು ನನ್ನ ಕರ್ತವ್ಯ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಕಚೇರಿಯ ಮೂಲೆಯಲ್ಲಿ ಗುಜರಿಯ ತೂಕಕ್ಕೆ ಹಾಕಲು ಇಟ್ಟಿದ್ದ ಯಾವುದೋ ಪೇಪರ್ ಬಂಡಲ್‌ನ್ನು ಮುಂದಿಟ್ಟುಕೊಂಡು, ಯಾವುದೇ ಆಧಾರವಿಲ್ಲದ, ತರ್ಕರಹಿತ ಹಾಗೂ ಸತ್ಯಾಂಶವಿಲ್ಲದ ಆರೋಪಗಳನ್ನು ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. “ಗುಡ್ಡ ಅಗೆಯುವವರಿಗೆ ಕನಿಷ್ಠ ಇಲಿಯನ್ನಾದರೂ ಹಿಡಿಯುವ ಗುರಿ ಇರಬೇಕು. ಆದರೆ ಇವರಿಗೆ ಜಿರಳೆ ಹಿಡಿಯಲೂ ಸಾಧ್ಯವಾಗಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಇದೇ ಸಂದರ್ಭದಲ್ಲಿ 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ಶೇ.90ರಷ್ಟು ಜನಸಂಖ್ಯೆ ಮತ್ತು ಶೇ.10ರಷ್ಟು ಭೌಗೋಳಿಕ ಆಧಾರದ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸುತ್ತೋಲೆ ಮತ್ತು ಮಾರ್ಗಸೂಚಿಗಳಂತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಒಟ್ಟು ಅನುದಾನದಲ್ಲಿ ಶೇ.60ರಷ್ಟು ನಿರ್ಬಂಧಿತ ಹಾಗೂ ಶೇ.40ರಷ್ಟು ಅನಿರ್ಬಂಧಿತ ಅನುದಾನವಾಗಿದ್ದು, ಗ್ರಾಮ ಪಂಚಾಯತಿಗಳು ಗ್ರಾಮಸಭೆಗಳನ್ನು ನಡೆಸಿ ಕ್ರಿಯಾ ಯೋಜನೆ ರೂಪಿಸಿಕೊಂಡು, ಪಂಚಾಯತ್ ಹಂತದಲ್ಲೇ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿವೆ ಎಂದು ಅವರು ವಿವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page