Thursday, January 22, 2026

ಸತ್ಯ | ನ್ಯಾಯ |ಧರ್ಮ

ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ದಕ್ಷಿಣ ಕೊರಿಯಾದ ಮಹಿಳೆ ಮೇಲೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ಸೋಮವಾರದಂದು, ವಾಡಿಕೆಯ ತಪಾಸಣೆಯ (routine check) ನೆಪದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬ ದಕ್ಷಿಣ ಕೊರಿಯಾದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಕೊರಿಯಾಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಫ್ಫಾನ್ ಅಹ್ಮದ್ ಎಂಬ ಸಿಬ್ಬಂದಿಯನ್ನು ಕೆಐಎಎಲ್ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ ಎಂದು ಎಎನ್‌ಐ (ANI) ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟಿಕೆಟ್ ತಪಾಸಣೆ ವೇಳೆ ಮಹಿಳೆಯ ಬ್ಯಾಗ್ ಬೀಪ್ ಶಬ್ದ ಮಾಡುತ್ತಿದೆ ಎಂದು ಆರೋಪಿ ಹೇಳಿದ್ದಾನೆ. ನಂತರ ಪ್ರತ್ಯೇಕವಾಗಿ ತಪಾಸಣೆ ನಡೆಸಬೇಕೆಂದು ಆಕೆಯನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದು, ತಪಾಸಣೆಯ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿ ಹಿಂದೂ ವರದಿಯ ಪ್ರಕಾರ, ಮಹಿಳೆ ಆಕ್ಷೇಪ ವ್ಯಕ್ತಪಡಿಸಿದರೂ ಆರೋಪಿ ಕೃತ್ಯ ಮುಂದುವರಿಸಿದ್ದಲ್ಲದೆ, ಕೊನೆಗೆ “ಥ್ಯಾಂಕ್ಯೂ” ಎಂದು ಹೇಳಿ ಆಕೆಯನ್ನು ಕಳುಹಿಸಿದ್ದಾನೆ.

ಆರೋಪಿ ಅಹ್ಮದ್, ಭದ್ರತಾ ತಪಾಸಣೆಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಗ್ರೌಂಡ್ ಸ್ಟಾಫ್ ಆಗಿದ್ದ ಎಂದು ವರದಿ ತಿಳಿಸಿದೆ.

ಕಿರುಕುಳದ ನಂತರ, ಮಹಿಳೆ ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದಾರೆ. ಅವರು ಆರೋಪಿಯನ್ನು ಕೂಡಲೇ ವಶಕ್ಕೆ ಪಡೆದು ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಘಟನೆ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page