Saturday, January 24, 2026

ಸತ್ಯ | ನ್ಯಾಯ |ಧರ್ಮ

ಕಾರಾಗೃಹಗಳಲ್ಲಿ ಮನೆ ಊಟಕ್ಕೆ ಮಾರ್ಗಸೂಚಿ ರೂಪಿಸಲು ಇದು ಸಕಾಲ: ಹೈಕೋರ್ಟ್‌

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಇರುವ ಕೈದಿಗಳಿಗೆ ಮನೆ ಊಟ ಹಾಗೂ ಇತರೆ ವಿಶೇಷ ಸೌಲಭ್ಯಗಳನ್ನು ನೀಡುವ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸುವುದು ಅನಿವಾರ್ಯ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಗಳಿಗೆ ಮನೆ ಊಟಕ್ಕೆ ನೀಡಿದ್ದ ಅನುಮತಿ ತಡೆಯಾಜ್ಞೆಯನ್ನು ನ್ಯಾಯಾಲಯ ವಿಸ್ತರಿಸಿದೆ.

ಪವಿತ್ರಾ ಗೌಡ, ನಾಗರಾಜ್‌ ಹಾಗೂ ಲಕ್ಷ್ಮಣ್‌ ಅವರು ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡಿದ್ದ ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಕಾರಾಗೃಹಗಳಲ್ಲಿ ಯಾವ ಕೈದಿಗಳಿಗೆ ಯಾವ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ಸೂಚನೆ ನೀಡಿತು. ಸುಪ್ರೀಂಕೋರ್ಟ್‌ ಆದೇಶ ಹಾಗೂ ಜೈಲು ಕೈಪಿಡಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಯಾವುದೇ ಕೈದಿಗೆ ವಿಶೇಷ ಸೌಲಭ್ಯ ನೀಡಲು ಅವಕಾಶವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ನಟ ದರ್ಶನ್‌ ಪರ ವಾದಿಸಿದ ವಕೀಲ ಎಸ್‌. ಸುನಿಲ್‌ ಕುಮಾರ್‌, “ದರ್ಶನ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಆದೇಶವನ್ನು ತೋರಿಸಿ ಜೈಲು ಅಧಿಕಾರಿಗಳು ಇತರೆ ಆರೋಪಿಗಳಿಗೆ ಅಕ್ಷರಶಃ ಬೆದರಿಕೆ ಒಡ್ಡುತ್ತಿದ್ದಾರೆ. ಕೇವಲ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಅಮಾನುಷವಾಗಿ ವರ್ತಿಸಬಾರದು ಎಂದು ವಿಚಾರಣಾಧೀನ ನ್ಯಾಯಾಲಯ ಹೇಳಿರುವುದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಆಹಾರವಾಗಲಿ, ಬೆಡ್‌ ಆಗಲಿ ಅಥವಾ ಇತರೆ ಯಾವುದೇ ಸೌಲಭ್ಯವಾಗಲಿ, ಕಾನೂನು ಮತ್ತು ಜೈಲು ಕೈಪಿಡಿಯ ಪ್ರಕಾರವೇ ಸೌಲಭ್ಯ ಕಲ್ಪಿಸಬೇಕು. ಕೊಡಬಾರದು ಎಂದು ಹೇಳುತ್ತಿಲ್ಲ, ಆದರೆ ಅದಕ್ಕೆ ವೈದ್ಯರ ಪ್ರಮಾಣಪತ್ರ ಸೇರಿದಂತೆ ಸ್ಪಷ್ಟ ಮಾನದಂಡಗಳಿರಬೇಕು. ಈ ಕುರಿತು ಮಾರ್ಗಸೂಚಿ ರೂಪಿಸಲು ಕಾಲ ಕೂಡಿ ಬಂದಿದೆ,” ಎಂದು ಹೇಳಿತು.

ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ಪರ ವಾದಿಸಿದ ವಿಶೇಷ ಸರಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್‌, “ಸುಪ್ರೀಂಕೋರ್ಟ್‌ ತೀರ್ಪು ಹಾಗೂ ಜೈಲು ಕೈಪಿಡಿ ಮಾರ್ಗಸೂಚಿಗಳ ಪ್ರಕಾರವೇ ಕೈದಿಗಳೊಂದಿಗೆ ನಡೆದುಕೊಳ್ಳಬೇಕು. ಈ ಸಂಬಂಧ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು,” ಎಂದು ತಿಳಿಸಿದರು.

ಎಲ್ಲರ ವಾದ ಆಲಿಸಿದ ನ್ಯಾಯಪೀಠ, “ನಟ ದರ್ಶನ್‌ 2024ರ ಸೆಪ್ಟೆಂಬರ್‌ನಲ್ಲಿಯೇ ಮನೆ ಊಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆಗಲೇ ಮಾರ್ಗಸೂಚಿ ರೂಪಿಸಬೇಕಿತ್ತು. ಈಗ ಜೈಲು ಕೈಪಿಡಿ, ಹಿಂದಿನ ಅರ್ಜಿಗಳು ಸೇರಿದಂತೆ ಎಲ್ಲ ದಾಖಲೆಗಳನ್ನು ಸಲ್ಲಿಸಿದಲ್ಲಿ ಈ ವಿಚಾರದಲ್ಲಿ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲಾಗುವುದು,” ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 2ಕ್ಕೆ ಮುಂದೂಡಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page