Saturday, January 24, 2026

ಸತ್ಯ | ನ್ಯಾಯ |ಧರ್ಮ

ರಷ್ಯಾ ತೈಲ ಖರೀದಿ ವಿಚಾರ: ಭಾರತದ ಮೇಲೆ ಅಮೆರಿಕದ ಒತ್ತಡ ಮುಂದುವರಿಕೆ, H-1B ವೀಸಾ ಕುರಿತ ಹೊಸ ನಿರ್ಧಾರದಿಂದ ಮತ್ತೊಮ್ಮೆ ಆತಂಕ

ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಬದಲಾಯಿಸಬೇಕೆಂದು ಅಮೆರಿಕ ನಿರಂತರವಾಗಿ ಒತ್ತಡ ಹೇರುತ್ತಿರುವ ನಡುವೆಯೇ, ಭಾರತಕ್ಕೆ ಹೊಡೆತ ನೀಡುವ ಮತ್ತೊಂದು ಮಹತ್ವದ ನಿರ್ಧಾರವನ್ನು ಅಮೆರಿಕ ಕೈಗೊಂಡಿದೆ. ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಹಿನ್ನೆಲೆಯಲ್ಲಿ ಭಾರತದಿಂದ ಆಮದು ಆಗುವ ಕೆಲವು ವಸ್ತುಗಳ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸುವುದಾಗಿ ಕಳೆದ ಆಗಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು.

ಈ ಕ್ರಮದ ಬೆನ್ನಲ್ಲೇ, ಅಮೆರಿಕದ ವಲಸೆ ನೀತಿಗಳಲ್ಲೂ ಮಹತ್ವದ ಬದಲಾವಣೆಗಳು ನಡೆದಿದ್ದು, ವಿಶೇಷವಾಗಿ H-1B ವೀಸಾ ವ್ಯವಸ್ಥೆಗೆ ಸಂಬಂಧಿಸಿದ ನಿರ್ಧಾರಗಳು ಭಾರತಕ್ಕೆ ನೇರ ಪರಿಣಾಮ ಬೀರುತ್ತಿವೆ. ಉದ್ಯೋಗಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗುವವರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಾಗಿರುವುದರಿಂದ, H-1B ವೀಸಾ ಶುಲ್ಕ ಹೆಚ್ಚಳದಂತಹ ಕ್ರಮಗಳು ಭಾರತೀಯ ವೃತ್ತಿಪರರಿಗೆ ದೊಡ್ಡ ನಷ್ಟವನ್ನುಂಟುಮಾಡಿವೆ.

ಇದೀಗ ಅಮೆರಿಕದ ಫ್ಲೋರಿಡಾ ರಾಜ್ಯವು ಮತ್ತೊಂದು ವಿವಾದಾತ್ಮಕ ನಿರ್ಧಾರವನ್ನು ಕೈಗೊಳ್ಳಲು ಮುಂದಾಗಿದೆ. ಫ್ಲೋರಿಡಾದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮುಂದಿನ ಒಂದು ವರ್ಷದವರೆಗೆ ಹೊಸ H-1B ವೀಸಾ ಹೊಂದಿರುವವರಿಗೆ ಉದ್ಯೋಗ ನೀಡದಿರಲು ರಾಜ್ಯ ಆಡಳಿತ ಮಂಡಳಿ ಪ್ರಸ್ತಾವನೆ ತಯಾರಿಸಿದೆ. ಈ ಪ್ರಸ್ತಾವನೆಯನ್ನು ಜನವರಿ 29ರಂದು ಫ್ಲೋರಿಡಾ ರಾಜ್ಯದ ಆಡಳಿತ ಮಂಡಳಿಯ ಮುಂದೆ ಮಂಡಿಸಲಾಗಿದ್ದು, ಅನುಮೋದನೆ ದೊರೆತಲ್ಲಿ ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ.

ಸ್ಥಳೀಯ ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವುದು ಹಾಗೂ ದೇಶದೊಳಗಿನ ಅಸಮಾಧಾನವನ್ನು ಕಡಿಮೆ ಮಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವೆಂದು ಫ್ಲೋರಿಡಾ ಆಡಳಿತ ತಿಳಿಸಿದೆ. ಆದರೆ ಅಮೆರಿಕದಲ್ಲಿ H-1B ವೀಸಾ ಹೊಂದಿರುವವರಲ್ಲಿ ಬಹುಪಾಲು ಭಾರತೀಯ ನಾಗರಿಕರಾಗಿರುವುದರಿಂದ, ಈ ನಿರ್ಧಾರ ಭಾರತಕ್ಕೆ ಮತ್ತೊಂದು ದೊಡ್ಡ ಹೊಡೆತವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರಮುಖವಾಗಿ, ಈ ನಿರ್ಧಾರವು ಫ್ಲೋರಿಡಾ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಮಾತ್ರ ಸೀಮಿತವಾಗಿದ್ದು, ಈಗಾಗಲೇ ಉದ್ಯೋಗದಲ್ಲಿರುವ H-1B ವೀಸಾ ಹೊಂದಿರುವವರಿಗೆ ಇದು ಅನ್ವಯಿಸುವುದಿಲ್ಲ. ಆದರೂ ಹೊಸ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುವುದರಿಂದ, ಅಮೆರಿಕದಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಲ್ಲಿ ಆತಂಕ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page