Tuesday, January 27, 2026

ಸತ್ಯ | ನ್ಯಾಯ |ಧರ್ಮ

ರಿವರ್ಸ್ ಮೈಗ್ರೇಷನ್: ಟ್ರಂಪ್ ಎಫೆಕ್ಟ್, ಅಮೆರಿಕ ತೊರೆದು ತವರಿಗೆ ಮರಳುತ್ತಿರುವ ಟೆಕ್ಕಿಗಳು

ದೆಹಲಿ: ಅಮೆರಿಕದಲ್ಲಿನ ಕಠಿಣ ವೀಸಾ ನಿಯಮಗಳು ಮತ್ತು ಹೆಚ್ಚಿದ ವೀಸಾ ಶುಲ್ಕದ ಕಾರಣದಿಂದಾಗಿ, ಪ್ರತಿಭಾವಂತರು ತಮ್ಮ ತವರು ದೇಶಗಳಿಗೆ ಮರಳುತ್ತಿದ್ದಾರೆ ಮತ್ತು ಅಲ್ಲಿಯೇ ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ.

ಕಳೆದ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತಕ್ಕೆ ಮರಳಿದ ತಾಂತ್ರಿಕ ಪರಿಣತರ ಸಂಖ್ಯೆಯಲ್ಲಿ ಶೇ. 40 ರಷ್ಟು ಏರಿಕೆಯಾಗಿದೆ ಎಂದು ‘ಲಿಂಕ್ಡ್‌ಇನ್’ (LinkedIn) ಅಂಕಿಅಂಶಗಳನ್ನು ಉಲ್ಲೇಖಿಸಿ ಅಮೆರಿಕನ್ ಹೂಡಿಕೆದಾರ ಹ್ಯಾನಿ ಗಿರ್ಗಿಸ್ ತಿಳಿಸಿದ್ದಾರೆ. ಕಠಿಣವಾದ ಎಚ್‌-1ಬಿ (H-1B) ವೀಸಾ ನಿಯಮಗಳು ಮತ್ತು ಲಕ್ಷ ಡಾಲರ್‌ಗೆ ಏರಿಕೆಯಾದ ಶುಲ್ಕದ ಕಾರಣದಿಂದಾಗಿ ಅಮೆರಿಕಕ್ಕೆ ಬರುವ ವಿದೇಶಿ ತಾಂತ್ರಿಕ ಪರಿಣತರ ಸಂಖ್ಯೆ ಗಣನೀಯವಾಗಿ ತಗ್ಗಿರುವುದಾಗಿ ಅವರು ವರದಿಯೊಂದನ್ನು ಉಲ್ಲೇಖಿಸಿದ್ದಾರೆ. ಅನೇಕ ಪರಿಣತರು ಅಮೆರಿಕವನ್ನು ತೊರೆಯಲು ನಿರ್ಧರಿಸುತ್ತಿದ್ದರೆ, ಇನ್ನು ಕೆಲವರು ಅಮೆರಿಕಕ್ಕೆ ಹೋಗಲೇಬಾರದು ಎಂದು ಭಾವಿಸುತ್ತಿದ್ದಾರೆ.

ಈ ಧೋರಣೆಯಿಂದಾಗಿ ‘ಅಮೆರಿಕನ್ ವೀಸಾಗಳ ಮೇಲೆ ಅವಲಂಬಿತರಾಗುವವರ ಸಂಖ್ಯೆ ಕಡಿಮೆಯಾಗುತ್ತಿದ್ದು’, ಭಾರತದಲ್ಲಿ ‘ಸ್ವದೇಶಿ ಪರಿಣತರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಅವರು ವಿವರಿಸಿದ್ದಾರೆ. ಪರಿಣಾಮವಾಗಿ ಜಾಗತಿಕ ಕೌಶಲವು ‘ಕಣ್ಮರೆಯಾಗುತ್ತಿಲ್ಲ, ಬದಲಾಗಿ ಅದು ಮರು-ಸಮತೋಲನ (rebalancing) ಗೊಳ್ಳುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ಮರಳುತ್ತಿರುವವರ ನಿಖರ ಸಂಖ್ಯೆ ತಿಳಿದಿಲ್ಲವಾದರೂ, ಈ ಬದಲಾವಣೆ ನಿಜವೆಂದು ಭಾರತೀಯ ತಾಂತ್ರಿಕ ಸಂಸ್ಥೆಗಳು ಒಪ್ಪಿಕೊಳ್ಳುತ್ತಿವೆ. ಸ್ವದೇಶಿ ಪರಿಣತರಿಂದ ಭಾರತಕ್ಕೆ ಲಾಭವಾಗಲಿದೆ ಎಂಬುದಕ್ಕೆ ಗಿರ್ಗಿಸ್ ಒಂದು ಉದಾಹರಣೆಯನ್ನು ನೀಡಿದ್ದಾರೆ. ಭಾರತದ ಕುನಾಲ್ ಬಹಲ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದರು. ನಂತರ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್ ಆಗಿ ಸೇರಿದರು. ಆದರೆ 2007ರಲ್ಲಿ ಅವರ ಎಚ್‌-1ಬಿ ವೀಸಾ ಅರ್ಜಿಯನ್ನು ಅಮೆರಿಕ ಸರ್ಕಾರ ತಿರಸ್ಕರಿಸಿತು. ಇದರಿಂದಾಗಿ ಅವರು ತಮ್ಮ 23ನೇ ವಯಸ್ಸಿನಲ್ಲಿಯೇ ಭಾರತಕ್ಕೆ ಮರಳಿ, ಇತರರೊಂದಿಗೆ ಸೇರಿ ‘ಸ್ನ್ಯಾಪ್‌ಡೀಲ್’ (Snapdeal) ಎಂಬ ಆನ್‌ಲೈನ್ ಶಾಪಿಂಗ್ ಸಂಸ್ಥೆಯನ್ನು ಸ್ಥಾಪಿಸಿದರು. ಅತಿ ಕಡಿಮೆ ಅವಧಿಯಲ್ಲಿ ಆ ಸಂಸ್ಥೆಯ ಮೌಲ್ಯವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತು. ಈಗಲೂ ಪರಿಣತರ ಈ ‘ರಿವರ್ಸ್ ಮೈಗ್ರೇಷನ್’ ಅಥವಾ ಮರು ವಲಸೆಯಿಂದ ಭಾರತಕ್ಕೇ ಲಾಭವಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಒಂದೊಮ್ಮೆ ಭಾರತೀಯ ಇಂಜಿನಿಯರ್‌ಗಳಿಗೆ ಅಮೆರಿಕದಲ್ಲಿ ಉದ್ಯೋಗ ನೀಡುತ್ತಿದ್ದ ಸಂಸ್ಥೆಗಳು, ಈಗ ಭಾರತದಲ್ಲಿಯೇ ಪರಿಣತರ ತಂಡಗಳನ್ನು ತಯಾರು ಮಾಡುತ್ತಿವೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page