Tuesday, January 27, 2026

ಸತ್ಯ | ನ್ಯಾಯ |ಧರ್ಮ

ಹಿಂದಿ ವಿಶ್ವದೆಲ್ಲೆಡೆ, ಕನ್ನಡ ಬೀದಿಪಾಲು ಇದು ತರವೇ?

“..ಹಿಂದಿ ಬೆಳೆಸಿ ಕನ್ನಡ ತುಳಿಯುವ ಪರಿಯನ್ನು ಇನ್ನು ಮುಂದೆ ನೋಡಿ ಕೂರುವುದಿಲ್ಲ, ಹಿಂದಿ ಬೆಳೆಸುವುದಕ್ಕೆ ಕನ್ನಡಿಗರಿಂದ ಬಲವಂತವಾಗಿ ರಾಜ್ಯ ಮತ್ತು ಒಕ್ಕೂಟ ಸರಕಾರಗಳು ತೆರಿಗೆ ಕೀಳುತ್ತಿವೆ..” ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ಈ ವರ್ಷವೂ ಸಹ ವಿಶ್ವದೆಲ್ಲೆಡೆ ‘ವಿಶ್ವ ಹಿಂದಿ ದಿವಸ್’ ನ ಇಂಡಿಯಾ ಒಕ್ಕೂಟ ಸರ್ಕಾರದ ನೂರಾರು ಕೋಟಿ ಅನುದಾನದಿಂದ ಜನವರಿ 10ನೇ ತಾರೀಖಿನಂದು ಆಚರಿಸಲಾಯಿತು. ಚೀನಾ ದೇಶದ ಶಾಂಘೈನಲ್ಲಿ ಇಂಡಿಯಾ ವಿದೇಶಾಂಗ ಸೇವಾ ಅಧಿಕಾರಿಯಾದ ಪ್ರತೀಕ್ ಮತೂರ್ ವಿಶ್ವ ಹಿಂದಿ ದಿವಸ್ ಆಚರಣೆಯಲ್ಲಿ ಪಾಲ್ಗೊಂಡ ಸಂಧರ್ಭದಲ್ಲಿ ಹೇಳಿದ ಮಾತಿದು ‘ಹಿಂದಿ ನಮ್ಮನ್ನು ಗಡಿಗಳನ್ನು ಮೀರಿ ಸಂಪರ್ಕಿಸುತ್ತದೆ’. ವಿಶ್ವ ಹಿಂದಿ ದಿವಸಕ್ಕೆ ತಯಾರಿ 1975ರಿಂದಲೂ ನಡೆದಿದೆ, ಮೊದಲಿಗೆ ಜನವರಿ 10ರಂದು  ಕಾನ್ಪುರದಲ್ಲಿ ವಿಶ್ವ ಹಿಂದಿ ದಿವಸ್ ಬಗ್ಗೆ ಸಭೆ ನಡೆಸಲಾಗಿತ್ತು. ಅದಕ್ಕೆ ಇಂದಿರಾಗಾಂಧಿಯವರ ಬೆಂಬಲವು ಸಹ ಇತ್ತು, ಅಧಿಕೃತವಾಗಿ 2006ರಲ್ಲಿ ಮನಮೋಹನ್ ಸಿಂಗ್ ರವರ ಅಧಿಕಾರ ಅವಧಿಯಲ್ಲಿ ‘ವಿಶ್ವ ಹಿಂದಿ ದಿವಸ್’ ಅನ್ನು ಜಾರಿಗೆ ತರಲಾಯಿತು.

ಈ ವರ್ಷ ವಿಶ್ವದ ಹಲವಾರು ಕಡೆ ತುಂಬ ಸಂಭ್ರಮದಿಂದ ‘ವಿಶ್ವ ಹಿಂದಿ ದಿವಸ್’ ಜರುಗಿತು. ಹಿಂದಿ ಮತ್ತು ಸಂಸ್ಕೃತ ಬೆಳೆಸುವಲ್ಲಿ ಮತ್ತು ಹೇರಿಕೆಗೆ ಇಂಡಿಯಾ ಒಕ್ಕೂಟ ಸರ್ಕಾರದ ಸಾವಿರಾರು ಕೋಟಿ ಅನುದಾನ ಸದಾ ಯಾವಾಗಲೂ ಇರುತ್ತದೆ. ಇಂಡಿಯಾ ಒಕ್ಕೂಟ ಸರ್ಕಾರ ವಿಶ್ವದೆಲ್ಲೆಡೆ ವಿಶ್ವ ಹಿಂದಿ ದಿವಸ್ ಆಚರಿಸಿ ‘ಇಂಡಿಯಾ ಒಕ್ಕೂಟ ಅಂದರೆ ಹಿಂದಿ ಮಾತ್ರ’ ಎಂಬುದನ್ನು ಸಾರಲು ಹೊರಟಾಗಿದೆ. ಅದರ ಪರಿಣಾಮ ಇಂಡಿಯಾ ಅಂದರೆ ಹಿಂದಿ – ಹಿಂದಿ ಅಂದರೆ ಇಂಡಿಯಾ ಎಂಬಂತಾಗಿದೆ. ಹಿಂದಿ ಭಾಷೆಯನ್ನು ಇಂಡಿಯಾ ಒಕ್ಕೂಟದಲ್ಲಿ ಸುಮಾರು ದಶಕಗಳಿಂದ ಬೃಹದಾಕಾರದಲ್ಲಿ ಬೆಳೆಸ ತೊಡಗಿದ್ದಾರೆ, ಆದುದ್ದರಿಂದ ಬೆಳೆದಿದೆ. ಇಂಡಿಯಾ ಒಕ್ಕೂಟಕ್ಕೆ ಸ್ವತಂತ್ರ ಪೂರ್ವ ಸಮಯದಲ್ಲಿ ಸರ್ ಜಾರ್ಜ್ ಗ್ರಿಯರ್ಸನ್ ಅವರ ಭಾಷಾ ಸಮೀಕ್ಷೆ (1898-1928) ಯ ಪ್ರಕಾರ 179 ಭಾಷೆಗಳು ಮತ್ತು 544 ಉಪಭಾಷೆಗಳನ್ನು ಗುರುತಿಸಲಾಗಿತ್ತು. ಆದರೆ ಈಗ ಹಿಂದಿ ಹೇರಿಕೆಯ ತೀವ್ರತೆಯಿಂದ ಬಡಗಣ ಇಂಡಿಯಾದಲ್ಲಿ ಹಲವಾರು ಭಾಷೆಗಳು ನಶಿಸಿ ಹೋಗಿವೆ, ಹಾಗಾಗಿ ಆ ಪ್ರದೇಶದ ಜನರು ಹಿಂದಿಯನ್ನೇ ಅಧಿಕೃತ ಭಾಷೆ ಎಂದು ಸ್ವೀಕರಿಸಿದ್ದಾರೆ. ಹಿಂದಿ ಮತ್ತು ಸಂಸ್ಕೃತ ಹೇರಿಕೆ ಕಾಳಿಂಗ ಸರ್ಪವಾಗಿ ಮಿಕ್ಕ ನುಡಿಗಳನ್ನು ಕಚ್ಚಿ ನಂಜೇರಿಸಿ ಸಾಯಿಸಲಿ, ಇನ್ನ ಸ್ವಲ್ಪ ವರ್ಷಗಳು ಕಳೆದರೆ ಇಂಡಿಯಾದ ನೂರಾರು ಭಾಷೆಗಳು ನಶಿಸಿ ಮಸಣ ಸೇರಲಿ, ಆಗ ಹಿಂದಿ ಮತ್ತು ಸಂಸ್ಕೃತಗಳೆರಡೆ ಉಳಿಯಲಿ ಎಂಬುದು ಕೆಟ್ಟ ರಾಜಕಾರಣ.

ಇಂಡಿಯಾ ಒಕ್ಕೂಟಕ್ಕೆ ಸ್ವತಂತ್ರ ಬರುವ ಮುಂಚೆ ಮತ್ತು ಬಂದ ನಂತರವು ಸಹ ಹಿಂದಿ ಹೇರಿಕೆ ವ್ಯಾಪಕವಾಗಿ ನಡೆದಿತ್ತು. ಅದಕ್ಕೆ ತೀವ್ರವಾಗಿ ತೆಂಕಣ ಇಂಡಿಯಾದಲ್ಲಿ ವಿರೋಧವು ವ್ಯಕ್ತವಾಗಿತ್ತು. ಇಂಡಿಯಾ ಒಕ್ಕೂಟ ಸರ್ಕಾರವು ವ್ಯಕ್ತವಾದ ವಿರೋಧವನ್ನು ಲೆಕ್ಕಿಸದೆ ಹಿಂದಿ ಮತ್ತು ಸಂಸ್ಕೃತ ಹೇರಿಕೆ ಮಾಡುವ ಪರಿ ದಿನದಿಂದ ದಿನೇ ಹೆಚ್ಚುತಲೆ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸರಕಾರ ಬದಲಾಗಬಹುದು ಆದರೆ ಹಿಂದಿ ಮತ್ತು ಸಂಸ್ಕೃತ ಹೇರಿಕೆಯು ಬದಲಾಗಬೇಕೆಂದರೆ ಸಂವಿಧಾನದ ಆರ್ಟಿಕಲ್ 343-351 ರ ವರೆಗೂ ತಿದ್ದುಪಡಿ ಮಾಡಿ ಹಿಂದಿ ಮತ್ತು ಸಂಸ್ಕೃತಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆದಾಕದೆ ಎಂದು ಬದಲಾಗದು. ಕಳೆದ 11 ವರ್ಷಗಳಲ್ಲಿ ಅಂದರೆ 2014 ರಿಂದ ಇಂಡಿಯಾ ಒಕ್ಕೂಟ ಸರಕಾರವು ಹಿಂದಿ ಅಭಿವೃದ್ಧಿಗೆ 426.99 ಕೋಟಿ ರೂಪಾಯಿಗಳಷ್ಟು ಅನುದಾನ ನೀಡಿದೆ, ಉರ್ದು ಅಭಿವೃದ್ಧಿಗೆ 837.94 ಕೋಟಿ ಅನುದಾನ ನೀಡಿದೆ, ಸಂಸ್ಕೃತ ಅಭಿವೃದ್ಧಿಗೆ 2532.59 ಕೋಟಿ ಅನುದಾನ ನೀಡಿದೆ. ಅದೇ ರೀತಿ ಒಕ್ಕೂಟ ಸರ್ಕಾರ ತೆಂಕಣ ಇಂಡಿಯಾ ರಾಜ್ಯದ ನುಡಿಗಳಿಗೆ ನೀಡಿರುವ ಅನುದಾನವನ್ನು ಗಮನಿಸುವುದಾದರೆ ಕನ್ನಡ ಅಭಿವೃದ್ಧಿಗೆ 12.28 ಕೋಟಿ, ತೆಲುಗು ಅಭಿವೃದ್ಧಿಗೆ 12.65 ಕೋಟಿ, ತಮಿಳು ಅಭಿವೃದ್ಧಿಗೆ 113.48 ಕೋಟಿ, ಮಲಯಾಳಂ ಅಭಿವೃದ್ಧಿಗೆ 4.52 ಕೋಟಿ ಅನುದಾನವನ್ನು ನೀಡಿದೆ. ಈ ಅಜ-ಗಜಾಂತರ ಅನುದಾನದ ವ್ಯತ್ಯಾಸದಲ್ಲೇ ತಿಳಿಯುತ್ತದೆ ತೆಂಕಣ ಇಂಡಿಯಾ ನುಡಿಗಳು ದಿನೇ ದಿನೇ ಎಷ್ಟು ಪ್ರಮಾಣದಲ್ಲಿ ಕುಗ್ಗುತ್ತಿದೆ ಅಂತ.

ಅನುದಾನವನ್ನು ಗಮನಿಸಿ ವಾಸ್ತವವನ್ನು ತಿಳಿಯುವುದಾದರೆ ಪ್ರತೀಕ್ ಮತೂರ್ ಹೇಳಿದ ಹಾಗೆ ‘ಹಿಂದಿ ನಮ್ಮನ್ನು ಗಡಿಗಳನ್ನು ಮೀರಿ ಸಂಪರ್ಕಿಸುತ್ತದೆ’ ಹೌದು ಈ ಹೇಳಿಕೆ ನಿಜವೆ. ನಮ್ಮ ಕನ್ನಡ ಜಡವಾಗಿ, ನಿಂತಲ್ಲೇ ಕರಗಿ ಪಾತಾಳ ಸೇರುತ್ತಿದೆ. ಒಕ್ಕೂಟ ಸರ್ಕಾರಕ್ಕೆ ತೆಂಕಣ ಇಂಡಿಯಾ ನುಡಿಗಳು ಉಳಿಯುವುದು ಬೇಕಾಗಿಲ್ಲ, ಇತ್ತ ನೋಡಿದರೆ ಕರ್ನಾಟಕ ರಾಜ್ಯ ಸರ್ಕಾರವು ಕನ್ನಡ ಬೆಳೆಸದೆ ಜನರ ಓಟಿಗಾಗಿ ನಟಿಸುವ ರೂಪದಲ್ಲಿ ಬಹಳ ಕಷ್ಟಪಟ್ಟು ಇಷ್ಟವಿಲ್ಲದ ಮನಸ್ಸಿನಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

‘ವಿಶ್ವ ಹಿಂದಿ ದಿವಸ್’ದ ಉದ್ದೇಶ ಹಿಂದಿ ವಿದ್ವಾಂಸರನ್ನು ಮತ್ತು ಬರಹಗಾರರನ್ನು ಜಾಗತಿಕ ಮಟ್ಟಕೇರಿಸುವುದು. ಅದೇ ಕನ್ನಡ ವಿಷಯಕ್ಕೆ ಬಂದರೆ:- ನಾನು ಈಗ ವಿದ್ಯಾಭ್ಯಾಸ ಮಾಡುತ್ತಿರುವುದು ಕೇರಳದ ತಿರುವನಂತಪುರಂನಲ್ಲಿ ಇಲ್ಲಿಯವರ ಜೊತೆಗೆ ನನ್ನನ್ನು ಪರಿಚಯ ಮಾಡಿಕೊಳ್ಳುವಾಗ  ನಾನು ಕರ್ನಾಟಕದಿಂದ ಬಂದಿದ್ದೇನೆಂದರೆ ಬಹುಪಾಲು ಮಂದಿ ಕೇಳುವ ಪ್ರಶ್ನೆ ಕರ್ನಾಟಕದಲ್ಲಿ ಯಾವ ಭಾಷೆ ಮಾತನಾಡುತ್ತಾರೆಂದು. ಪಕ್ಕದ ರಾಜ್ಯದವರಿಗೆ ಕರ್ನಾಟಕದ ಆಡಳಿತ ನುಡಿ ಯಾವುದೆಂದು ಗೊತ್ತಿಲ್ಲ, ಇದು ಕನ್ನಡ ಬೆಳೆದಿರುವ ಪರಿ, ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳು ಕನ್ನಡಿಗರಿಂದ ಬಲವಂತವಾಗಿ ತೆರಿಗೆ ಕಿತ್ತುಕೊಂಡು ಕನ್ನಡವನ್ನು ಎಷ್ಟರಮಟ್ಟಿಗೆ ಬೆಳೆಸಿದ್ದಾರೆಂದು ಇಂತಹ ಸಂದರ್ಭದಲ್ಲಿ ತಿಳಿಯುತ್ತದೆ.

ರಾಜ್ಯ ಮಟ್ಟದಲ್ಲಿ ಕನ್ನಡ ಬೆಳೆಸಲ್ಲ, ಇನ್ನು ಒಕ್ಕೂಟ ಮಟ್ಟದಲ್ಲಿ ಕೇಳುವುದೇ ಬೇಡ. ಅದನ್ನೊಮ್ಮೆ ಅವಲೋಕಿಸಿದರೆ ತಿಳಿಯುವ ಅಂಶ:- ಒಕ್ಕೂಟ ಸರ್ಕಾರದ 150ಕ್ಕೂ ಹೆಚ್ಚು ವೆಬ್ಸೈಟ್ ಗಳಲ್ಲಿ ಕನ್ನಡದಲ್ಲಿ ಸೇವೆ ದೊರಕುವುದಿಲ್ಲ, 62 ಸರ್ಕಾರಿ ಮೊಬೈಲ್ ಅಪ್ಲಿಕೇಶನ್ ಗಳ ಅಧ್ಯಯನದಲ್ಲಿ 88% ಕ್ಕು ಹೆಚ್ಚು ಅಪ್ಲಿಕೇಶನ್ಗಳು ಕನ್ನಡದಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿಲ್ಲ, ಒಕ್ಕೂಟ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳು ಉದಾ: UPSC, SSC, IBPS ಮತ್ತು ರೈಲ್ವೆ ನೇಮಕಾತಿ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತ್ರವೇ  ಇರುತ್ತವೆ, ಕನ್ನಡದಲ್ಲಿ ಮತ್ತು ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲಿ ಈ ಸೌಲಭ್ಯ ಲಭ್ಯವಿಲ್ಲ ಮತ್ತು ಇನ್ನು ಮುಂದೆ ನೋಡುವುದಾದರೆ ಹಲವಾರು ಒಕ್ಕೂಟ ಸರ್ಕಾರದ  ಅರ್ಜಿ/ಫಾರ್ಮ್ ಗಳು, ಮಾಹಿತಿಗಳು, ದಾಖಲೆಗಳು ಕನ್ನಡದಲ್ಲಿ ಲಭ್ಯವಿಲ್ಲ. ಕನ್ನಡಿಗರ ಸಂಖ್ಯೆ ಒಕ್ಕೂಟ ಮಟ್ಟದಲ್ಲಿ 5-6  ಶೇಕಡದಷ್ಟಿದೆ, ಒಕ್ಕೂಟ ಸರ್ಕಾರದ ಉದ್ಯೋಗಗಳನ್ನು ಪಡೆಯುವ ಪಾಲು 2-3% ಕ್ಕಿಂತಲೂ  ಕಡಿಮೆಯಿದೆ.

ಹಾಗಾದರೆ ಕನ್ನಡದಲ್ಲಿ ಏನೇನು ಲಭ್ಯವಿದೆ ಎಂದು ನೋಡಿದರೆ:-  ಕ್ರೈಸ್ತ ಪಾದ್ರಿಯವರು ಬರೆದ ಕನ್ನಡ ನಿಘಂಟು, ಕತೆ, ಕವನ, ಕಾದಂಬರಿಗಳು, ಸಿದ್ದಪ್ಪಾಜಿ,  ಮಲೆ ಮಾದಪ್ಪ, ಜುಂಜಪ್ಪ ಮತ್ತು ಇನ್ನಿತರ ಜಾನಪದ ಪುರಾಣಗಳು ಮತ್ತು ಕಾವ್ಯಗಳಷ್ಟೆ. ಅದನ್ನು ಬಿಟ್ಟು ಇನ್ನೆಲ್ಲಿ ಕನ್ನಡ ಬೆಳೆದಿದೆ, ಉಳಿದಿದೆ? ಕೇವಲ ನಮ್ಮ ಮನಶಾಂತಿಗೋಸ್ಕರ ಕೆಲವೊಂದು ಉದಾಹರಣೆಗಳನ್ನು ಕೊಡಬಹುದಷ್ಟೇ ವಾಸ್ತವ ಚಿತ್ರಣವೇ ಬೇರೆ ಇದೆ.

ಕೆಲವರ ಮನೋ ವಿಕಾರವಾದ ‘ಒಂದು ದೇಶ ಒಂದೇ ಭಾಷೆ’ ಈಡೇರಿಸಿಕೊಳ್ಳಲು ಹಿಂದಿ ಹೇರಿಕೆ ಇಂಡಿಯಾ ಒಕ್ಕೂಟದೊಳಗೆ ಒಂದು ರೀತಿ ಮಾಡಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ವಿಶ್ವದಾದ್ಯಂತ ಹಿಂದಿ ಬಳಕೆಯನ್ನು ಉತ್ತೇಜಿಸಿ, ಹಿಂದಿಯನ್ನು ಜಾಗತಿಕ ಭಾಷೆಯಾಗಿ ಪ್ರಚಾರ ಮಾಡಿ, ವಿಶ್ವ ಸಂಸ್ಥೆಯ ಮಾನ್ಯತೆ ಪಡೆಯುವ ಉದ್ದೇಶದಿಂದ ಈ ‘ವಿಶ್ವ ಹಿಂದಿ ದಿವಸ್’ ಯೋಜನೆ ಎಣಿಯಲಾಗಿದೆ.

ನಮ್ಮ ಪ್ರಶ್ನೆ ಈ ತರಹದ ವೇದಿಕೆಗಳು, ಯೋಜನೆಗಳು ಒಕ್ಕೂಟ ಸರ್ಕಾರದ ವತಿಯಿಂದ ಕನ್ನಡಕ್ಕೆ ಯಾಕೆ ಸಿಗುವುದಿಲ್ಲ? ಕನ್ನಡಕ್ಕೆ 2000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ, 1500 ವರ್ಷಗಳ ಹಿಂದೇನೆ ಕನ್ನಡ ಲಿಪಿ ಇರುವುದಕ್ಕೆ ಸಾಕ್ಷಿಯಿದೆ. ಕನ್ನಡಕ್ಕೆ 2008ರಲ್ಲಿ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿದೆ. ಕನ್ನಡವು ತನ್ನದೇ ಆದಂತಹ ಸಾವಿರಾರು ವರ್ಷಗಳ ಜಾನಪದ ಇತಿಹಾಸವನ್ನು ಹೊಂದಿದೆ. ಆದರೂ ಕನ್ನಡಕ್ಕೆ ಸಿಗಬೇಕಾದ ಗೌರವ ಸ್ಥಾನಮಾನ ಒಕ್ಕೂಟ ವ್ಯವಸ್ಥೆಯಲ್ಲಿ ಇಲ್ಲಿಯವರೆಗೂ ಸಿಕ್ಕಿಲ್ಲ ಎಂಬುವುದಕ್ಕಿಂತ ಕನ್ನಡಿಗರಿಗೆ ದೊಡ್ಡ ಅವಮಾನವೇನಿದೆ?

ಹಿಂದಿ ಬೆಳೆಸಿ ಕನ್ನಡ ತುಳಿಯುವ ಪರಿಯನ್ನು ಇನ್ನು ಮುಂದೆ ನೋಡಿ ಕೂರುವುದಿಲ್ಲ, ಹಿಂದಿ ಬೆಳೆಸುವುದಕ್ಕೆ ಕನ್ನಡಿಗರಿಂದ ಬಲವಂತವಾಗಿ ರಾಜ್ಯ ಮತ್ತು ಒಕ್ಕೂಟ ಸರಕಾರಗಳು ತೆರಿಗೆ ಕೀಳುತ್ತಿವೆ. ಕನ್ನಡಿಗರ ತೆರಿಗೆಯನ್ನು ಹಿಂದಿ ಮತ್ತು ಸಂಸ್ಕೃತ ಬೆಳೆಸುವುದಕ್ಕೆ ಬಳಸುತ್ತಾರೆ ಇದು ತರವಲ್ಲ. ಕರ್ನಾಟಕದಲ್ಲಿ, ಹಿಂದಿ ರಾಷ್ಟ್ರಭಾಷೆ, ಅದು ಕರ್ನಾಟಕದಲ್ಲಿ ಇರುವುದು ನಮ್ಮ ಒಳ್ಳೆಯದಕ್ಕೆ ಎಂಬ ಮೂಢನಂಬಿಕೆ ಹಲವಾರು ಮೂಡರಲ್ಲಿ ಇದೆ. ಹಿಂದಿಯನ್ನು ಆನೆ ಮೇಲೆ ಕೂರಿಸಿ ಕನ್ನಡವನ್ನು ಬೀದಿ ಪಾಲು ಮಾಡಲು ಹೊರಟಿರುವ ಈ ಎರಡು ಸರ್ಕಾರಗಳಿಗೆ ಕನ್ನಡಿಗರು ತಕ್ಕ ಪಾಠವನ್ನು ಮುಂದಿನ ದಿನಗಳಲ್ಲಿ ಕಲಿಸದೆ ಬಿಡುವುದಿಲ್ಲ ಮತ್ತು ಕಲಿಸೇ ಕಲಿಸುತ್ತಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page