Wednesday, January 28, 2026

ಸತ್ಯ | ನ್ಯಾಯ |ಧರ್ಮ

ಯುಜಿಸಿ ವಿವಾದ | ಉತ್ತರದಲ್ಲಿ ತೀವ್ರ ಪ್ರತಿಭಟನೆ: ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಲವು ಬಿಜೆಪಿ ನಾಯಕರು

ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜಾರಿಗೊಳಿಸಿದ ಹೊಸ ನಿಯಮಗಳ ಬಗ್ಗೆ ವಿವಾದ ಉಂಟಾಗಿದೆ.

ಈ ನಿಯಮಗಳು ದುರುಪಯೋಗವಾಗುವ ಸಾಧ್ಯತೆಯಿದೆ ಮತ್ತು ಸುಳ್ಳು ದೂರು ನೀಡುವವರಿಗೆ ಶಿಕ್ಷೆ ವಿಧಿಸುವ ನಿಯಮವಿಲ್ಲ ಎಂದು ಹಲವು ವಲಯಗಳು ಯುಜಿಸಿ ನಿರ್ಧಾರದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿವೆ. ಕೇಂದ್ರ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾದ ಯುಜಿಸಿಯು ಜನವರಿ 13 ರಂದು ಹೊಸ ನಿಯಮಗಳನ್ನು ಪ್ರಕಟಿಸಿದೆ. ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಾವಳಿಗಳು, 2026’ (Promotion of Equity in Higher Education Institutions Regulations, 2026) ಹೆಸರಿನಲ್ಲಿ ಜಾರಿಗೊಳಿಸಲಾದ ಈ ನಿಯಮಗಳ ಪ್ರಕಾರ, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದ ವಿದ್ಯಾರ್ಥಿಗಳ ದೂರುಗಳನ್ನು ಪರಿಹರಿಸಲು 24/7 ಸಹಾಯವಾಣಿಗಳನ್ನು ಸ್ಥಾಪಿಸುವುದು, ಜೊತೆಗೆ ಸಮಾನ ಅವಕಾಶ ಕೇಂದ್ರಗಳು ಮತ್ತು ಸಮಾನತಾ ಸಮಿತಿಗಳನ್ನು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ರಚಿಸಬೇಕಿದೆ.

ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಆಡಳಿತಾಧಿಕಾರಿಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿಭಾಗದ ಸದಸ್ಯರಿಗೆ ಯುಜಿಸಿಯ ಈ ನಿಯಮಗಳು ಅನ್ವಯಿಸುತ್ತವೆ. ಈ ನಿಯಮಗಳು ತಾರತಮ್ಯವನ್ನು ವ್ಯಾಪಕವಾಗಿ ವ್ಯಾಖ್ಯಾನಿಸಿವೆ. ಬಹಿರಂಗ ಕೃತ್ಯಗಳು ಮಾತ್ರವಲ್ಲದೆ, ಸಮಾನ ಗೌರವಕ್ಕೆ ಧಕ್ಕೆ ತರುವ ಅಥವಾ ಮಾನವನ ಘನತೆಯನ್ನು ಉಲ್ಲಂಘಿಸುವ ಸೂಕ್ಷ್ಮ ಅಥವಾ ಪರೋಕ್ಷ ವಿಧಾನಗಳೂ ಸಹ ತಾರತಮ್ಯದ ಅಡಿಯಲ್ಲಿ ಬರುತ್ತವೆ. ಎಸ್‌ಸಿ, ಎಸ್‌ಟಿ, ಒಬಿಸಿ ಸದಸ್ಯರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮತ್ತು ಅಂಗವಿಕಲರ ರಕ್ಷಣೆಗೆ ಈ ನಿಯಮಗಳು ವಿಶೇಷ ಒತ್ತು ನೀಡುತ್ತವೆ.

ತಾರತಮ್ಯಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು, ದಾಖಲಿಸಲು ಮತ್ತು ಪರಿಹರಿಸಲು ಉನ್ನತ ಶಿಕ್ಷಣ ಸಂಸ್ಥೆಗಳು ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಅಗತ್ಯ. ನಿರಂತರ ಮೇಲ್ವಿಚಾರಣೆ ಮತ್ತು ಆಂತರಿಕ ವರದಿ ಮಾಡುವ ವ್ಯವಸ್ಥೆ ಕಡ್ಡಾಯವಾಗಿದೆ. ಈ ನಿಯಮಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಕಾರ್ಯಕ್ರಮಗಳನ್ನು ತಿರಸ್ಕರಿಸುವುದು, ಯುಜಿಸಿ ಅನುದಾನ ತಡೆಹಿಡಿಯುವುದು ಅಥವಾ ಸಾಂಸ್ಥಿಕ ಮಾನ್ಯತೆಯನ್ನು ಹಿಂಪಡೆಯುವುದು ಸೇರಿದಂತೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ವಿವಾದವೇಕೆ? ಹೊಸ ನಿಯಮಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯಕ್ಕೆ ಕಾರಣವಾಗಬಹುದು ಮತ್ತು ಕಿರುಕುಳ ನೀಡುವವರು ಅವರೇ ಎಂಬ ಭಾವನೆಯನ್ನು ಉಂಟುಮಾಡಬಹುದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಸುಳ್ಳು ದೂರುಗಳು ಅಥವಾ ದುರುದ್ದೇಶಪೂರಿತ ದೂರುಗಳನ್ನು ನೀಡುವ ಆರೋಪಿಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಪ್ರಸ್ತಾಪಿಸದಿರುವುದನ್ನು ಅವರು ಪ್ರಶ್ನಿಸುತ್ತಿದ್ದಾರೆ. ಸಮಿತಿಯ ವರದಿಯ ಮೇಲೆ ಮೇಲ್ಮನವಿ ಸಲ್ಲಿಸಲು ಆರೋಪಿಗೆ 30 ದಿನಗಳ ಕಾಲಾವಕಾಶ ಮತ್ತು ಮೇಲ್ಮನವಿಯ ಮೇಲೆ ನಿರ್ಧಾರ ತೆಗೆದುಕೊಳ್ಳಲು ಓಂಬುಡ್ಸ್‌ಮನ್‌ಗೆ (Ombudsman) ಇನ್ನೂ 30 ದಿನಗಳ ಸಮಯ ನೀಡಿದ್ದರೂ, ದೂರು ಸುಳ್ಳು ಎಂದು ಸಾಬೀತಾದರೆ ಆಗುವ ಶಿಕ್ಷಾರ್ಹ ಪರಿಣಾಮಗಳೇನು ಎಂಬುದನ್ನು ಹೇಳದಿರುವುದನ್ನು ಟೀಕಿಸಲಾಗುತ್ತಿದೆ.

ರಾಜಕೀಯ ಗದ್ದಲ ಯುಜಿಸಿ ನಿಯಮಗಳು ವಿದ್ಯಾರ್ಥಿ ವಲಯವನ್ನಷ್ಟೇ ಅಲ್ಲದೆ ರಾಜಕೀಯ ನಾಯಕರಲ್ಲೂ ಪ್ರತಿರೋಧವನ್ನು ಹುಟ್ಟುಹಾಕಿದೆ. ಉತ್ತರ ಪ್ರದೇಶದ ಹಿರಿಯ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ಮತ್ತು ನೋಯ್ಡಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ರಾಜು ಪಂಡಿತ್ ಅವರು ಹೊಸ ನೀತಿಯನ್ನು ತಾರತಮ್ಯದಿಂದ ಕೂಡಿದೆ ಎಂದು ಬಣ್ಣಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿ ಸಲೋನ್ (ರಾಯ್‌ಬರೇಲಿ) ಬಿಜೆಪಿ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ಶ್ಯಾಮ್ ಸುಂದರ್ ತ್ರಿಪಾಠಿ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಯುಜಿಸಿ ಹೊಸ ನಿಯಮಗಳನ್ನು ವಿರೋಧಿಸಿ ತಾನು ರಾಜೀನಾಮೆ ನೀಡಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಯುಪಿಯಲ್ಲಿ ಬಿಜೆಪಿಯ ಹಲವು ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದ ಹಲವು ಕಡೆಗಳಲ್ಲಿ ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಯುಜಿಸಿ ಕಚೇರಿ ಎದುರು ವಿದ್ಯಾರ್ಥಿ ಸಂಘಟನೆಗಳ ನಾಯಕರು ಪ್ರತಿಭಟನೆ ನಡೆಸಿದರು. ಯುಜಿಸಿ ನಿಯಮಗಳನ್ನು ಪರಿಶೀಲಿಸಿ ಅವುಗಳ ಜಾರಿಗೆ ತಡೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಕೂಡ ದಾಖಲಾಗಿದೆ. ಇನ್ನೊಂದೆಡೆ, ನಿಯಮಗಳು ದುರುಪಯೋಗವಾಗದಂತೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page