Wednesday, January 28, 2026

ಸತ್ಯ | ನ್ಯಾಯ |ಧರ್ಮ

ಟ್ರಯಲ್ ರೂಮಿನಲ್ಲಿ ಮಹಿಳೆಯ ಫೋಟೋಗೆ ಯತ್ನ: ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಿರಾಕರಣೆ

ಇಂತಹ ಘಟನೆಗಳನ್ನು ಹಗುರವಾಗಿ ಪರಿಗಣಿಸಿದರೆ ಮುಂದೆ ಯಾವುದೇ ಮಹಿಳೆಯೂ ಸುರಕ್ಷಿತವಾಗಿರುವುದಿಲ್ಲ: ನ್ಯಾಯಮೂರ್ತಿ ನಾಗಪ್ರಸನ್ನ

ಜವಳಿ ಅಂಗಡಿಯ ಟ್ರಯಲ್ ರೂಮಿನಲ್ಲಿ ಮಹಿಳೆಯೊಬ್ಬರು ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಅವರ ಖಾಸಗಿ ಫೋಟೋ ತೆಗೆಯಲು ಪ್ರಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಈ ರೀತಿಯ ಘಟನೆಗಳನ್ನು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಪ್ರಕರಣಗಳನ್ನು ಹಗುರವಾಗಿ ನೋಡಿದರೆ, ಯಾವುದೇ ಮಹಿಳೆಯೂ ಸುರಕ್ಷಿತವಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮೌಖಿಕವಾಗಿ ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದರು.

“ಮಹಿಳೆ ಟ್ರಯಲ್ ರೂಮಿಗೆ ಹೋಗುತ್ತಾಳೆ, ನೀವು ಪರದೆಗಳ ಮೂಲಕ ಫೋಟೋ ತೆಗೆದುಕೊಳ್ಳುತ್ತೀರಿ. ಹೀಗೆ ನಡೆದರೆ ಯಾವ ಬಟ್ಟೆ ಅಂಗಡಿಯು ಮಹಿಳೆಗೆ ಸುರಕ್ಷಿತವಾಗಿರಲು ಸಾಧ್ಯ? ಇದು ಲೈಂಗಿಕ ದೌರ್ಜನ್ಯದ ಪ್ರಕರಣ. ಇಂತಹ ಆರೋಪಗಳನ್ನು ನಾವು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಟ್ರಯಲ್ ರೂಮಿನಲ್ಲಿ ಕ್ಯಾಮೆರಾ ಇಟ್ಟುಕೊಂಡಿದ್ದೀರಿ ಎಂಬ ಆರೋಪ ಬಂದರೂ ಸಹ, ಅದು ಗಂಭೀರ ವಿಷಯ” ಎಂದು ನ್ಯಾಯಮೂರ್ತಿಗಳು ಹೇಳಿದರು.

ಈ ಪ್ರಕರಣವು 2024ರಲ್ಲಿ ನಡೆದ ಘಟನೆಯಾಗಿದೆ. 28 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನ ಜಯನಗರದಲ್ಲಿರುವ ಜವಳಿ ಅಂಗಡಿಗೆ ಬಟ್ಟೆ ಖರೀದಿಸಲು ತೆರಳಿದ್ದಾಗ, ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ವಿರುದ್ಧ ಆರೋಪ ಹೊರಿಸಲಾಗಿದೆ. ಮಹಿಳೆ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡು ಟ್ರಯಲ್ ರೂಮಿಗೆ ಪ್ರವೇಶಿಸಿದಾಗ, ಬಾಗಿಲಿನಲ್ಲಿ ಸಣ್ಣ ಅಂತರವಿರುವುದನ್ನು ಗಮನಿಸಿದ್ದಾಳೆ. ತನಿಖೆಯ ವೇಳೆ, ಆ ಅಂತರದ ಮೂಲಕ ಆರೋಪಿಯು ಮಹಿಳೆ ಬಟ್ಟೆ ಬದಲಾಯಿಸುತ್ತಿದ್ದಾಗ ಆಕೆಯ ಖಾಸಗಿ ಫೋಟೋಗಳನ್ನು ತೆಗೆದುಕೊಳ್ಳಲು ಯತ್ನಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ, 2023 (ಬಿಎನ್‌ಎಸ್) ನ ಸೆಕ್ಷನ್ 77ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣವು ಬೆಂಗಳೂರಿನ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ.

ಎಫ್‌ಐಆರ್ ರದ್ದುಗೊಳಿಸುವಂತೆ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಆರೋಪಿ ಪರ ವಕೀಲರು, ತಮ್ಮ ಕಕ್ಷಿದಾರನ ವಿರುದ್ಧದ ಆರೋಪಗಳನ್ನು ನಿರಾಕರಿಸಿ, ತನಿಖಾ ದಾಖಲೆಗಳು ಹಾಗೂ ಪಂಚನಾಮವನ್ನು ಪರಿಗಣಿಸುವಂತೆ ನ್ಯಾಯಾಲಯವನ್ನು ವಿನಂತಿಸಿದರು. ಘಟನೆ ನಡೆದ ಸಂದರ್ಭದಲ್ಲಿ ಆರೋಪಿಗೆ 19 ವರ್ಷ ವಯಸ್ಸಾಗಿತ್ತು ಎಂದೂ ಅವರು ವಾದಿಸಿದರು.

ಆದರೆ, ವಿಚಾರಣೆಗೆ ಮುನ್ನದ ಹಂತದಲ್ಲೇ ಎಫ್‌ಐಆರ್ ರದ್ದುಗೊಳಿಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಲಿಲ್ಲ.

“ಆರೋಪಪಟ್ಟಿ ಸಲ್ಲಿಸಿರುವ ಹಂತದಲ್ಲಿ ನೀವು ಖುಲಾಸೆಗೆ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಆದರೆ ಸೆಕ್ಷನ್ 482 CrPC (528 BNSS) ಅಡಿಯಲ್ಲಿ ಎಫ್‌ಐಆರ್ ರದ್ದುಗೊಳಿಸಲು ನಾನು ಆಸ್ಪದ ನೀಡುವುದಿಲ್ಲ. ಇಂತಹ ಕೃತ್ಯಗಳಿಗೆ ಪಾಠ ಕಲಿಸಬೇಕು” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page