Saturday, January 31, 2026

ಸತ್ಯ | ನ್ಯಾಯ |ಧರ್ಮ

ದ್ವೇಷ ಭಾಷಣಕಾರರ ಜೊತೆ ವೇದಿಕೆ ಹಂಚಿಕೊಂಡ ದಕ್ಷಿಣ ಕನ್ನಡ ಡಿಸಿ ವಿರುದ್ಧ ಕ್ರಮಕ್ಕೆ ಆಗ್ರಹ

ಕೋಮುವಾದಿಗಳು ಮತ್ತು ದ್ವೇಷಭಾಷಣ ಆರೋಪಿಗಳಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ ಎಚ್.ವಿ ಅವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಮೂಡಬಿದ್ರೆಯಲ್ಲಿ ನಡೆಯುತ್ತಿರುವ ಕಂಬಳ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾಧಿಕಾರಿ ದರ್ಶನ ಎಚ್.ವಿ ಅವರ ಹೆಸರುಗಳು ಉಲ್ಲೇಖವಾಗಿದ್ದವು. ಆದರೆ, ಕಾರ್ಯಕ್ರಮದ ಆಯೋಜಕರಲ್ಲಿ 17 ದ್ವೇಷಭಾಷಣ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮತ್ತು ಜಾಮೀನಿನ ಮೇಲೆ ಹೊರಗಿರುವ ಕಲ್ಲಡ್ಕ ಪ್ರಭಾಕರ ಭಟ್ ಕೂಡಾ ಸೇರಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿದೆ.

ಅಲ್ಲದೆ, ದ್ವೇಷಭಾಷಣ ಆರೋಪಗಳನ್ನು ಎದುರಿಸುತ್ತಿರುವ ಶ್ರೀಕಾಂತ್ ಶೆಟ್ಟಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ದ್ವೇಷಭಾಷಣ ಆರೋಪಿಗಳು ಆಯೋಜಕರಾಗಿರುವ ಮತ್ತು ಭಾಷಣ ಮಾಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಉನ್ನತ ಅಧಿಕಾರಿಗಳು ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಹೆಸರು ಇದ್ದರೂ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ದ್ವೇಷಭಾಷಣ ಮತ್ತು ಕೋಮುಗಲಭೆಗಳಿಗೆ ಕಾರಣರಾಗುವ ಆರೋಪಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅವರು ನೀಡಿದ್ದಾರೆ ಎಂದು ನಾಗರಿಕ ವಲಯದಲ್ಲಿ ಪ್ರಶಂಸಿಸಲಾಗಿದೆ.

ಇದರ ವಿರುದ್ಧವಾಗಿ, ಕೋಮುವಾದಿಗಳು ಹಾಗೂ ದ್ವೇಷಭಾಷಣ ಆರೋಪಿಗಳು ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಹಾಜರಾಗಿರುವುದು ಆಡಳಿತಾತ್ಮಕ ನಡವಳಿಕೆಯ ದೃಷ್ಟಿಯಿಂದ ತಪ್ಪಾಗಿದೆ ಎಂದು ಟೀಕೆ ವ್ಯಕ್ತವಾಗಿದೆ. ಈ ನಡೆ All India Services (Conduct) Rules, 1968ರ 3(1), 3(1A), 5, 7 ಮತ್ತು 13ರ ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಲಾಗಿದೆ.

ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಮಂಗಳೂರಿನ ಕಾನೂನು ಸುವ್ಯವಸ್ಥೆಗಾಗಿ ಶ್ರಮಿಸುತ್ತಿರುವ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಾಮಾಣಿಕ ಪ್ರಯತ್ನಗಳಿಗೆ ಧಕ್ಕೆಯಾಗಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page