Wednesday, February 4, 2026

ಸತ್ಯ | ನ್ಯಾಯ |ಧರ್ಮ

ಕ್ರಿಕೆಟ್‌ ಸಂಸ್ಥೆ ಆಡಳಿತ ನಡೆಸಲು ಹೊರಡುವವರಿಗೆ ಕನಿಷ್ಠ ಬ್ಯಾಟ್‌ ಹಿಡಿಯುವುದು ಹೇಗೆ ಎನ್ನುವುದನ್ನಾದರೂ ತಿಳಿದಿರಬೇಕು: ಸುಪ್ರೀಂ ಕೋರ್ಟ್

ದೆಹಲಿ: ಕ್ರಿಕೆಟ್ ಆಟದ ಬಗ್ಗೆ ಅರಿವಿಲ್ಲದವರು ಅಥವಾ ಬ್ಯಾಟ್ ಹಿಡಿಯಲೂ ಬಾರದವರು ಕ್ರಿಕೆಟ್ ಸಂಸ್ಥೆಗಳ ಆಡಳಿತ ನಡೆಸಬಾರದು; ಬದಲಿಗೆ ಕ್ರೀಡೆಯಲ್ಲಿ ಪಳಗಿದ ಮಾಜಿ ಆಟಗಾರರೇ ಚುಕ್ಕಾಣಿ ಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾ. ವಿಪುಲ್ ಎಂ. ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠವು ಈ ಕಿವಿಮಾತು ಹೇಳಿದೆ.

ಪ್ರಕರಣದ ಹಿನ್ನೆಲೆ:

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಚುನಾವಣೆಯಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಮತ್ತು ಮತದಾರರ ಪಟ್ಟಿಯಲ್ಲಿ ಏಕಾಏಕಿ ಹೊಸ ಸದಸ್ಯರನ್ನು ಸೇರಿಸಲಾಗಿದೆ ಎಂದು ಆರೋಪಿಸಿ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಮುಖಂಡ ಕೇದಾರ್ ಜಾಧವ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್, ಜನವರಿ 6ರಂದು ನಡೆಯಬೇಕಿದ್ದ ಚುನಾವಣೆಗೆ ತಡೆ ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎಂಸಿಎ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ನ್ಯಾಯಾಲಯದ ಚಾಟಿ:

ವಿಚಾರಣೆಯ ವೇಳೆ ಎಂಸಿಎ ನಡೆಯನ್ನು ಪ್ರಶ್ನಿಸಿದ ಸಿಜೆಐ, “1986ರಿಂದ 2023ರವರೆಗೆ ಎಂಸಿಎಯಲ್ಲಿ ಕೇವಲ 164 ಸದಸ್ಯರಿದ್ದರು. ಆದರೆ ಈಗ ದಿಢೀರಣೆ ಸದಸ್ಯರ ಸಂಖ್ಯೆ ಏರಿಕೆಯಾಗಲು ಕಾರಣವೇನು?” ಎಂದು ಕೇಳಿದರು.

ಒಂದು ವೇಳೆ ಸದಸ್ಯ ಬಲವನ್ನು 300ಕ್ಕೆ ಹೆಚ್ಚಿಸುವುದೇ ನಿಮ್ಮ ಉದ್ದೇಶವಾಗಿದ್ದರೆ, ಆ ಸ್ಥಾನಗಳನ್ನು ಕ್ರಿಕೆಟ್‌ನಲ್ಲಿ ಸಾಧನೆಗೈದವರಿಗೆ ಹಾಗೂ ಮಾಜಿ ಅಂತಾರಾಷ್ಟ್ರೀಯ ಆಟಗಾರರಿಗೆ ಮೀಸಲಿಡಿ. ಆಟದ ಗಂಧಗಾಳಿ ಗೊತ್ತಿಲ್ಲದವರನ್ನು ಸದಸ್ಯರನ್ನಾಗಿ ಮಾಡಬೇಡಿ ಎಂದು ನ್ಯಾಯಾಲಯ ಸಲಹೆ ನೀಡಿದೆ.

ಹಾಕಿಯ ಉದಾಹರಣೆ:

“ಕ್ರಿಕೆಟ್ ಕ್ರೀಡೆ ಉಳಿದಿರುವುದು ಆಟಗಾರರಿಂದಲೇ ಹೊರತು ಪದಾಧಿಕಾರಿಗಳಿಂದಲ್ಲ. ಹಾಕಿ ಕ್ರೀಡೆಯು ತನ್ನ ಘನತೆಯನ್ನು ಉಳಿಸಿಕೊಂಡಿದೆ ಎಂದರೆ, ಅಲ್ಲಿ ಆಟದ ಅನುಭವ ಇರುವವರೇ ಆಡಳಿತದಲ್ಲಿ ತೊಡಗಿಸಿಕೊಂಡಿರುವುದು ಕಾರಣ,” ಎಂದು ಪೀಠವು ಅಭಿಪ್ರಾಯಪಟ್ಟಿತು.

ಅಂತಿಮವಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಎಂಸಿಎಗೆ ಅನುಮತಿ ನೀಡಿದ ಪೀಠವು, ಬುಧವಾರ ಬಾಂಬೆ ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯಲ್ಲೇ ತಮ್ಮ ವಾದವನ್ನು ಮಂಡಿಸುವಂತೆ ಸೂಚನೆ ನೀಡಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page