Wednesday, February 4, 2026

ಸತ್ಯ | ನ್ಯಾಯ |ಧರ್ಮ

ಸಿಎಲ್–7 ಬಾರ್ ಲೈಸೆನ್ಸ್‌ಗೆ ₹60 ಲಕ್ಷ ಲಂಚ ಬೇಡಿಕೆ ಆರೋಪ: ಅಬಕಾರಿ ಅಧಿಕಾರಿ ನಾಗಶಯನ ಅಮಾನತು

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಸಿಎಲ್–7 ಬಾರ್ ತೆರೆಯಲು ಲೈಸೆನ್ಸ್ ನೀಡಲು ₹60 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿ ನಾಗಶಯನ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

ಸೋಮನಹಳ್ಳಿ ಗ್ರಾಮದ ಸುಂದರ್ ಅವರು ಹೊಸದಾಗಿ ಸಿಎಲ್–7 ಬಾರ್ ತೆರೆಯಲು ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅಬಕಾರಿ ಅಧಿಕಾರಿಗಳು ಸಣ್ಣ ಪುಟ್ಟ ನೆಪಗಳನ್ನು ಹೇಳಿಕೊಂಡು ಪದೇ ಪದೇ ಅರ್ಜಿಯನ್ನು ವಜಾಗೊಳಿಸುತ್ತಿದ್ದರು. ನ್ಯಾಯಾಲಯದಿಂದ ಲೈಸೆನ್ಸ್ ನೀಡುವಂತೆ ಆದೇಶ ಇದ್ದರೂ ಕೂಡ ಲೈಸೆನ್ಸ್ ನೀಡಲಾಗಿರಲಿಲ್ಲ ಎಂದು ಆರೋಪಿಸಲಾಗಿದೆ.

ಲೈಸೆನ್ಸ್ ನೀಡಲು ನಾಗಶಯನ ಅವರು ₹60 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ, ಸುಂದರ್ ಅವರು ಆಡಿಯೋ ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಸುಂದರ್ ಅವರ ಪ್ರಕರಣವು ವಿಧಾನಸಭೆಯಲ್ಲಿಯೂ ಚರ್ಚೆಗೆ ಬಂದಿತ್ತು.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು, ಆರೋಪ ಎದುರಿಸುತ್ತಿರುವ ಅಬಕಾರಿ ಅಧಿಕಾರಿ ನಾಗಶಯನ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page