Saturday, February 7, 2026

ಸತ್ಯ | ನ್ಯಾಯ |ಧರ್ಮ

ಆನ್‌ಲೈನ್‌ನಲ್ಲಿ ಕಾಣೆಯಾದ ಬಾಲಕಿಯರ ಬಗ್ಗೆ ಭೀತಿ ಸೃಷ್ಟಿ: ಇದರ ಹಿಂದೆ ‘ಪೇಯ್ಡ್ ಪ್ರಮೋಷನ್’ ಇದೆ ಎಂದ ದೆಹಲಿ ಪೊಲೀಸ್

ದೆಹಲಿ: ಹಣದಾಸೆಗಾಗಿ ಜನರಲ್ಲಿ ಭೀತಿ ಹುಟ್ಟಿಸುವುದನ್ನು ಸಹಿಸುವುದಿಲ್ಲ ಎಂದು ದೆಹಲಿ ಪೊಲೀಸರು ಎಚ್ಚರಿಸಿದ್ದಾರೆ. ಬಾಲಕಿಯರು ಕಾಣೆಯಾಗುತ್ತಿರುವ ವರದಿಗಳ ಬಗ್ಗೆ ‘ಪೇಯ್ಡ್ ಪ್ರಮೋಷನ್’ (ಹಣ ಕೊಟ್ಟು ಮಾಡುವ ಪ್ರಚಾರ) ಮೂಲಕ ಅನಗತ್ಯ ಪ್ರಚಾರ ಅಥವಾ ‘ಹೈಪ್’ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಪಿಟಿಐಗೆ ಲಭ್ಯವಾದ ದೆಹಲಿ ಪೊಲೀಸರ ಅಧಿಕೃತ ಅಂಕಿಅಂಶಗಳ ಪ್ರಕಾರ, ಜನವರಿ 1 ಮತ್ತು 15 ರ ನಡುವೆ ಒಟ್ಟು 807 ಜನರು ಕಾಣೆಯಾಗಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 54 ಜನರು ಕಾಣೆಯಾಗಿದ್ದಾರೆ. ಇವರಲ್ಲಿ 509 ಮಂದಿ ಮಹಿಳೆಯರು ಮತ್ತು ಬಾಲಕಿಯರಾಗಿದ್ದರೆ, 298 ಮಂದಿ ಪುರುಷರಾಗಿದ್ದಾರೆ. ಒಟ್ಟು ಕಾಣೆಯಾದವರಲ್ಲಿ 191 ಮಂದಿ ಅಪ್ರಾಪ್ತರಾಗಿದ್ದರೆ, 616 ಮಂದಿ ವಯಸ್ಕರು ಎಂದು ವರದಿಯಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ದೆಹಲಿ ಪೊಲೀಸರು, “ಕೆಲವು ಸುಳಿವುಗಳನ್ನು ಆಧರಿಸಿ ತನಿಖೆ ನಡೆಸಿದಾಗ, ದೆಹಲಿಯಲ್ಲಿ ಬಾಲಕಿಯರು ಕಾಣೆಯಾಗುತ್ತಿರುವ ಬಗ್ಗೆ ನಡೆಯುತ್ತಿರುವ ಅಪಪ್ರಚಾರದ ಹಿಂದೆ ‘ಪೇಯ್ಡ್ ಪ್ರಮೋಷನ್’ ಕೈವಾಡವಿರುವುದು ಕಂಡುಬಂದಿದೆ. ಹಣದಾಸೆಗಾಗಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವುದನ್ನು ಸಹಿಸಲಾಗುವುದಿಲ್ಲ. ಅಂತಹ ವ್ಯಕ್ತಿಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ,” ಎಂದು ಹೇಳಿದ್ದಾರೆ.

ಕಳೆದ ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಪ್ರಸ್ತುತ ಕಾಣೆಯಾದವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ “ಸಾರ್ವಜನಿಕರು ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ” ಎಂದು ಗುರುವಾರವಷ್ಟೇ ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page