Thursday, February 12, 2026

ಸತ್ಯ | ನ್ಯಾಯ |ಧರ್ಮ

ಲೈಂಗಿಕ ದೌರ್ಜನ್ಯ ಪ್ರಕರಣ: ನಟ ಸಾಧು ಕೋಕಿಲ, ಮಂಡ್ಯ ರಮೇಶ್ ವಿರುದ್ಧದ ಕೇಸ್ ರದ್ದು, ಹೈಕೋರ್ಟ್‌ನಿಂದ ಬಿಗ್ ರಿಲೀಫ್

ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ನಟ ಸಾಧು ಕೋಕಿಲ ಹಾಗೂ ನಟ ಮಂಡ್ಯ ರಮೇಶ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಇಬ್ಬರು ನಟರಿಗೆ ನ್ಯಾಯಾಲಯದಿಂದ ದೊಡ್ಡ ಬಿಡುಗಡೆ ಸಿಕ್ಕಿದೆ.

ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಉಮಾ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಮೈಸೂರಿನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು, ಮಸಾಜ್ ಮಾಡಿಸಿಕೊಳ್ಳುವ ವೇಳೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಈ ದೂರಿನ ಆಧಾರದಲ್ಲಿ ಮೈಸೂರಿನ ಸರಸ್ವತಿಪುರಂ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸುವಂತೆ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ವಾದ ಮಂಡಿಸಿ, ಎಫ್‌ಐಆರ್‌ನಲ್ಲಿ ಅರ್ಜಿದಾರರ ಹೆಸರು ಸ್ಪಷ್ಟವಾಗಿ ಉಲ್ಲೇಖವಾಗಿಲ್ಲ ಹಾಗೂ ಆರೋಪವನ್ನು ಬೆಂಬಲಿಸುವ ಯಾವುದೇ ದೃಢ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇರುವುದನ್ನು ಪರಿಗಣಿಸಿ, ಆರೋಪಪಟ್ಟಿಯನ್ನು ರದ್ದುಗೊಳಿಸಿ ಆದೇಶ ನೀಡಿತು. ಇದರೊಂದಿಗೆ ನಟ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್ ವಿರುದ್ಧದ ಪ್ರಕರಣ ಅಂತ್ಯಗೊಂಡಿದ್ದು, ಇಬ್ಬರು ನಟರಿಗೆ ಹೈಕೋರ್ಟ್‌ನಿಂದ ಮಹತ್ವದ ರಿಲೀಫ್ ಲಭಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page