Friday, February 13, 2026

ಸತ್ಯ | ನ್ಯಾಯ |ಧರ್ಮ

ಮನೆಹಾಳು ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊ*ಲೆಗೈದ ಮಗಳು

ತುಮಕೂರು : ಕಲ್ಪತರು ನಾಡು ತುಮಕೂರು (Tumakuru) ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಹೆತ್ತ ಮಗಳಿಂದಲೇ (Daughter) ತಾಯಿ (Mother) ಬರ್ಬರವಾಗಿ ಕೊ*ಲೆಯಾಗಿರುವ ಅಮಾನವೀಯ ಘಟನೆ ತಾಲೂಕಿನ ಅನುಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಪುಪ್ಪವತಿ (55) ಎಂದು ಗುರುತಿಸಲಾಗಿದೆ. ಈಕೆಯನ್ನು ಮಗಳು ಸುಚಿತ್ರಾ (33) ಕೊಲೆ ಮಾಡಿದ್ದಾಳೆ.

ಸುಚಿತ್ರಾ ತುಮಕೂರು ನಗರದ ಶ್ರೀನಗರದಲ್ಲಿ ತನ್ನ ಗಂಡನೊಂದಿಗೆ ವಾಸವಿದ್ದು, ಕೆಲ ದಿನಗಳ ಹಿಂದೆ ಅನುಪನಹಳ್ಳಿ ಗ್ರಾಮದಲ್ಲಿರುವ ತಾಯಿಯ ಮನೆಗೆ ಬಂದಿದ್ದಳು ಎನ್ನಲಾಗಿದೆ.

ಘಟನೆ ನಡೆದ ದಿನ ರಾತ್ರಿ, ಪುಪ್ಪವತಿ ಮನೆಯೊಳಗೆ ನಿದ್ರಿಸುತ್ತಿದ್ದ ವೇಳೆ ಸುಚಿತ್ರಾ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ತಾಯಿ ಮೃತಪಟ್ಟ ನಂತರ ಈ ಸಾವನ್ನು ಅಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದಾಳೆ. ಆದರೆ ಮೃತದೇಹದ ಸ್ಥಿತಿ ಹಾಗೂ ಸಂದರ್ಭಗಳನ್ನು ಗಮನಿಸಿದ ಗ್ರಾಮಸ್ಥರು ಇದು ಅಸಹಜ ಸಾವು ಅಲ್ಲ, ಕೊಲೆ ಆಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದರು.

ಕೂಡಲೇ ಕ್ಯಾತಸಂದ್ರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಸುಚಿತ್ರಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ ಸುಚಿತ್ರಾ ತಾನೇ ತಾಯಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದರೊಂದಿಗೆ ಪ್ರಕರಣದ ಭೀಕರ ಸತ್ಯ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ಒಂದೂವರೆ ವರ್ಷಗಳ ಹಿಂದೆ ಸುಚಿತ್ರಾಳ ತಂದೆ ನಿಧನರಾಗಿದ್ದರು. ಈ ಸಾವಿಗೆ ತಾಯಿ ಪುಪ್ಪವತಿ ಕಾರಣ ಎನ್ನುವ ಶಂಕೆಯನ್ನು ಜ್ಯೋತಿಷಿ ವ್ಯಕ್ತಪಡಿಸಿ ಸುಚಿತ್ರಾಗೆ ಹೇಳಿದ್ದಾನೆ. ತಂದೆ ಸಾವಿಗೆ ನಿಮ್ಮ ತಾಯಿ ಮಾಟ ಮಾಡಿಸಿದ್ದಾಳೆ ಎಂಬ ಜ್ಯೋತಿಷಿಯ ಮಾತುಗಳನ್ನು ಸುಚಿತ್ರಾ ನಂಬಿದ್ದಾಳೆ. ಇದೇ ಕಾರಣದಿಂದ ತಾಯಿಯ ಮೇಲಿನ ದ್ವೇಷ ಬೆಳೆಸಿಕೊಂಡು ಕೊಲೆ ಮಾಡಲು ನಿರ್ಧರಿಸಿದ್ದಾಳೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಂಧಶ್ರದ್ಧೆ ಹಾಗೂ ಜ್ಯೋತಿಷ್ಯದ ಮಾತುಗಳಿಗೆ ಬಲಿಯಾಗಿ ನಡೆದ ಈ ಭೀಕರ ಕೊಲೆ ಪ್ರಕರಣವು ಸಮಾಜವನ್ನು ಕಲುಷಿತಗೊಳಿಸುವ ಘಟನೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page