Friday, February 13, 2026

ಸತ್ಯ | ನ್ಯಾಯ |ಧರ್ಮ

ತಮಿಳುನಾಡು ಮಹಿಳೆಯರ ಖಾತೆಗೆ ತಲಾ 5,000 ರೂ. ಜಮಾ: ಸಿಎಂ ಸ್ಟಾಲಿನ್ ಮಾಸ್ಟರ್ ಸ್ಟ್ರೋಕ್

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ವಿಧಾನಸಭಾ ಚುನಾವಣೆಗೆ ಮುನ್ನ ಮಹಿಳೆಯರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದು, ರಾಜ್ಯದ ಸುಮಾರು 1.31 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಇಂದು ತಲಾ 5,000 ರೂಪಾಯಿಗಳನ್ನು ಜಮಾ ಮಾಡಿರುವುದಾಗಿ ತಿಳಿಸಿದ್ದಾರೆ. ‘ಕಲೈಞರ್ ಮಗಲಿರ್ ಉರಿಮೈ ತೋಗೈ’ (KMUT) ಯೋಜನೆಯಡಿ ಈ ಮೊತ್ತವನ್ನು ವರ್ಗಾಯಿಸಲಾಗಿದ್ದು, ಒಂದೇ ದಿನದಲ್ಲಿ ತಮಿಳುನಾಡು ಸರ್ಕಾರ ಸುಮಾರು 6,550 ಕೋಟಿ ರೂಪಾಯಿಗಳನ್ನು ವಿತರಿಸಿದಂತಾಗಿದೆ.

ಈ ಯೋಜನೆಯಡಿ ಕಳೆದ ಮೂರು ತಿಂಗಳ ಬಾಕಿ ಮೊತ್ತ 3,000 ರೂಪಾಯಿಗಳು ಹಾಗೂ ವಿಶೇಷ ಬೇಸಿಗೆ ಪರಿಹಾರವಾಗಿ (One-time Summer Relief) ಹೆಚ್ಚುವರಿ 2,000 ರೂಪಾಯಿಗಳನ್ನು ಸೇರಿಸಿ ಒಟ್ಟು 5,000 ರೂಪಾಯಿಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್, ಒಂದು ವೇಳೆ ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮಾಸಿಕ ಸಹಾಯಧನವನ್ನು 2,000 ರೂಪಾಯಿಗಳಿಗೆ ಏರಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಚುನಾವಣಾ ನೀತಿಸಂಹಿತೆಯ ನೆಪವೊಡ್ಡಿ ವಿರೋಧ ಪಕ್ಷಗಳು ಈ ಹಣಕಾಸಿನ ವರ್ಗಾವಣೆಯನ್ನು ತಡೆಯಲು ಪ್ರಯತ್ನಿಸಿದವು ಎಂದು ಅವರು ಆರೋಪಿಸಿದ್ದಾರೆ.

ಪ್ರಸ್ತುತ ಡಿಎಂಕೆ ಸರ್ಕಾರವು ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿಗಳನ್ನು ನೀಡುತ್ತಿದೆ. ಕುತೂಹಲಕಾರಿ ವಿಷಯವೆಂದರೆ, ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಅವರು ಕೂಡ ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 2,000 ರೂಪಾಯಿ ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ. ಚುನಾವಣಾ ಕಣ ರಂಗೇರುತ್ತಿರುವ ಈ ಹೊತ್ತಿನಲ್ಲಿ ಸ್ಟಾಲಿನ್ ಅವರ ಈ ನಡೆ ಅತ್ಯಂತ ಮಹತ್ವದ್ದಾಗಿ ಕಂಡುಬರುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page